ವಿಶೇಷ ಚೇತನ ಮಗುವಿಗೆ ಎದೆಹಾಲು ನೀಡಲು ನಿರಾಕರಿಸಿದ ತಾಯಿಯ ಬಂಧನ
ಕೇರಳದಲ್ಲಿ ವಿಶೇಷ ಚೇತನ ಮಗುವಿಗೆ ಎದೆಹಾಲು ನೀಡಲು ನಿರಾಕರಿಸಿದ ತಾಯಿಯನ್ನು ಬಂಧಿಸಲಾಗಿದೆ.
ಅಲಪ್ಪುಳ: ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂಬ ಮಾತಿದೆ. ಮಗುವಿನ ಸ್ಥಿತಿ ಹೇಗಿದ್ದರೂ ಕೂಡ ಆ ಮಗುವನ್ನು ಪ್ರೀತಿಸುವ ಒಂದೇ ಒಂದು ಜೀವ ಎಂದರೆ ಅದು ತಾಯಿ, ಮಗು ಕುರುಪಿಯಾಗಿರಲಿ ಕೈ ಕಾಲು ಸರಿ ಇಲ್ಲದಿರಲಿ ತಾಯಿ ಯಾವುದಕ್ಕೂ ಕಡಿಮೆ ಮಾಡಲಾರಳು, ಇಡೀ ಸಮಾಜ ಕುಟುಂಬ ತಿರಸ್ಕರಿಸಿದರೂ ತಾಯಿ ಮಾತ್ರ ಮಗುವನ್ನು ಇನ್ನಿಲ್ಲದಂತೆ ಪ್ರೀತಿ ಮಾಡ್ತಾಳೆ. ಆದರೆ ಕೇರಳದಲ್ಲಿ ಇದಕ್ಕೆ ತದ್ವಿರುದ್ಧವಾದ ಘಟನೆಯೊಂದು ನಡೆದಿದೆ. ತಾನೇ ಹೆತ್ತ ಮಗುವಿಗೆ ಎದೆಹಾಲು ಕೊಡಲು ನಿರಾಕರಿಸಿದ ಕಾರಣಕ್ಕೆ ತಾಯಿಯೋರ್ವಳನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಅಲಪುಜದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. 27 ವರ್ಷದ ರಂಜಿತಾ ಬಂಧಿತ ಮಹಿಳೆ.
ಈಕೆಗೆ ದೈಹಿಕವಾಗಿ ನ್ಯೂನತೆ ಹೊಂದಿದ್ದ ವಿಕಲಚೇತನ ಮಗು ಜನಿಸಿತ್ತು. ಎರಡು ವರ್ಷ ತುಂಬಿದ ಮಗುವನ್ನು ಆರೈಕೆ ಮಾಡುವುದಕ್ಕೆ ಮಗುವಿಗೆ ಎದೆಹಾಲು ನೀಡುವುದಕ್ಕೆ ತಾಯಿ ನಿರಾಕರಿಸಿದ್ದಾಳೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈಕೆ ನವಂಬರ್ 13ರಂದು ಮಗುವನ್ನು ತೊರೆದು ಹೋಗಿದ್ದಾಳೆ. ಈ ಹಿನ್ನೆಲೆಯಲ್ಲಿ ಆಕೆಯ ಗಂಡನ ಮನೆಯವರು ನೀಡಿದ ದೂರಿನ ಮೇರೆಗೆ ಪೊಲೀಸರು ಆಕೆಯನ್ನು ಡಿಸೆಂಬರ್ 2 ರಂದು ಬಂಧಿಸಿದ್ದಾರೆ. ಹೀಗೆ ಮಗುವನ್ನು ತೊರೆದು ಹೋದ ಮಹಿಳೆ ಮೂಲಕ ಚೆಟ್ಟಿಕುಲಂಗರ್ ನಿವಾಸಿಯಾಗಿದ್ದು, ಥಾಮರಕುಲಂನ ವ್ಯಕ್ತಿಯೊಬ್ಬರೊಂದಿಗೆ ಈಕೆಯ ಮದುವೆ ಆಗಿತ್ತು. ಮದುವೆಯ ನಂತರ ಈಕೆ ಎರಡು ವರ್ಷದ ಹಿಂದೆ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಳು. ಆದೆ ಅನಾರೋಗ್ಯದಿಂದಾಗಿ ಈ ಮಕ್ಕಳಲ್ಲಿ ಒಂದು ಮಗು ಜನಿಸಿದ ಸ್ವಲ್ಪ ಹೊತ್ತಿನಲ್ಲೇ ಸಾವನ್ನಪ್ಪಿತ್ತು.
ಬದುಕುಳಿದ ಮಗುವಿಗೆ ದೈಹಿಕ ನ್ಯೂನ್ಯತೆ ಇತ್ತು. ರಂಜಿತಾ ಗಂಡನ ಮನೆಯಲ್ಲಿ ಗಂಡನ ಪೋಷಕರೊಂದಿಗೆ ವಾಸ ಮಾಡುತ್ತಿದ್ದು, ಅಲ್ಲೇ ಈ ಮಗುವಿನ ಆರೈಕೆ ನಡೆಯುತ್ತಿತ್ತು. ಇತ್ತ ಆಕೆಯ ಗಂಡ ವಿದೇಶದಲ್ಲಿ ಕೆಲಸ ಮಾಡುತ್ತಿದ್ದ. ಇತ್ತ ಮಗುವಿನ ದೈಹಿಕ ನ್ಯೂನತೆಯ ಕಾರಣಕ್ಕೆ ರಂಜಿತಾ ಮಗುವಿನ ಬಗ್ಗೆ ಅಸಮಾಧಾನ ಹೊಂದಿದ್ದಳು. ಅಲ್ಲದೇ ನವಂಬರ್ 13ರಂದು ಆಕೆ ರಾತ್ರಿ 8 ಗಂಟೆಗೆ ಮಗುವನ್ನು ಬಿಟ್ಟು ತಾಯಿ ಮನೆಗೆ ನಡೆದಿದ್ದಾಳೆ. ಇತ್ತ ಆ ಮಗು ಕೇವಲ ಎದೆಹಾಲು ಮಾತ್ರ ಸೇವನೆ ಮಾಡುತ್ತಿತ್ತು.
ಇದಾದ ನಂತರ ಮಗುವನ್ನು ಗಂಡನ ಪೋಷಕರು ಅಂದರೆ ಮಗುವಿನ ಅಜ್ಜ ಅಜ್ಜಿ ಆರೈಕೆ ಮಾಡುತ್ತಿದ್ದರು. ಇತ್ತ ಮಗು ಕೇವಲ ಎದೆಹಾಲು ಮಾತ್ರ ಸೇವನೆ ಮಾಡುತ್ತಿದ್ದ ಹಿನ್ನೆಲೆ ಮಗುವಿನ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ. ಹೀಗಾಗಿ ಮಗುವಿನ ಅಜ್ಜ ಅಜ್ಜಿ ರಂಜಿತಾಳ ಮನವೊಲಿಸಲು ಹಲವು ಪ್ರಯತ್ನ ಮಾಡಿದರು ವಿಫಲರಾದ ಹಿನ್ನೆಲೆ ಅವರು ವೈದ್ಯಕೀಯ ಸಹಾಯ ಬಯಸಿ ತಿರುವನಂತಪುರದ ಎಸ್‌ಎಟಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಸೊಸೆ ರಂಜಿತಾ ವಿರುದ್ಧ ಬಾಲ ನ್ಯಾಯ ಕಾಯ್ದೆಯಡಿ ಪ್ರಕರಣದ ದಾಖಲಾಗಿತ್ತು. ಪ್ರಕರಣ ದಾಖಲಾದ ನಂತರವೂ ಪೊಲೀಸರು ರಂಜಿತಾ ಮನವೊಲಿಸುವ ಪ್ರಯತ್ನ ಮಾಡಿದ್ದು, ವಿಫಲರಾದ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಬಳಿಕ ಆಕೆಯನ್ನು ಮೆವೆಲಿಕ್ಕಾರದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈಗ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.