‘ರಾಷ್ಟ್ರ ಧ್ವಜ ಕೊಂಡುಕೊಳ್ಳಲು ಜಮ್ಮು - ಕಾಶ್ಮೀರದಲ್ಲಿ ಒತ್ತಾಯ’
ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಾಡಲೆಂಬ ಅಭಿಯಾನವೂ ನಡೆಯುತ್ತಿದೆ. ಆದರೆ, ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಮಾತ್ರ ತಿರಂಗ ಧ್ವಜವನ್ನು ಕೊಂಡುಕೊಳ್ಳುವಂತೆ ಅಲ್ಲಿನ ಆಡಳಿತವೇ ಜನರನ್ನು ಒತ್ತಾಯಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ದೇಶದೆಲ್ಲೆಡೆ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಬಹುತೇಕ ಜನರು ಉತ್ಸಾಹದಿಂದ ಇದ್ದಾರೆ. ನಮ್ಮ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಾಡಲಿ ಎಂದು ಹಲವರು ರಾಷ್ಟ್ರಧ್ವಜವನ್ನು ಕೊಂಡುಕೊಳ್ಳುತ್ತಿದ್ದಾರೆ. ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಾಡಲೆಂಬ ಅಭಿಯಾನವೂ ನಡೆಯುತ್ತಿದೆ. ಆದರೆ, ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಮಾತ್ರ ತಿರಂಗ ಧ್ವಜವನ್ನು ಕೊಂಡುಕೊಳ್ಳುವಂತೆ ಅಲ್ಲಿನ ಆಡಳಿತವೇ ಜನರನ್ನು ಒತ್ತಾಯಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಹೌದು, ಜಮ್ಮು ಕಾಶ್ಮೀರ ಆಡಳಿತ ತ್ರಿವರ್ಣ ಧ್ವಜವನ್ನು ಕೊಂಡುಕೊಳ್ಳುವಂತೆ ಜನತೆಗೆ ಒತ್ತಾಯ ಮಾಡುತ್ತಿದೆ ಎಂದು ಜಮ್ಮು ಕಾಶ್ಮೀರದ ಮಾಜಿ ಸಿಎಂ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ. ಆಗಸ್ಟ್ 13 ರಿಂದ ಆಗಸ್ಟ್ 15 ರ ನಡುವೆ ದೇಶದ ನಾಗರಿಕರು ತಮ್ಮ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಾಡುವಂತೆ ಪ್ರೇರೇಪಿಸಲು ‘ಆಜಾದಿ ಕಾ ಅಮೃತ ಮಹೋತ್ಸವ’ ಎಂಬ ಅಭಿಯಾನ ನಡೆಸುತ್ತಿದೆ.
ಧ್ವಜಕ್ಕೆ 20 ರೂ. ನೀಡಿ ಎಂದು ಘೋಷಣೆ..?
ತಮ್ಮ ಆರೋಪ ಸಂಬಂಧ ಟ್ವಿಟ್ಟರ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡ ಮೆಹಬೂಬಾ ಮುಫ್ತಿ, ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬಿಜ್‌ಬೆಹಾರಾ ಪಾಲಿಕೆಯಲ್ಲಿ ಒತ್ತಾಯಿಸಲಾಗುತ್ತಿದೆ. ಪ್ರತಿ ಅಂಗಡಿಯವರೂ ಅಭಿಯಾನಕ್ಕಾಗಿ ಒಂದು ಧ್ವಜವನ್ನಾದರೂ ಕೊಂಡುಕೊಳ್ಳುವಂತೆ 20 ರೂ. ಡೆಪಾಸಿಟ್ ಮಾಡಿ ಎಂದು ಸಾರ್ವಜನಿಕವಾಗಿ ವಾಹನವೊಂದರ ಮೇಲೆ ಲೌಡ್‌ಸ್ಪೀಕರ್ ಮೂಲಕ ಘೋಷಣೆ ಮಾಡಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
‘’ವಿದ್ಯಾರ್ಥಿಗಳು, ಅಂಗಡಿಯವರಿಗೆ ಹಾಗೂ ಸಿಬ್ಬಂದಿಗೆ ರಾಷ್ಟ್ರಧ್ವಜವನ್ನು ಹಾರಿಸುವಂತೆ ಜಮ್ಮು ಕಾಶ್ಮೀರ ಆಡಳಿತ ಒತ್ತಾಯಿಸುತ್ತಿರುವ ರೀತಿ ಹೇಗಿದೆ ಎಂದರೆ ಕಾಶ್ಮೀರ ವಶಪಡಿಸಿಕೊಳ್ಳಬೇಕಾದ ಶತ್ರು ಪ್ರದೇಶ ಎನ್ನುವಂತಿದೆ’’ ಎಂದು ಮುಫ್ತಿ ಹೇಳಿದ್ದಾರೆ.
ಅಲ್ಲದೆ, ಅಭಿಯಾನದಲ್ಲಿ ಭಾಗವಹಿಸಲು ನಿರಾಕರಿಸಿದವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಸ್ಥಳೀಯರಿಗೆ ಬೆದರಿಕೆ ಹಾಕಿರುವುದಾಗಿಯೂ ಲೌಡ್‌ಸ್ಪೀಕರ್ ಮೂಲಕ ಘೋಷಿಸಲಾಗಿದೆ ಎಂದೂ ಜಮ್ಮು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಸಿಪಿಐ (ಎಂ) ನಿಂದಲೂ ಆರೋಪ
ಇನ್ನು, ಜಮ್ಮು ಕಾಶ್ಮೀರ ಮಾಜಿ ಸಿಎಂನಂತೆ ಜಮ್ಮು ಕಾಶ್ಮೀರದ ಸಿಪಿಐಎಂ ನಾಯಕ ಸಹ ಆರೋಪಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿದ ಎಂ.ವೈ. ತಾರಿಗಾಮಿ, ವ್ಯಾಪಾರಿಗಳು ಧ್ವಜ ಕೊಂಡುಕೊಳ್ಳಲು 20 ರೂ. ಹಣ ಡೆಪಾಸಿಟ್ ಮಾಡಿ ಎಂದು ಆಡಳಿತ ಘೋಷಣೆ ಮಾಡುತ್ತಿದೆ. ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಅಭಿಯಾನದಡಿ ಧ್ವಜ ಹಾರಾಡಿಸುವಂತೆ ಒತ್ತಾಯಿಸಲಾಗುತ್ತಿದೆ.
ಪ್ರತಿ ಮನೆಯಲ್ಲೂ ತಿರಂಗಾ ಅಭಿಯಾನ ಸ್ವ ಇಚ್ಛೆಯಿಂದ ಕೂಡಿದ್ದು ಎಂದು ಕಾಶ್ಮೀರದ ವಿಭಾಗೀಯ ಆಯುಕ್ತ ಹೇಳಿದ್ದಾರೆ. ಆದರೆ, ಇನ್ನೊಂದೆಡೆ, ಸ್ಥಳೀಯ ಆಡಳಿತ ಲೌಡ್ ಸ್ಪೀಕರ್‌ನಲ್ಲಿ ಘೋಷಣೆ ಮಾಡುತ್ತಿದ್ದು, ವ್ಯಾಪಾರಿಗಳಿಗೆ ತಿರಂಗ ಧ್ವಜ ಕೊಂಡುಕೊಳ್ಳಲು 20 ರೂ. ನೀಡಿ ಎಂದು ಹೇಳಲಾಗುತ್ತಿದೆ. ಅಲ್ಲದೆ, ಇದಕ್ಕೆ ಒಪ್ಪದಿದ್ದರೆ ಕ್ರಮ ಕೈಗೊಳ್ಳಬಹುದೆಂದೂ ಬೆದರಿಸಲಾಗುತ್ತಿದೆ ಎಂದು ತಾರಿಗಾಮಿ ಟ್ವೀಟ್ ಮಾಡಿದ್ದಾರೆ.
'ಹರ್ ಘರ್ ತಿರಂಗಾ ಅಭಿಯಾನವನ್ನು ಬಲಪಡಿಸಲು ನಾಗರಿಕರಿಗೆ ಮನವಿ ಮಾಡಿದ ಲೆಫ್ಟಿನೆಂಟ್ ಗವರ್ನರ್
ಕೇಂದ್ರ ಸರ್ಕಾರದ ನಿರ್ದೇಶನಗಳನ್ನು ಅನುಸರಿಸಿ, ಎಲ್ಲಾ ದೇಶವಾಸಿಗಳಿಗೆ 'ಹರ್ ಘರ್ ತಿರಂಗ' ಆಂದೋಲನಕ್ಕೆ ಸೇರಲು ಮತ್ತು ದೇಶಾದ್ಯಂತ ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಮೊದಲು ಅಭಿಯಾನವನ್ನು ಬಲಪಡಿಸಲು ಸಹಾಯ ಮಾಡಲು J&K ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಜುಲೈ 22ರಂದು, ಶುಕ್ರವಾರ ಕರೆ ನೀಡಿದ್ದರು.
ರಾಷ್ಟ್ರಧ್ವಜವು "ನಮ್ಮ ಪೂರ್ವಜರ ಹೋರಾಟ ಮತ್ತು ತ್ಯಾಗದ ಸಂಕೇತ" ಎಂದು ಹೇಳಿದ ಸಿನ್ಹಾ, ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ನಾಗರಿಕರನ್ನು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ, ಆಗಸ್ಟ್ 13 ಹಾಗೂ ಆಗಸ್ಟ್ 15 ರ ನಡುವೆ ತ್ರಿವರ್ಣ ಧ್ವಜವನ್ನು ಹಾರಿಸುವ ಅಥವಾ ಅದನ್ನು ತಮ್ಮ ಮನೆಗಳಲ್ಲಿ ಪ್ರದರ್ಶಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುವಂತೆಯೂ ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಜನರಿಗೆ ಮನವಿ ಮಾಡಿದ್ದಾರೆ.