Selfie Craze| ಚಲಿಸ್ತಿರೋ ರೈಲಿನ ಜೊತೆಗೊಂದು ಸೆಲ್ಫೀ, ಹುಚ್ಚಾಟಕ್ಕೆ ಜೀವ ಕಳೆದುಕೊಂಡ ಬಾಲಕ!
* ಮಧ್ಯಪ್ರದೇಶದಲ್ಲೊಂದು ದುರಂತ
* ಸೋಶಿಯಲ್ ಮೀಡಿಯಾ ಕ್ರೇಜ್‌ಗೆ ಜೀವವನ್ನೇ ಕಳೆದುಕೊಂಡ ಬಾಲಕ
* ರೈಲಿನೆದುರು ಪೋಸ್ ಕೊಡಲು ಹೋಗಿ ಪ್ರಾಣವೇ ಹೋಯ್ತು
ಭೋಪಾಲ್(ನ.23): ಮಧ್ಯಪ್ರದೇಶದ ಹೋಶಂಗಾಬಾದ್‌ನಲ್ಲಿ ಗೂಡ್ಸ್ ರೈಲಿನೆದುರು (Goods Train) ವಿಡಿಯೋ ಮಾಡಲು ಹೋಗಿ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಈ ಪ್ರಕರಣ ಇಟಾರ್ಸಿಯದ್ದೆನ್ನಲಾಗಿದೆ (Madhya Pradesh’s Itarsi). ಭಾನುವಾರ ಸಂಜೆ ಯುವಕ ತನ್ನ ಸ್ನೇಹಿತನೊಂದಿಗೆ ರೈಲ್ವೆ ಹಳಿ ಬಳಿ ಹೋಗಿದ್ದ. ಸಿನಿಮಾ ಶೈಲಿಯಲ್ಲಿ ರೈಲಿನ ಮುಂದೆ ನಡೆದುಕೊಂಡು ವೀಡಿಯೋ ಮಾಡುತ್ತಿದ್ದಾಗ ವೇಗವಾಗಿ ಬಂದ ರೈಲಿಗೆ ಡಿಕ್ಕಿ ಹೊಡೆದು ತಲೆಗೆ ಗಂಭೀರ ಗಾಯವಾಗಿದೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿಗೆ ತಲುಪುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದಾನೆ. ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ. ಇದೇ ವೇಳೆ ಮಗನ ಸಾವಿನ ಸುದ್ದಿಯಿಂದ ಕುಟುಂಬದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ.
ಏನಿದು ಪ್ರಕರಣ?
ಪೊಲೀಸರ ಪ್ರಕಾರ, ಮೃತ ಸಂಜು (Sanju) ಚೌರೆ ಪಂಜ್ರ ಕಾಲ ಗ್ರಾಮದ ನಿವಾಸಿ. ಆತನ ತಂದೆಯ ಹೆಸರು ಕೃಷ್ಣ ಕುಮಾರ್ ಚೌರೆ. ಸಂಜು ತನ್ನ ಅಪ್ರಾಪ್ತ ಸ್ನೇಹಿತನೊಂದಿಗೆ ನಾಗ್ಪುರ ರೈಲ್ವೆ ಹಳಿಯಲ್ಲಿರುವ ಶರದ್ ದೇವ್ ಬಾಬಾನ (Sharad Dev) ಮೋರಿಗೆ ಹೋಗಿದ್ದ. ಇಲ್ಲಿ ಸಂಜೆ ಸಂಜು ಚಲಿಸುತ್ತಿರುವ ರೈಲಿನ ಮುಂದೆ ವಿಡಿಯೋ ಮಾಡಲು ತನ್ನ ಸ್ನೇಹಿತನಿಗೆ ಮೊಬೈಲ್ ಕೊಟ್ಟು ಇಂಜಿನ್ ಬರುವವರೆಗೆ ವಿಡಿಯೋ ಮಾಡು ಬಳಿಕ ನಾನು ಇಲ್ಲಿಂದ ದೂರ ಹೋಗುತ್ತೇನೆ ಎಂದಿದ್ದಾನೆ. ರೈಲು ತೀರಾ ಸಮೀಪಕ್ಕೆ ಬಂದಂತೆ ಸಂಜುಗೆ ದೂರ ಸರಿಯಲು ಸಾಧ್ಯವಾಗಿಲ್ಲ. ಹಳಿಯಲ್ಲಿದ್ದ ಯುವಕನನ್ನು ನೋಡಿದ ರೈಲು ಚಾಲಕ ಹಾರ್ನ್ ಹಾಕಿದ್ದಾನೆ. ಅಲ್ಲದೇ ಆತ ಬ್ರೇಕ್ ಹಾಕುವಷ್ಟರಲ್ಲಿ ಬಾಲಕ ಇಂಜಿನ್‌ಗೆ ಡಿಕ್ಕಿ ಹೊಡೆದನು. ತಲೆಗೆ ಗಂಭೀರ ಪೆಟ್ಟು ಬಿದ್ದು ಮೃತಪಟ್ಟಿದ್ದಾನೆ.
ನೋಡ ನೋಡುತ್ತಿದ್ದಂತೆಯೇ ಪ್ರಾಣ ಕಳೆದುಕೊಂಡ
ಈ ಬಗ್ಗೆ ಸಂಜು ಸ್ನೇಹಿತ ಹೇಗೋ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಅಲ್ಲಿಗೆ ತಲುಪಿ ಗಂಭೀರ ಸ್ಥಿತಿಯಲ್ಲಿದ್ದ ಸಂಜುವನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವನು ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. ಸೋಮವಾರ ಮಧ್ಯಾಹ್ನ ಯುವಕನ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಅಂತಿಮ ವಿಧಿವಿಧಾನಕ್ಕಾಗಿ ಹಸ್ತಾಂತರಿಸಲಾಯಿತು. ಸಂಜು ತನ್ನ ಸೋಶಿಯಲ್ ಮಿಡಿಯಾ ಖಾತೆಯಲ್ಲಿ ಸಿನಿಮೀಯ ಶೈಲಿಯ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಿದ್ದ. ಆದರೆ ಆತನ ಈ ಹವ್ಯಾಸವು ಆತ ಜೀವ ಕಳೆದುಕೊಳ್ಳುವಷ್ಟು ಮಾರಕವಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಸೆಲ್ಫೀ ತೆಗೆಯಲು ಹೋಗಿ ಮೇಕೆಯಿಂದ ಗುದ್ದಿಸ್ಕೊಂಡ ಲೇಡಿ!
ಇಂದು ಸೆಲ್ಫೀ ಕ್ಲಿಕ್ಕಿಸೋದು ಒಂದು ಬಗೆಯ ಟ್ರೆಂಡ್ ಆಗಿ ಮಾರ್ಪಾಡಾಗಿದೆ. ಎಲ್ನೋಡಿದ್ರೂ ಸೆಲ್ಫೀ ದುನಿಯಾ, ಮಕ್ಕಳಿಂದ ಹಿಡಿದು ಹಿರಿಯರವರೆಗೆ ಸೆಲ್ಫೀ ಹುಚ್ಚು ಯಾರನ್ನೂ ಬಿಟ್ಟಿಲ್ಲ. ಆದರೆ ಅನೇಕ ಬಾರಿ ಈ ಸೆಲ್ಫೀ ಜೀವಕ್ಕೆ ಮಾರಕವಾಗುತ್ತದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಮಹಿಳೆಗಾದ ಪರಿಸ್ಥಿತಿ ಕಂಡು ಅನೇಕ ಮಂದಿ ನಕ್ಕಿದ್ದರೆ, ಇನ್ನು ಕೆಲವರು ಮರುಕ ಪಟ್ಟುಕೊಂಡಿದ್ದಾರೆ.
ಇನ್ನು ವೈರಲ್ ಆದ ಈ ವಿಡಿಯೋದಲ್ಲಿ ಮಹಿಳೆ ಕಾಡು ಪ್ರದೇಶದಲ್ಲಿ ಸೆಲ್ಫೀ ತೆಗೆದುಕೊಳ್ಳಲು ಸಜ್ಜಾಗಿದ್ದಾಳೆ. ಇನ್ನು ಇಲ್ಲಿ ಸ್ವಲ್ಪ ದೂರದಲ್ಲಿ ಮೇಕೆಯೊಂದನ್ನು ಹಗ್ಗಕ್ಕೆ ಕಟ್ಟಿರುವುದನ್ನೂ ನೋಡಬಹುದಾಗಿದೆ. ಮಹಿಳೆ ಆ ಮೇಕೆಯನ್ನು ಕಂಡು ಚಿತ್ರ ವಿಚಿತ್ರವಾಗಿ ಮುಖ ತಿರುಗಿಸಲಾರಂಭಿಸುತ್ತಾಳೆ. ಇದರಿಂದ ಕೆರಳಿದ ಮೇಕೆ ಹಾಗೋ ಹೀಗೋ ಮಾಡಿ ಹಗ್ಗವನ್ನು ಕಡಿದುಕೊಂಡು ಮಹಿಳೆಯತ್ತ ಬರುತ್ತದೆ. ಹೀಗಿದ್ದರೂ ಮಹಿಳೆ ಮಾತ್ರ ಇದ್ಯಾವುದರ ಪರಿವೆಯೇ ಇಲ್ಲದೇ ಸೆಲ್ಪೀ ತೆಗೆಯುವಲ್ಲಿ ಬ್ಯೂಸಿಯಾಗುತ್ತಾಳೆ.
ಆದರೆ ಅತ್ತ ಓಡಿ ಬಂದ ಮೇಕೆ ಮಾತ್ರ ಬಬಹಳ ಜೋರಾಗಿ ಮಹಿಳೆಗೆ ತನ್ನ ಕೊಂಬಿಂದ ಗುದ್ದುತ್ತದೆ. ಹೀಗಿದ್ದರೂ ಈ ಘಟನೆ ನಡೆದಿದ್ದೆಲ್ಲಿ ಎಂಬ ಮಾಹಿತಿ ಲಭ್ಯವಾಗಿಲ್ಲ.