ಈ ಬಾರಿ ಭಾರತಕ್ಕೆ ಮುಂಗಾರು ಪ್ರವೇಶ ವಿಳಂಬವಾಗಿದೆ. ಕೆಲ ರಾಜ್ಯದಲ್ಲಿ ಪ್ರವಾಹ ಸೃಷ್ಟಿಯಾಗಿದ್ದರೆ, ಇನ್ನೂ ಕೆಲ ರಾಜ್ಯ ಮಳೆ ಕೊರತೆ ಎದುರಿಸುತ್ತಿದೆ. ಆದರೆ 62 ವರ್ಷದ ಬಳಿಕ ವಿಶೇಷ ಘಟನೆ ನಡೆದಿದೆ. ದೆಹಲಿ ಹಾಗೂ ಮುಂಬೈ ನಗರ ಏಕಕಾಲಕ್ಕೆ ಮುಂಗಾರು ಪ್ರವೇಶಿಸಿದೆ.

ನವದೆಹಲಿ(ಜೂ.25): ಭಾರತದಲ್ಲಿ ಈ ಬಾರಿ ಕೆಲ ರಾಜ್ಯ ಭೀಕರ ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದರೆ, ಕೆಲ ರಾಜ್ಯದಲ್ಲಿ ಮಳೆ ಕೊರತೆ ಎದುರಾಗಿದೆ. ನಿಗದಿತ ಸಮಯದಲ್ಲಿ ಭಾರತಕ್ಕೆ ಮುಂಗಾರು ಪ್ರವೇಶ ಮಾಡಿಲ್ಲ. ಆದರೆ ಈ ಹವಾಮಾನ ವೈಪರಿತ್ಯ ನಡುವೆ ಅಚ್ಚರಿಯೊಂದು ನಡೆದಿದೆ. ಮುಂಬೈ ಹಾಗೂ ದೆಹಲಿ ನಗರಕ್ಕೆ ಏಕಕಾಲದಲ್ಲಿ ಮುಂಗಾರು ಪ್ರವೇಶಿಸಿದೆ. ಬರೋಬ್ಬರಿ 62 ವರ್ಷಗಳ ಬಳಿಕ ಈ ರೀತಿ ಸಂಭವಿಸಿದೆ. ಇದೀಗ ಎರಡೂ ನಗರದಲ್ಲಿ ಭಾರಿ ಮಳೆಯಾಗುತ್ತಿದೆ. 

ಸಾಮಾನ್ಯವಾಗಿ ಮೊದಲು ಮುಂಬೈಗೆ ಮುಂಗಾರು ಪ್ರವೇಶ ಮಾಡಲಿದೆ. ಬಳಿಕ ದೆಹಲಿ ಪ್ರವೇಶಿಸಲಿದೆ. ಈ ಬಾರಿ ಜೂನ್ 11ಕ್ಕೆ ಮುಂಬೈಗೆ ಮುಂಗಾರು ಪ್ರವೇಶಿಸಬೇಕಿತ್ತು. ದೆಹಲಿಗೆ ಜೂನ್ 27ಕ್ಕೆ ಮುಂಗಾರು ಪ್ರವೇಶಿಸಬೇಕಿತ್ತು. ಆದರೆ ಇದೀಗ ಜೊತೆಯಾಗಿ ಮುಂಬೈ ಹಾಗೂ ದೆಹಲಿ ನಗರಕ್ಕೆ ಮುಂಗಾರು ಪ್ರವೇಶಿಸಿದೆ. ಎರಡು ನಗರಗಳ ನಡವಿನ ಅಂತರ 1,430 ಕಿಲೋಮೀಟರ್. ದೆಹಲಿಗೆ ಮುಂಚಿತವಾಗಿ ಮುಂಗಾರು ಪ್ರವೇಶಿಸಿದರೆ, ಮುಂಬೈಗೆ ವಿಳಂಬಾಗಿದೆ. ಆದರೆ ಏಕಕಾಲಕ್ಕೆ ಮುಂಗಾರು ಪ್ರವೇಶದೊಂದಿಗೆ 62 ವರ್ಷಗಳ ಹಿಂದೆ ನಡೆದ ಅಚ್ಚರಿ ಸಂಭವಿಸಿದೆ.

ಪ್ರವಾಹದಲ್ಲಿ ಕೊಚ್ಚಿ ಹೋದ ಕಾರಿನಿಂದ ಮಹಿಳೆಯ ರಕ್ಷಣೆ,ಬೆಚ್ಚಿ ಬೀಳಿಸುವ ವಿಡಿಯೋ!

1961ರ ಜೂನ್ 21 ರಂದು ದೆಹಲಿ ಹಾಗೂ ಮುಂಬೈಗೆ ಏಕಕಾಲಕ್ಕೆ ಮುಂಗಾರು ಪ್ರವೇಶಿಸಿತ್ತು. ಇದೀಗ 2023ರಲ್ಲಿ ಮತ್ತೆ ಏಕಕಾಲಕ್ಕೆ ಮುಂಗಾರು ಪ್ರವೇಶಿಸಿದೆ. ದೆಹಲಿ ಹಾಗೂ ಮುಂಬೈನಲ್ಲಿ ಬಾರಿ ಮಳೆಯಾಗುತ್ತಿದೆ. ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಹರ್ಯಾಣದಲ್ಲಿ ಭಾರಿ ಮಳೆಯಾಗುತ್ತಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹಲವು ಕಾರುಗಳು, ವಾಹನಗಳು ಕೊಚ್ಚಿ ಹೋಗಿದೆ. ಕೊಚ್ಚಿ ಹೋಗುತ್ತಿದ್ದ ಕಾರಿನಿಂದ ಮಹಿಳೆಯನ್ನ ರಕ್ಷಿಸಿದ ಘಟನೆ ಹರ್ಯಾಣದಲ್ಲಿ ನಡೆದಿದೆ. 

ಈಶಾನ್ಯ ಭಾರತದಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಅಸ್ಸಾಂ ಭೀಕರ ಪ್ರವಾಹಕ್ಕೆ ತುತ್ತಾಗಿದೆ. ರಾಜಸ್ಥಾನದ 4 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. ಇನ್ನು ಇದೇ ವೇಳೆ ಉತ್ತರ ಗುಜರಾತ್‌ನಲ್ಲೂ ಭಾರಿ ಮಳೆಯಾಗಿದ್ದು, ಬನಸ್‌ಕಂಠಾ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಪ್ರವಾಹ ಉಂಟಾಗಿದೆ. ರಾಜಸ್ಥಾನದಲ್ಲಿ ಭಾರಿ ಮಳೆಯಿಂದಾಗಿ ಪಾಲಿ ಮತ್ತು ಜಾಲೋರ್‌ ಜಿಲ್ಲೆಗಳಲ್ಲಿ ಹಲವು ಪ್ರದೇಶಗಳು ಮುಳುಗಡೆಯಾಗಿದ್ದು, 30 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಅಜ್ಮೇರ್‌ನಲ್ಲೂ ಭಾರಿ ಮಳೆ ಸುರಿದಿದ್ದು ಜೆಎಲ್‌ಎನ್‌ ಆಸ್ಪತ್ರೆಗೆ ನೀರು ನುಗ್ಗಿದೆ. ನೀರನ್ನು ಖಾಲಿ ಮಾಡಲಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪವಿತ್ರ ಕೇದಾರನಾಥ ಯಾತ್ರೆ ರದ್ದುಗೊಳಿಸಿದ ಸರ್ಕಾರ, ಕ್ಷೇತ್ರಕ್ಕೆ ಹೊರಟಿದ್ದ ಭಕ್ತರ ಪರದಾಟ!

ಭೂಕುಸಿತದಿಂದಾಗಿ ಉತ್ತರ ಸಿಕ್ಕಿಂನಲ್ಲಿ ಸಿಲುಕಿಕೊಂಡಿದ್ದ 300ಕ್ಕೂ ಹೆಚ್ಚು ಪ್ರವಾಸಿಗರನ್ನು ಸೋಮವಾರ ಸೇನಾಪಡೆ ರಕ್ಷಣೆ ಮಾಡಿದೆ. ರಕ್ಷಿಸಲಾದ ಪ್ರವಾಸಿಗರಿಗೆ ಆಹಾರ, ವಿಶ್ರಾಂತಿಗೆ ಸ್ಥಳ ಮತ್ತು ಔಷಧಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಅಸ್ಸಾಂನ ಕೋಕ್ರಜಾರ್‌, ಬಕ್ಸಾ, ಬರ್ಪೆಟ್ಟಾಮತ್ತು ಬೋನ್ಗಾಯ್‌ಗಾಂವ್‌, ಗಳಲ್ಲಿ 20 ಸೆಂ.ಮೀ.ಗೂ ಅಧಿಕ ಮಳೆಯಾಗಲಿದ್ದು, ರೆಡ್‌ ಅಲರ್ಚ್‌ ಘೋಷಿಸಲಾಗಿದೆ. ಉಳಿದಂತೆ ಧುಬ್ರಿ, ಕಾಮರೂಪ್‌, ನಲ್ಬಾರಿ, ದಿಮಾ ಹಸಾವೋ, ಕಚಾರ್‌, ಗೋಲ್ಪಾರಾ ಮತ್ತು ಕರೀಂಗಂಜ್‌ಗಳಲ್ಲೂ ಭಾರಿ ಮಳೆಯಾಗಲಿದ್ದು ಯಲ್ಲೋ ಅಲರ್ಚ್‌ ಘೋಷಿಸಲಾಗಿದೆ.