ಸಂಕ್ರಾಂತಿಗೆ ಮೊದಲೇ ಗಾಳಿಪಟ ಹಾರಿಸಲು ಶುರು ಮಾಡಿದ ಕೋತಿ: ವೀಡಿಯೋ ವೈರಲ್
ಸಂಕ್ರಾಂತಿ ಹಬ್ಬಕ್ಕೂ ಮುನ್ನವೇ ಕೋತಿಯೊಂದು ಗಾಳಿಪಟ ಹಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಲ ದಿನಗಳ ಹಿಂದೆ ಕೋತಿಯೊಂದು ಮನೆಯ ಎಲ್ಲಾ ಕೆಲಸಗಳನ್ನು ಮಾಡುತ್ತಿರುವ ವೀಡಿಯೋವೊಂದು ವೈರಲ್ ಆಗಿತ್ತು, ಪಾತ್ರೆ ತೊಳೆಯುವುದು, ಚಪಾತಿ ಮಾಡುವುದು ಬಟ್ಟೆ ಒಗೆಯುವುದು ನೆಲ ಒರೆಸುವುದು ಸೇರಿದಂತೆ ಎಲ್ಲಾ ಕೆಲಸಗಳನ್ನು ಮಾಡುತ್ತಿತ್ತು. ಈ ವೀಡಿಯೋ ನೋಡಿ ಜನ ಅಚ್ಚರಿ ಪಟ್ಟಿದ್ದರು. ಆದರೆ ಈ ಘಟನೆ ಮಾಸುವ ಮುನ್ನವೇ ಈಗ ಕೋತಿಯ ಇನ್ನೊಂದು ವೀಡಿಯೋ ವೈರಲ್ ಆಗಿದೆ. ಕೋತಿಯೊಂದು ಗಾಳಿಪಟ ಹಾರಿಸುತ್ತಿದೆ.
ಸಂಕ್ರಾಂತಿ ಅಥವಾ ಪೊಂಗಲ್ ಸಮಯದಲ್ಲಿ ಜನ ಗಾಳಿಪಟ ಹಾರಿಸುವುದನ್ನು ನೀವು ನೋಡಿರಬಹುದು. ಮಕ್ಕಳು ದೊಡ್ಡವರೆನ್ನದೇ ಎಲ್ಲರೂ ಗಾಳಿಪಟ ಹಾರಿಸಿ ಸಂತಸ ಪಡುತ್ತಾರೆ. ಸಂಕ್ರಾಂತಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಜನ ಸಿದ್ಧತೆಯಲ್ಲಿ ತೊಡಗಿದ್ದಾರೆ. ಹೀಗಿರುವಾಗ ಕೋತಿಯೊಂದು ಮನೆ ಮಹಡಿ ಮೇಲೆ ನಿಂತು ಗಾಳಿಪಟ ಹಾರಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ಸ್ಟಾಗ್ರಾಮ್‌ನಲ್ಲಿ mahadev__833 ಎಂಬ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದೆ. ಈ ವೀಡಿಯೋವನ್ನು ಎಕ್ಸ್(ಟ್ವಿಟ್ಟರ್) ಬಳಕೆದಾರ ರೋಸಿ ಎಂಬುವವರು ಮತ್ತೆ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಭಾರತ ಆರಂಭಿಕರಿಗೆ ಅಲ್ಲ, ಬನಾರಸ್‌ನಲ್ಲಿ ಕೋತಿ ಗಾಳಿಪಟವನ್ನು ಹಾರಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಇದು ವಾರಣಾಸಿಯ ವೀಡಿಯೋ ಎಂದು ವರದಿಯಾಗಿದ್ದು, ಕೋತಿ ಮಹಡಿಯ ಮೇಲೆ ನಿಂತು ಗಾಳಿಪಟದ ದಾರವನ್ನು ನಿರ್ವಹಿಸುತ್ತಿದೆ. ಏನೂ ತೊಂದರೆಗೊಳಗಾಗದೇ ಮನುಷ್ಯರಂತೆ ತುಂಬಾ ಚೆನ್ನಾಗಿ ದಾರವನ್ನು ನಿಭಾಯಿಸುತ್ತಿದೆ. ವೀಡಿಯೋ ನೋಡಿದ ಅನೇಕರು ಕೋತಿಯ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.