* 1980ರ ನಂತರ ಸ್ಮಾಲ್‌ಪಾಕ್ಸ್ ಲಸಿಕೆ ನಿಲ್ಲಿಸಲಾಗಿದೆ* ಸ್ಮಾಲ್‌ಪಾಕ್ಸ್ ಲಸಿಕೆ ಮಂಕಿಪಾಕ್ಸ್‌ಗೂ ಪರಿಣಾಮಕಾರಿ* ಹೀಗಾಗಿ ಸ್ಮಾಲ್‌ಪಾಕ್ಸ್ ಲಸಿಕೆ ಪಡೆಯದ ಮಕ್ಕಳು ಎಚ್ಚರಿಕೆ ವಹಿಸಬೇಕು* ಸೋಂಕಿನ ಲಕ್ಷಣಗಳ ಬಗ್ಗೆ ಎಚ್ಚರದಿಂದ ಇರಿ: ವಿಜ್ಞಾನಿ ಅಪರ್ಣಾ
ನವದೆಹಲಿ(ಮೇ.29): ಭಾರತದಲ್ಲಿ ಮಂಕಿಪಾಕ್ಸ್‌ನ ಪ್ರಕರಣಗಳು ಈವರೆಗೆ ವರದಿಯಾಗದಿದ್ದರೂ, ಸೋಂಕು ಮಕ್ಕಳಿಗೆ ತಗುಲುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಎಚ್ಚರಿಕೆ ವಹಿಸುವಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.
ಈ ಬಗ್ಗೆ ಮಾತನಾಡಿದ ಐಸಿಎಂಆರ್ ವಿಜ್ಞಾನಿ ಡಾ. ಅಪರ್ಣಾ ಮುಖರ್ಜಿ, ‘1980ರ ದಶಕದ ನಂತರ ಸರ್ಕಾರವು ಸ್ಮಾಲ್‌ಪಾಕ್ಸ್ (ಅಮ್ಮ) ಲಸಿಕೆಯನ್ನು ನೀಡುವುದನ್ನು ನಿಲ್ಲಿಸಲಾಗಿದೆ. ಆದರೆ, ಈ ಲಸಿಕೆಯು ಮಂಕಿಪಾಕ್ಸ್ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಅಧ್ಯಯನಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಸ್ಮಾಲ್‌ಪಾಕ್ಸ್ ಲಸಿಕೆಯನ್ನು ಪಡೆದುಕೊಳ್ಳದ ಮಕ್ಕಳಿಗೆ ಮಂಕಿಪಾಕ್ಸ್ ಕಾಡುವ ಸಾಧ್ಯತೆ ಹೆಚ್ಚು’ ಎಂದು ಎಚ್ಚರಿಸಿದ್ದಾರೆ.
‘ಮಂಕಿಪಾಕ್ಸ್ ಲಕ್ಷಣ ಕಂಡು ಬಂದಲ್ಲಿ ಗಾಬರಿ ಪಡುವ ಅಗತ್ಯವಿಲ್ಲ. ಕೇವಲ ನಿಕಟ ಸಂಪರ್ಕದಿಂದ ಮಾತ್ರ ರೋಗವು ಹರಡುವ ಸಾಧ್ಯತೆಯಿರುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳು, ವಯೋವೃದ್ಧರು ಮುಂಜಾಗ್ರತಾ ಕ್ರಮವಾಗಿ ಲಸಿಕೆ ಪಡೆಯುವುದು ಉತ್ತಮ’ ಎಂದು ಸಲಹೆ ನೀಡಿದ್ದಾರೆ.
219ಕ್ಕೆ ಏರಿಕೆ:
ಈ ನಡುವೆ ಮಂಕಿಪಾಕ್ಸ್‌ನ 19 ಪ್ರಕರಣಗಳು ವಿಶ್ವದ ವಿವಿಧ ಭಾಗಗಳಲ್ಲಿ ಶನಿವಾರ ವರದಿಯಾಗಿವೆ. ಇದರಿಂದ ಸೋಂಕಿತರ ಸಂಖ್ಯೆ 219ಕ್ಕೆ ಏರಿದೆ.
‘ಆದರೆ ಇದು ಕೇವಲ ಆರಂಭ ಮಾತ್ರ. ಇನ್ನೂ ಹೆಚ್ಚು ಪ್ರಕರಣಗಳು ವರದಿ ಆಗುವ ಸಾಧ್ಯತೆ ಇದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಸಿದೆ.
20 ದೇಶಕ್ಕೆ ವಿಸ್ತರಣೆ, ಕೇಸು 200ಕ್ಕೆ ಏರಿಕೆ
20ಕ್ಕಿಂತಲೂ ಹೆಚ್ಚಿನ ರಾಷ್ಟ್ರಗಳಲ್ಲಿ ಒಟ್ಟಾರೆ ಸುಮಾರು 200 ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಶುಕ್ರವಾರ ತಿಳಿಸಿದೆ.
ಮಂಕಿಪಾಕ್ಸ್ ವೈರಸ್‌ನಲ್ಲಿ ರೂಪಾಂತರವಾಗಿದ್ದು ಕಂಡು ಬಂದಿಲ್ಲ ಆದರೂ, ಆಫ್ರಿಕಾದ ಹೊರ ಭಾಗಗಳಲ್ಲಿಯೂ ಏಕಾಏಕಿ ಪ್ರಕರಣಗಳಲ್ಲಾಗುತ್ತಿರುವ ಏರಿಕೆಯ ಕಾರಣವಿನ್ನೂ ಸ್ಪಷ್ಟವಾಗಿಲ್ಲ. ಆದರೆ ವೈರಸ್ ಹೆಚ್ಚಾಗಿ ಸಲಿಂಗಕಾಮಿ ಪುರುಷರಲ್ಲಿ ಹರಡುತ್ತಿದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ. ಮಂಕಿಪಾಕ್ಸ್‌ಗೆ ಲಸಿಕೆಯಿಲ್ಲದಿದ್ದರೂ ಸಿಡುಬಿನ ಲಸಿಕೆಯು ಮಂಕಿಪಾಕ್ಸ್ ವಿರುದ್ಧ ಶೇ. 85ರಷ್ಟುಪರಿಣಾಮಕಾರಿಯಾಗಿದೆ. ರೋಗದ ಹರಡುವಿಕೆಯನ್ನು ತಡೆಯಲು ಲಭ್ಯವಿರುವ ಲಸಿಕೆಯನ್ನು ಸಂಗ್ರಹಿಸಿ ರಾಷ್ಟ್ರಗಳಿಗೆ ಹಂಚಿಕೆ ಮಾಡುವ ಕುರಿತು ಡಬ್ಲ್ಯುಎಚ್‌ಒ ಚಿಂತನೆ ನಡೆಸಿದೆ.
ಸೋಂಕಿನ ಮೇಲೆ ನಿಗಾಗೆ ಕೇಂದ್ರ ಸೂಚನೆ
ರಾಷ್ಟ್ರೀಯ ರೋಗ ನಿಯಂತ್ರಣ ಸಂಸ್ಥೆ (ಎನ್‌ಸಿಡಿಸಿ) ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಈ ಬಗ್ಗೆ ಸೂಚನೆ ನೀಡಿರುವ ಸಚಿವಾಲಯ, ಮಂಕಿಪಾಕ್ಸ್ ಹರಡುವಿಕೆಯ ಬಗ್ಗೆ ತೀವ್ರ ನಿಗಾ ವಹಿಸುವಂತೆ ಸೂಚಿಸಬೇಕು. ಸೋಂಕು ಹೆಚ್ಚಳವಾದರೆ ಸೋಂಕು ಪೀಡಿತ ದೇಶಗಳಿಂದ ಬಂದ ಜನರನ್ನು ದೇಶ ಪ್ರವೇಶಕ್ಕೂ ಮುನ್ನ ಪರೀಕ್ಷೆಗೆ ಒಳಪಡಿಸಬೇಕೆಂದು ಸೂಚಿಸಿದೆ.
ಡಬ್ಲ್ಯುಎಚ್‌ಒ ಪ್ರಕಾರ ಮಂಕಿಪಾಕ್ಸ್ ಸೋಂಕು ಸ್ಥಳೀಯವಾಗಿದ್ದು, ಕೆಲವು ದೇಶಗಳಲ್ಲಿ ರೋಗಗ್ರಸ್ಥ ಪ್ರಾಣಿಗಳಿಂದಾಗಿ ಜನರಿಗೆ ತಗುಲಿ ಮೈಮೇಲೆ ಬೊಬ್ಬೆ ಏಳುತ್ತವೆ. ಈ ದೇಶಗಳಿಂದ ಮರಳುತ್ತಿರುವ ಜನರಲ್ಲೂ ಸೋಂಕಿನ ಲಕ್ಷಣಗಳು ಕಂಡುಬರುತ್ತಿದೆ. ಹೀಗಾಗಿ ರೋಗದ ಹರಡುವಿಕೆಯನ್ನು ತಪ್ಪಿಸಲು ವಿದೇಶಗಳಲ್ಲಿನ ಮಂಕಿಪಾಕ್ಸ್ ಸೋಂಕಿನ ಸ್ಥಿತಿಯ ಬಗ್ಗೆ ಸತತ ನಿಗಾ ಇರಿಸಬೇಕು. ವಿದೇಶಗಳಿಂದ ಮರಳಿದ ಜನರಲ್ಲಿ ರೋಗದ ಲಕ್ಷಣಗಳು ಕಂಡುಬಂದಲ್ಲಿ ಮಾದರಿಯನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಬೇಕು ಎಂದು ಸಚಿವಾಲಯ ಸೂಚಿಸಿದೆ.
