Asianet Suvarna News Asianet Suvarna News

ಪುದುಚೇರಿಯಲ್ಲಿ ಬಿಜೆಪಿಗೆ ಅಧಿಕಾರ ಸಿಗುವಂತೆ ಮಾಡಿದ್ದು ಕರ್ನಾಟಕದ ಜೋಡೆತ್ತು!

* ಬಿಜೆಪಿಗೆ ದಕ್ಷಿಣದಲ್ಲಿ ತೆರೆಯಿತು 2ನೇ ಹೆಬ್ಬಾಗಿಲು:

* ಪುದುಚೇರಿಯಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ

* ಕಮಲ ಪಡೆಗೆ ಅಧಿಕಾರ ಸಿಗುವಂತೆ ಮಾಡಿದ ಕರ್ನಾಟಕ ಜೋಡೆತ್ತು ಸುರಾನಾ, ಆರ್‌ಸಿ

* ಪುದುಚೇರಿಯಲ್ಲಿ ಶೂನ್ಯದಿಂದ 6 ಸ್ಥಾನಕ್ಕೇರಿ ಸರ್ಕಾರದಲ್ಲೂ ಭಾಗಿಯಾದ ಬಿಜೆಪಿ

MP Rajeev Chandrasekhar And Nirmal Kumar Surana Effort Behind BJP Victory In Puducherry pod
Author
Bangalore, First Published Jun 28, 2021, 7:44 AM IST

ಬೆಂಗಳೂರು(ಜೂ.28): ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಸರ್ಕಾರ ರಚಿಸುವ ಮೂಲಕ ಬಿಜೆಪಿಯು ದಕ್ಷಿಣ ಭಾರತದಲ್ಲಿ ಎರಡನೇ ಹೆಬ್ಬಾಗಿಲನ್ನು ತೆರೆದಂತಾಗಿದೆ. ಇದೇ ಮೊದಲ ಬಾರಿಗೆ ಬಿಜೆಪಿಯ ಇಬ್ಬರು ಪುದುಚೇರಿ ಸಂಪುಟಕ್ಕೆ ಸೇರಿದ್ದಾರೆ. ಇದರಿಂದಾಗಿ ಬಿಜೆಪಿಯು ಪುದುಚೇರಿಯಲ್ಲೂ ಗದ್ದುಗೆ ಹಿಡಿದಂತಾಗಿದೆ.

ಈ ದಿಗ್ವಿಜಯಕ್ಕೆ ಕರ್ನಾಟಕದವರೇ ಆದ ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್‌ ಕುಮಾರ್‌ ಸುರಾನಾ ಅವರ ನೇತೃತ್ವ ಮತ್ತು ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಅವರ ಸಹಭಾಗಿತ್ವ ಪ್ರಮುಖ ಕಾರಣ. ಇವರಿಬ್ಬರು ಜೋಡೆತ್ತಿನಂತೆ ಶ್ರಮಿಸಿದ್ದರಿಂದ ಪಕ್ಷ ಅಧಿಕಾರದ ಗದ್ದುಗೆ ಏರಲು ಸಾಧ್ಯವಾಯಿತು ಎಂಬ ಪ್ರಶಂಸೆಯ ಮಾತು ಪಕ್ಷದ ಪಾಳೆಯದಿಂದಲೇ ಕೇಳಿಬಂದಿದೆ.

ನಿರ್ಮಲ್‌ ಕುಮಾರ್‌ ಸುರಾನಾ ಅವರನ್ನು ಪುದುಚೇರಿಯ ಚುನಾವಣಾ ಉಸ್ತುವಾರಿಯಾಗಿ, ರಾಜೀವ್‌ ಚಂದ್ರಶೇಖರ್‌ ಅವರನ್ನು ಸಹ ಉಸ್ತುವಾರಿಯನ್ನಾಗಿ ಬಿಜೆಪಿ ಹೈಕಮಾಂಡ್‌ ನಿಯೋಜನೆ ಮಾಡಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಉಭಯ ನಾಯಕರೂ ವಿಧಾನಸಭಾ ಚುನಾವಣೆಗೆ ಒಂದೂವರೆ ತಿಂಗಳು ಮೊದಲೇ ಪುದುಚೇರಿಯಲ್ಲಿ ಮೊಕ್ಕಾಂ ಹೂಡಿ, ಅಲ್ಲಿನ ಸ್ಥಳೀಯ ಸಮಸ್ಯೆ, ಕಾಂಗ್ರೆಸ್‌ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನು ಗ್ರಹಿಸಿ ರಾಷ್ಟ್ರೀಯ ನಾಯಕರಿಗೆ ವಿಸ್ತೃತ ವರದಿ ನೀಡಿದ್ದರು.

ಈ ವರದಿ ಆಧಾರದ ಮೇಲೆಯೇ ಚುನಾವಣಾ ರಣತಂತ್ರ ರೂಪಿಸಲಾಯಿತು. ಇಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಮೈತ್ರಿಕೂಟ ಹೊರತುಪಡಿಸಿ ಬೇರೆಯವರು ಆಡಳಿತ ನಡೆಸುವುದು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಸುರಾನಾ ಮತ್ತು ರಾಜೀವ್‌ ಜೋಡಿ ಭರ್ಜರಿ ಫಸಲನ್ನೇ ತೆಗೆದಿದೆ. ಕೇಸರಿ ಬಾವುಟ ಹಾರಾಡಲು ಈ ಜೋಡಿಯೇ ಕಾರಣವಾಗಿದೆ.

ಹುಬ್ಬೇರುವಂತೆ ಮಾಡಿದ ಫಲಿತಾಂಶ:

ಒಟ್ಟು 30 ಸ್ಥಾನಗಳ ವಿಧಾನಸಭೆಗೆ ಏ.6ರಂದು ಚುನಾವಣೆ ನಡೆದಿತ್ತು. ಎಐಎನ್‌ಆರ್‌ಸಿ ಮತ್ತು ಬಿಜೆಪಿ ಮೈತ್ರಿಕೂಟ ಸೀಟು ಹೊಂದಾಣಿಕೆ ಮಾಡಿಕೊಂಡು ಕಣಕ್ಕಿಳಿದಿದ್ದವು. ಮೇ 2ರಂದು ಫಲಿತಾಂಶ ಪ್ರಕಟವಾಗಿದ್ದು, ಎಲ್ಲರೂ ಹುಬ್ಬೇರಿಸುವಂತೆ ಮಾಡಿತ್ತು. ಎಐಎನ್‌ಆರ್‌ಸಿ 10 ಸ್ಥಾನ ಪಡೆದರೆ, ಬಿಜೆಪಿ 6 ಸ್ಥಾನ ಗಳಿಸಿತ್ತು. ಶೂನ್ಯದಿಂದ 6 ಸ್ಥಾನಕ್ಕೆ ಬಿಜೆಪಿ ಏರಿದ್ದರ ಹಿಂದೆ ಈ ಜೋಡಿಯ ಪರಿಶ್ರಮ ಎದ್ದು ಕಾಣಿಸುತ್ತದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಈ ಹಿಂದೆ ಪುದುಚೇರಿಯ ಉಸ್ತುವಾರಿಯಾಗಿದ್ದರು. ಅವರು ನೆಟ್ಟ‘ಪಕ್ಷ ಸಂಘಟನೆ’ ಎಂಬ ಬೀಜಗಳ ಫಸಲೂ ಸಹ ಈ ಚುನಾವಣೆಯಲ್ಲಿ ಕೈಗೆ ಬಂದಿದ್ದು ಗೆಲುವಿಗೆ ಪೂರಕವಾಯಿತು.

ಪುದುಚೇರಿಯಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್‌ ಮುಖ್ಯಮಂತ್ರಿ ನಾರಾಯಣಸ್ವಾಮಿ ಅವರ ಜನವಿರೋಧಿ ನಿಲುವುಗಳಿಂದಾಗಿ ಬೇಸತ್ತ ಜನತೆ ಕಮಲದ ಕೈಹಿಡಿದರು. ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಬಳಸಿಕೊಂಡ ಸುರಾನಾ-ರಾಜೀವ್‌ ಜೋಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ಏನೆಲ್ಲ ಅಭಿವೃದ್ಧಿ ಮಾಡಿದೆ ಎಂಬುದನ್ನು ಮತದಾರರ ಮನಮುಟ್ಟುವಂತೆ ಮಾಡಿದರು. ಸಾಮಾಜಿತ ಜಾಲತಾಣಗಳ ಮೂಲಕ ಕೇಂದ್ರದ ಸಾಧನೆಗಳು ಜನರ ಮನೆ-ಮನ ಮುಟ್ಟುವಂತೆ ಮಾಡುವಲ್ಲಿ ರಾಜೀವ್‌ ಚಂದ್ರಶೇಖರ್‌ ಯಶಸ್ವಿಯಾದರು.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್‌ ಶಾ ಅವರೂ ಸಹ ತಲಾ ಎರಡು ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದು ಜನರ ಮನಸ್ಸಿನ ಮೇಲೆ ಪ್ರಭಾವ ಬೀರಿತು. ಇದೆಲ್ಲದರ ಒಟ್ಟು ಫಲಿತಾಂಶವೆಂದರೆ ದಕ್ಷಿಣ ಭಾರತದಲ್ಲಿ ಪುದುಚೇರಿಯಲ್ಲೂ ಕೇಸರಿ ಬಾವುಟ ಹಾರಾಡುವಂತಾಗಿದ್ದು. ಇದು ಪಕ್ಕದ ತಮಿಳು ನಾಡಿನ ಮೇಲೂ ಭವಿಷ್ಯದಲ್ಲಿ ಪರಿಣಾಮ ಬೀರಿದರೆ ಅಚ್ಚರಿ ಇಲ್ಲ ಎಂದೇ ಹೇಳಲಾಗುತ್ತಿದೆ.

Follow Us:
Download App:
  • android
  • ios