ಭೋಪಾಲ್(ಸೆ.28)‌: ಬಿಹಾರದ ಲೌಂಗಿ ಬುಹಿಯಾನ್‌ ಎಂಬ ಬಡ ರೈತ 30 ವರ್ಷಗಳ ಕಾಲ ಏಕಾಂಗಿಯಾಗಿ 3 ಕಿ.ಮೀ ಕಾಲುವೆ ತೋಡಿ ಕರೆಗೆ ನೀರು ಹರಿಸಿದ ಪ್ರೇರಣಾದಾಯಕ ಸುದ್ದಿಯ ಬೆನ್ನಲ್ಲೇ, 250 ಮಹಿಳೆಯರು ಸತತ 18 ತಿಂಗಳ ಗುಡ್ಡ ಕೊರೆದು ಗ್ರಾಮಕ್ಕೆ ನೀರು ಹರಿಸಿದ ಸುದ್ದಿಯೊಂದು ಮಧ್ಯಪ್ರದೇಶದಿಂದ ವರದಿಯಾಗಿದೆ.

ಮಧ್ಯಪ್ರದೇಶದ ಅಂಗೋತ್ರ ಎಂಬ ಹಳ್ಳಿಯಲ್ಲಿ ನೀರಿಗೆ ಬರವಿದ್ದು, ಭಾರೀ ದೊಡ್ಡ ಗುಡ್ಡ ಇದ್ದಿದ್ದರಿಂದ ಊರಿನೊಳಗಿದ್ದ ಕೆರೆಗೆ ನೀರು ಹರಿಯುತ್ತಿರಲಿಲ್ಲ. ಇದು ಅಲ್ಲಿನ ಮಂದಿಗೆ ನೀರಿನ ಸಂಕಷ್ಟವನ್ನು ತಂಡೊಡ್ಡಿತ್ತು. ಇದಕ್ಕೆ ಪರಿಹಾರ ಕಂಡು ಕೊಳ್ಳಲು ನಿರ್ಧರಿಸಿದ ಊರಿನ ಮಳೆಯರು, ತಾವೇ 250 ಮಂದಿಯ ಗುಂಪು ರಚಿಸಿ ಕಾರ್ಯ ಪ್ರವೃತ್ತರಾಗಿದ್ದಾರೆ. ದೊಡ್ಡ ಬೆಟ್ಟವನ್ನೇ ಸೀಳಿ ಊರಿನ ಕೆರೆಗೆ ನೀರು ಹರಿಸಲು ಮುಂದಾಗುತ್ತಾರೆ. 250 ಮಂದಿ ಸತತ 18 ತಿಂಗಳು ಕೆಲಸ ಮಾಡಿ, 500 ಮೀಟರ್‌ನಷ್ಟುಉದ್ದದ ಗುಡ್ಡವನ್ನು ಕೊರೆದು ನೀರು ಕೆರೆಗೆ ಹರಿಯುವಂತೆ ಮಾಡಿದ್ದಾರೆ. ಈಗ ಊರಿನ ಕೆರೆಗೆ ಗಂಗೆ ಸುಗಮವಾಗಿ ಹರಿಯುತ್ತಿದ್ದಾಳೆ. ಈ ಆಧುನಿಕ ಭಗೀರಥೆÜಯರ ಸಾಹಸ ಹಾಗೂ ಗಟ್ಟಿತನಕ್ಕೆ ನೆಟ್ಟಿಗರು ಭೇಷ್‌ ಎಂದಿದ್ದಾರೆ.

ನಮ್ಮಲ್ಲಿ ದಿನ ಬಳಕೆಗೆ ಹಾಗೂ ಕೃಷಿಗೆ ನೀರಿನ ಅಭಾವ ಇತ್ತು. ಹೀಗಾಗಿ ನಾವೇ 250 ಮಂದಿ ಗುಡ್ಡ ಕೊರೆದು ಊರಿನ ಕೆರೆಗೆ ನೀರು ಹರಿಯುವಂತೆ ಮಾಡಿದ್ದೇವೆ. ಇದಕ್ಕೆ 18 ತಿಂಗಳು ಬೇಕಾಯ್ತು ಎಂದು ಹೇಳುವಾಗ ವಿವಿತಾಭಾಯಿ ಆದಿವಾಸಿ ಅವರ ಕಣ್ಣಲ್ಲಿ ಸಂತೋಷ ಇತ್ತು.