ನವದೆಹಲಿ(ಮಾ.22):  ಮಹಾರಾಷ್ಟ್ರದ ಮೈತ್ರಿ ಸರ್ಕಾರ ಇದೀಗ ಇಕ್ಕಟ್ಟಿಗೆ ಸಿಲುಕಿದೆ. ಅಂಬಾನಿ ಮನೆ ಸಮೀಪದ ಬಾಂಬ್ ಪ್ರಕರಣ, ಪೊಲೀಸ್ ಅಧಿಕಾರಿ ಸಚಿನ್ ವಾಜೆ ಬಂಧನ, ಮುಂಬೈ ಪೊಲೀಸ್ ಆಯುಕ್ತರ ವರ್ಗಾವಣೆ, ಗೃಹ ಸಚಿವರ ಮೇಲೆ 100 ಕೋಟಿ ಡೀಲ್ ಆರೋಪ ಸೇರಿದಂತೆ ಒಂದರ ಹಿಂದೆ ಮತ್ತೊಂದರಂತೆ ಮಹಾರಾಷ್ಟ್ರ ಸರ್ಕಾರದ ಬುಡ ಅಲ್ಲಾಡಿಸುತ್ತಿದೆ. ಮಹಾ ಸರ್ಕಾರದ ಈ ಅಕ್ರಮಗಳನ್ನು ಪ್ರಶ್ನಿಸಿದ ಅಮರಾವತಿ ಸಂಸದೆ ನವನೀತ್ ರವಿ ರಾಣೆಗೆ ಶಿವಸೇನಾ ಸಂಸದ ಧಮ್ಕಿ ಹಾಕಿದ ಘಟನೆ ವರದಿಯಾಗಿದೆ.

ಅಂಬಾನಿ ನಿವಾಸದ ಬಳಿ ಸ್ಫೋಟಕವಿಟ್ಟಿದ್ದೇಕೆ? 16 ವರ್ಷ ಹಿಂದಿನ ರಹಸ್ಯ ಬಯಲು!

ಪೊಲೀಸ್ ಅಧಿಕಾರಿ ಸಚಿನ್ ವಾಜೆ ಬಂಧನ ಹಾಗೂ ಆಯುಕ್ಕ ಪರಂ ಬೀರ್ ಸಿಂಗ್ ವರ್ಗಾವಣೆ ಬಳಿಕ ಬೆಳಕಿಗೆ ಬಂದ ಅಕ್ರಮಗಳನ್ನು ನವನೀತ್ ರವಿ ರಾಣಾ ಲೋಕಸಭೆಯಲ್ಲಿ ಪ್ರಶ್ನಿಸಿದ್ದಾರೆ.  ಮಹಾರಾಷ್ಟ್ರ ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಿದ ನವನೀತ್ ರವಿ ರಾಣಾಗೆ ಶಿವಸೇನಾ  ಸಂಸದ ಅರವಿಂದ್ ಸಾವಂತ್ ಬೆದರಿಸಿದ್ದಾರೆ. ನೀನು ಹೇಗೆ ಮಹಾರಾಷ್ಟ್ರದಲ್ಲಿ ಓಡಾಡುತ್ತಿ? ನಾನು ನೋಡುತ್ತೇನೆ. ನಾನು ಜೈಲಿಗೆ ಹಾಕುತ್ತೇನೆ ಎಂದು ದಮ್ಕಿ ಹಾಕಿದ್ದಾರೆ.

ಪರಂ ಬೀರ್ ಸಿಂಗ್ ಮಹಾರಾಷ್ಟ್ರ ಗೃಹ ಸಚಿವರ ಮೇಲೆ 100 ಕೋಟಿ ಡೀಲ್ ಆರೋಪ ಮಾಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಸಚಿವರ ರಾಜೀನಾಮೆಗೆ ಆಗ್ರಹಿಸಿದೆ. ಲೋಕಸಭೆಯಲ್ಲೂ ಈ ಗದ್ದಲ ನಡೆದಿದೆ. ಈ ವೇಳೆ ನವನೀತ್ ರವಿ ರಾಣಾ ಪ್ರಶ್ನಿಸಿ ಇದೀಗ ಬೆದರಿಕೆಗೆ ಗುರಿಯಾಗಿದ್ದಾರೆ. 

ದಮ್ಕಿ ಹಾಕಿದ ಬೆನ್ನಲ್ಲೇ ನವನೀತ್ ರವಿ ರಾಣಾ ಲೋಕಸಭಾ ಸ್ಪೀಕರ್‌ಗೆ ರಕ್ಷಣೆ ಕೋರಿ ಪತ್ರ ಬರೆದಿದ್ದಾರೆ. ಮಹಿಳಾ ಸಂಸದೆಯಾಗಿರುವ ತನಗೆ ಶಿವಸೇನಾ ಸಂಸದ ಅರವಿಂದ್ ಸಾವಂತ್ ಬೆದರಿಕೆ ಹಾಕಿದ್ದಾರೆ. ಹೀಗಾಗಿ ರಕ್ಷಣೆ ನೀಡಬೇಕು ಎಂದು ಸ್ಪೀಕರ್ ಓಮ್ ಬಿರ್ಲಾಗೆ ಪತ್ರ ಬರೆದಿದ್ದಾರೆ.

ಭಾರತೀಯ ಪ್ರಜಾಪ್ರಭುತ್ವದ ಪ್ರಕಾರ, ನಾನು ಮಾನ್ಸುಖ್ ಹಿರೆನ್ ಹತ್ಯೆ ಮತ್ತು ಮಹಾರಾಷ್ಟ್ರದಲ್ಲಿ ಸಚಿನ್ ವಾಜೆ ಪ್ರಕರಣ ಹಾಗೂ  ಮಾಜಿ ಪೊಲೀಸ್ ಆಯುಕ್ತರ ಪತ್ರಕ್ಕೆ ಸಂಬಂಧಿಸಿದಂತೆ ಠಾಕ್ರೆ ಸರ್ಕಾರದ ವಿರುದ್ಧ ಪ್ರಶ್ನಿಸಿದಾಗ, ಶಿವಸೇನ ಸಂಸದ ಅರವಿಂದ ಸಾವಂತ್ ನನಗೆ ಬೆದರಿಕೆ ಹಾಕಿದರು ಸಂಸತ್ತಿನ ಲಾಬಿಯಿಂದ ನನಗೆ 'ನೀವು ಮಹಾರಾಷ್ಟ್ರದಲ್ಲಿ ಹೇಗೆ ಸಂಚರಿಸುತ್ತೀರಿ ಮತ್ತು ನಿಮ್ಮನ್ನು ಜೈಲಿಗೆ ಹಾಕುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೂ ಮೊದಲು ನಾನು ಶಿವಸೇನ ಲೆಟರ್‌ಹೆಡ್ ಮತ್ತು ಫೋನ್ ಕರೆಗಳಲ್ಲಿ ಆಸಿಡ್ ದಾಳಿ ಮತ್ತು ಕೊಲ್ಲುವ ನಿರಂತರ ಬೆದರಿಕೆಗಳನ್ನು ಸಹ ಸ್ವೀಕರಿಸಿದ್ದೇನೆ. ಹಾಗಾಗಿ ಅರವಿಂದ ಸಾವಂತ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾನು ಕೋರುತ್ತೇನೆ. ಜೊತೆಗೆ ನನಗೆ ರಕ್ಷಣೆ ನೀಡಬೇಕೆಂದು ಕೋರುತ್ತೇನೆ ಎಂದು ನವನೀತ್ ರವಿ ರಾಣಾ ಪತ್ರದಲ್ಲಿ ಹೇಳಿದ್ದಾರೆ.