Amit Shah And Narendra Modi: ಪ್ರಧಾನಿ ಸ್ಥಾನಕ್ಕೆ ಅಮಿತ್ ಶಾ ಆಕಾಂಕ್ಷಿ ಎಂದು ಸಂಜಯ್ ರಾವತ್ ಹೇಳಿದ್ದಾರೆ. ಮೋದಿ ಅವರನ್ನು ನಿವೃತ್ತಿಗೊಳಿಸಲು ಬಯಸುವವರಲ್ಲಿ ಶಾ ಕೂಡ ಒಬ್ಬರು ಎಂದು ರಾಜ್ಯಸಭಾ ಸಂಸದರೊಬ್ಬರು ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ.
ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಪ್ರಧಾನಿಯಾಗುವ ಸ್ಪರ್ಧೆಯಲ್ಲಿದ್ದಾರೆ. ಆದ್ರೆ ಅಮಿತ್ ಶಾ ಪ್ರಧಾನಿಯಾಗಲು ಯಾವುದೇ ಕಾರಣಕ್ಕೂ ನರೇಂದ್ರ ಮೋದಿ ಅವರು ಬಿಡಲ್ಲ ಎಂದು ಉದ್ದವ್ ಠಾಕ್ರೆ ಬಣದ ರಾಜ್ಯಸಭಾ ಸಂಸದ ಸಂಜಯ್ ರಾವತ್ ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ. ಮುಂಬೈನಲ್ಲಿ ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿರುವ ಸಂಜಯ್ ರಾವತ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ನಿವೃತ್ತಿಗೊಳಿಸಲು ಬಯಸುವ ಜನರಲ್ಲಿ ಅಮಿತ್ ಶಾ ಸಹ ಇದ್ದಾರೆ. ಇದಕ್ಕಾಗಿ ಒಬ್ಬರು ಮತ್ತೊಬ್ಬರ ಕಾಲೆಳೆಯುವ ಪ್ರಯತ್ನದಲ್ಲಿದ್ದಾರೆ ಎಂದು ಹೇಳಿದರು
ಅಮಿತ್ ಶಾ ಪ್ರಧಾನಿಯಾಗುವ ಮಹತ್ವಕಾಂಕ್ಷೆಯನ್ನು ಹೊಂದಿದ್ದಾರೆ. ಮೋದಿ ನಂತರ ನಾನೇ ಪ್ರಧಾನಿ ಎಂದು ಅಮಿತ್ ಶಾ ತಿಳಿದುಕೊಂಡಿದ್ದಾರೆ. ಮೋದಿ ನಂತರ ನಾನೇ ಎಂಬ ಲೆಕ್ಕಾಚಾರದಲ್ಲಿ ರಾಜನಾಥ್ ಸಿಂಗ್ ಇದ್ದಾರೆ. ನಾನು, ನಾನು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರಿದ್ದಾರೆ ಎಂದು ಸಂಜಯ್ ರಾವತ್ ವ್ಯಂಗ್ಯ ಮಾಡಿದರು.
ಪ್ರಧಾನಿ ರೇಸ್‌ನಲ್ಲಿ ಅಮಿತ್ ಶಾ ಬರದಂತೆ ಮಾಡ್ತಾರೆ ಮೋದಿ
ಅಮಿತ್ ಶಾ ಪ್ರಧಾನ ಮಂತ್ರಿ ಸ್ಪರ್ಧೆಯಲ್ಲಿ ಬರದಂತೆ ನರೇಂದ್ರ ಮೋದಿ ಅವರೇ ನೋಡಿಕೊಳ್ಳುತ್ತಾರೆ ಎಂದು ಸಂಜಯ್ ರಾವತ್ ಸ್ಪೋಟಕ ಹೇಳಿಕೆಯನ್ನು ನೀಡಿದರು. ಇದೇ ವೇಳೆ ಜಗದೀಪ್ ಧನಕರ್ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಸಂಜಯ್ ರಾವತ್, ಇದು ಸೆಪ್ಟೆಂಬರ್ ರಾಜಕಾರಣ. ಸೆಪ್ಟೆಂಬರ್‌ನಲ್ಲಿ ನಡೆಯುವ ರಾಜಕಾರಣದ ಮುನ್ನುಡಿ ಇದಾಗಿದೆ. ಆರಂಭದ ರೂಪದಲ್ಲಿ ಜಗದೀಪ್ ಧನಕರ್ ರಾಜೀನಾಮೆ ನೀಡಿದ್ದಾರೆ ಎಂದು ಹೇಳುವ ಮೂಲಕ ಸೆಪ್ಟೆಂಬರ್ ತಿಂಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯಲಿವೆ ಎಂದು ಭವಿಷ್ಯ ನುಡಿದರು.
ಲಡ್ಕಿ ಬಹಿನ್ ಯೋಜನೆಯಲ್ಲಿ ಅಕ್ರಮದ ಬಗ್ಗೆ ಸಂಜಯ್ ರಾವತ್ ವಾಗ್ದಾಳಿ
ಲಡ್ಕಿ ಬಹಿನ್ ಯೋಜನೆಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಆರೋಪದ ಕುರಿತು ಮಾತನಾಡಿದ ಸಂಜಯ್ ರಾವತ್, ಇಲ್ಲಿ ನಿಯಮ ಮತ್ತು ಕಾನೂನಿನ ಪ್ರಕಾರ ಯಾವುದೇ ಕೆಲಸಗಳು ನಡೆದಿಲ್ಲ. 14 ಸಾವಿರ ಪುರುಷರಿಗೆ ಲಡ್ಕಿ ಬಹಿನ್ ಯೋಜನೆಯಡಿಯಲ್ಲಿ ಹಣ ಸಿಕ್ಕಿದೆ. ಇದರ ಅರ್ಥ ಏನು ಎಂದು ಸರ್ಕಾರವೇ ಹೇಳಬೇಕು. ಮಹಿಳೆಯರಿಗಾಗಿರುವ ಯೋಜನೆಯಲ್ಲಿ ಪುರುಷರು ಫಲಾನುಭವಿಗಳಾಗಿರೋದು ಆಶ್ಚರ್ಯವನ್ನುಂಟು ಮಾಡಿದೆ. ಈ 14 ಸಾವಿರ ಪುರುಷ ಫಲಾನುಭವಿಗಳು ಯಾರು? ಇದರಿಂದ ಸರ್ಕಾರಕ್ಕೆ ಎಷ್ಟು ಕೋಟಿ ರೂ. ನಷ್ಟ ಆಗಿದೆ ಎಂದು ಪ್ರಶ್ನಿಸಿದರು.
ಲಡ್ಕಿ ಬಹಿನ್ ಯೋಜನೆಯಿಂದ 60 ವರ್ಷ ಮೇಲ್ಪಟ್ಟ ಹಿರಿಯ ಮಹಿಳೆಯರನ್ನು ಹೊರಗಿಡಲಾಗಿತ್ತು. ಆದರೆ ಈ ಯೋಜನೆಯಲ್ಲಿ ಸುಮಾರು ಎರಡೂವರೆ ಲಕ್ಷದ ಮಹಿಳಾ ಫಲಾನುಭವಿಗಳು ವಯಸ್ಸು 60ರ ಮೇಲ್ಪಟ್ಟಿದೆ. 60 ವರ್ಷ ಮೇಲ್ಪಟ್ಟ ಮಹಿಳೆಯರು ಲಡ್ಕಿ ಬಹಿನ್ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಪುರುಷರ ಹೆಸರಿನಲ್ಲಿ ಮಹಿಳೆಯರ ಖಾತೆಗಳಿವೆ. ಚುನಾವಣೆ ಗೆಲ್ಲಲು ಅರಾಜಕತೆ ಸೃಷ್ಟಿಸಲಾಗಿದೆ ಎಂದು ಸಂಜಯ್ ರಾವತ್ ಆರೋಪಿಸಿದರು.
ಐಟಿ ಕಂಪನಿಗಳು ಬೆಂಗ್ಳೂರಿಗೆ: ಡಿಸಿಎಂ ಅಜಿತ್ ಪವಾರ್ ಕೆಂಡಾಮಂಡಲ
ರಾಜ್ಯದ ಅವ್ಯವಸ್ಥೆಯಿಂದಾಗಿ ಐಟಿ ಕಂಪನಿಗಳು ಬೆಂಗಳೂರಿನತ್ತ ವಲಸೆ ಹೋಗುತ್ತಿವೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಗೋಳಿಟ್ಟುಕೊಂಡಿದ್ದಾರೆ.ನಾವು ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ. ಹಿಂಜವಾಡಿ ಐಟಿ ಪಾರ್ಕ್ ಪುಣೆಯಿಂದಷ್ಟೇ ಏಕೆ, ಮಹಾರಾಷ್ಟ್ರದಿಂದಲೇ ಹೊರಹೋಗಿ, ಬೆಂಗಳೂರು, ಹೈದರಾಬಾದ್‌ನಲ್ಲಿ ನೆಲೆಸುತ್ತಿದೆ. ನಿಮಗ್ಯಾರಿಗೂ ಚಿಂತೆಯೇ ಇಲ್ಲವೇ ಎಂದು ಅಜಿತ್ ಪವಾರ್ ಹೇಳಿದ್ದಾರೆ.
ಹಿಂಜವಾಡಿಯಲ್ಲಿ 2,800 ಎಕರೆ ವ್ಯಾಪ್ತಿಯಲ್ಲಿ ರಾಜೀವ್ ಗಾಂಧಿ ಟೆಕ್ ಪಾರ್ಕ್ ಇದ್ದು, ಅಲ್ಲಿ 800ಕ್ಕೂ ಅಧಿಕ ಕಂಪನಿಗಳ ಕಚೇರಿಗಳಿವೆ. ಅವುಗಳೆಲ್ಲ ಈಗ ಬೇರೆ ರಾಜ್ಯದ ಮಹಾನಗರಗಳಿಗೆ ಸ್ಥಳಾಂತರಗೊಳ್ಳುತ್ತಿರುವುದು ಅಜಿತ್ ಅಸಮಾಧಾನಕ್ಕೆ ಕಾರಣವಾಗಿದೆ.
