Asianet Suvarna News Asianet Suvarna News

ವಿಶ್ವಕರ್ಮ ಯೋಜನೆಗೆ ನಾಳೆ ಪ್ರಧಾನಿ ಮೋದಿ ಚಾಲನೆ: 3 ಲಕ್ಷ ರೂ. ಸಾಲ; ದೇಶದ 30 ಲಕ್ಷ ಕುಶಲಕರ್ಮಿಗಳಿಗೆ ಲಾಭ

ಈ ಯೋಜನೆ ಅನ್ವಯ ಕುಶಲಕರ್ಮಿಗಳಿಗೆ ಶೇ. 5 ರಷ್ಟು ಬಡ್ಡಿದರದಲ್ಲಿ 3 ಲಕ್ಷ ರೂ.ವರೆಗೆ ಸಾಲ ನೀಡಲಾಗುವುದು. ಈ ಪೈಕಿ ಮೊದಲ ಹಂತದಲ್ಲಿ 1 ಲಕ್ಷ ರೂ. ಮತ್ತು 2ನೇ ಹಂತದಲ್ಲಿ 2 ಲಕ್ಷ ರೂ. ಸಾಲ ವಿತರಿಸಲಾಗುವುದು. 

modi to launch pm vishwakarma scheme on september 17 ash
Author
First Published Sep 16, 2023, 8:12 AM IST

ನವದೆಹಲಿ (ಸೆಪ್ಟೆಂಬರ್ 16, 2023): ಸುಮಾರು 30 ಲಕ್ಷ ಕುಶಲ ಕರ್ಮಿಗಳಿಗೆ ಶೇ.5 ರಷ್ಟು ಅಗ್ಗದ ಬಡ್ಡಿ ದರದಲ್ಲಿ 3 ಲಕ್ಷ ರೂ. ಸಾಲ ಸೇರಿದಂತೆ ವಿವಿಧ ರೀತಿಯಲ್ಲಿ ನೆರವು ನೀಡುವ 13 ಸಾವಿರ ಕೋಟಿ ರೂ. ಮೊತ್ತದ ವಿಶ್ವಕರ್ಮ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಲಿದ್ದಾರೆ. ವಿಶ್ವಕರ್ಮ ಜಯಂತಿ ಸೆಪ್ಟೆಂಬರ್‌ 17ರಂದು ನಡೆಯಲಿದ್ದು ಕಾಕತಾಳೀಯ ಎಂಬಂತೆ ಅದು ಪ್ರಧಾನಿ ಮೋದಿ ಅವರ ಜನ್ಮದಿನ ಕೂಡ. ಅದೇ ದಿನ ಯೋಜನೆಗೆ ಚಾಲನೆ ಸಿಗುವುದು ವಿಶೇಷ.

ಈ ಯೋಜನೆ ಅನ್ವಯ ಕುಶಲಕರ್ಮಿಗಳಿಗೆ ಶೇ. 5 ರಷ್ಟು ಬಡ್ಡಿದರದಲ್ಲಿ 3 ಲಕ್ಷ ರೂ.ವರೆಗೆ ಸಾಲ ನೀಡಲಾಗುವುದು. ಈ ಪೈಕಿ ಮೊದಲ ಹಂತದಲ್ಲಿ 1 ಲಕ್ಷ ರೂ. ಮತ್ತು 2ನೇ ಹಂತದಲ್ಲಿ 2 ಲಕ್ಷ ರೂ. ಸಾಲ ವಿತರಿಸಲಾಗುವುದು. ಮುಂದಿನ 5 ವರ್ಷಗಳ ಅವಧಿಯಲ್ಲಿ ಯೋಜನೆಗಾಗಿ ಕೇಂದ್ರ ಸರ್ಕಾರ 13 ಸಾವಿರ ಕೋಟಿ ರೂ. ವೆಚ್ಚ ಮಾಡಲಿದೆ.

ಇದನ್ನು ಓದಿ: ಈಗಲೂ ಮೋದಿಯೇ ನಂ. 1 ಜಾಗತಿಕ ಜನಪ್ರಿಯ ನಾಯಕ: ನಮೋಗೆ ಸರಿಸಾಟಿ ಯಾರೂ ಇಲ್ಲ!

ಕುಶಲಕರ್ಮಿಗಳ ಕುಟುಂಬ ಆಧರಿತ ಸಾಂಪ್ರದಾಯಿಕ ಕೌಶಲ್ಯವನ್ನು ಉಳಿಸಿ ಬೆಳೆಸುವ ಸಲುವಾಗಿ ಸರ್ಕಾರ ಈ ಯೋಜನೆ ಜಾರಿಗೆ ತರುತ್ತಿದೆ. ಜೊತೆಗೆ ಈ ಯೋಜನೆ ಮೂಲಕ ಅವರ ಕೌಶಲ್ಯ ಅಭಿವೃದ್ಧಿ, ತನ್ಮೂಲಕ ಆದಾಯ ಹೆಚ್ಚಳದ ಗುರಿಯನ್ನು ಹಾಕಿಕೊಳ್ಳಲಾಗಿದೆ.

ಯಾರಿಗೆ ಲಾಭ?:
ಮೊದಲ ಹಂತದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳ 18 ಸಾಂಪ್ರದಾಯಿಕ ಉದ್ಯಮಗಳನ್ನು ಯೋಜನೆ ವ್ಯಾಪ್ತಿಗೆ ತರಲಾಗಿದೆ. ಅವುಗಳೆಂದರೆ ಬಡಗಿ, ಬೋಟ್‌ ನಿರ್ಮಾಣ ಮಾಡುವವರು, ಕಮ್ಮಾರ, ಸುತ್ತಿಗೆ ಮತ್ತು ಟೂಲ್‌ ಕಿಟ್‌ ನಿರ್ಮಾಣ ಮಾಡುವವರು, ಶಸ್ತ್ರಾಸ್ತ್ರ ತಯಾರಿಸುವವರು, ಬೀಗ ತಯಾರಿಸುವವರು, ಅಕ್ಕಸಾಲಿಗ, ಕುಂಬಾರರು, ಶಿಲ್ಪ ಕೆತ್ತನೆ ಮಾಡುವವರು, ಚಮ್ಮಾರ, ಮೇಸ್ತ್ರಿ, ಮ್ಯಾಟ್‌/ಹಿಡಿ/ಬಾಸ್ಕೆಟ್‌ ತಯಾರಿಸುವವರು, ಸಾಂಪ್ರದಾಯಿಕ ಗೊಂಬೆ ತಯಾರಿಸುವವರು, ಕ್ಷೌರಿಕರು, ಹೂವಿನ ಹಾರ ತಯಾರಿಸುವವರು, ಧೋಬಿ, ದರ್ಜಿ, ಮೀನುಗಾರಿಕೆ ನೆಟ್‌ ತಯಾರಿಸುವವರು.

ಇದನ್ನೂ ಓದಿ: ದ್ವಾರಕಾದಲ್ಲಿ ‘ಯಶೋಭೂಮಿ’ಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿರೋ ಪ್ರಧಾನಿ ಮೋದಿ: ವೈಶಿಷ್ಟ್ಯತೆ ಹೀಗಿದೆ..

ವಿವಿಧ ನೆರವು:
ಈ ಯೋಜನೆಯ ಫಲಾನುಭವಿಗಳಿಗೆ ಪಿಎಂ ವಿಶ್ವಕರ್ಮ ಪ್ರಮಾಣ ಪತ್ರ, ಗುರುತಿನ ಚೀಟಿ ನೀಡಲಾಗುವುದು. ರಿಯಾಯಿತಿ ಬಡ್ಡಿ ದರದಲ್ಲಿ ಸಾಲ, ಕೌಶಲ್ಯ ಅಭಿವೃದ್ಧಿ, ಕೆಲಸಕ್ಕೆ ಅಗತ್ಯವಾದ ಉಪಕರಣಗಳ ನೆರವು, ಡಿಜಿಟಲ್‌ ಕ್ಷೇತ್ರಕ್ಕೆ ಉದ್ಯಮ ವರ್ಗಾವಣೆಗೆ ಆರ್ಥಿಕ ನೆರವು, ಮಾರುಕಟ್ಟೆ ಬೆಂಬಲವನ್ನು ಸರ್ಕಾರ ನೀಡಲಿದೆ.

ತರಬೇತಿ:
ಇದೇ ವೇಳೆ, ಕುಶಲಕರ್ಮಿಗಳ ಕೌಶಲ್ಯ ಅಭಿವೃದ್ಧಿಗೆ ಪ್ರಾರಂಭಿಕ ಮತ್ತು ಸುಧಾರಿತ ಎಂಬ ಎರಡು ಹಂತದಲ್ಲಿ ತರಬೇತಿ ನೀಡಲೂ ನಿರ್ಧರಿಸಲಾಗಿದೆ. ತರಬೇತಿ ಅವಧಿಯಲ್ಲಿ ನಿತ್ಯ 500 ರೂ. ಸ್ಟೈಪೆಂಡ್‌ ನೀಡಲಾಗುವುದು. ಅಲ್ಲದೆ ಆಧುನಿಕ ಉಪಕರಣ ಖರೀದಿಗೆ 15 ಸಾವಿರ ರೂ.ವರೆಗೆ ನೆರವು ಕೂಡಾ ನೀಡಲಾಗುವುದು.

ಇದನ್ನೂ ಓದಿ: G20 ಸಭೆಯಲ್ಲಿ ಮೋದಿ ಗೆಲುವು, ಹೂಡಿಕೆಯಲ್ಲಿ ಅದಾನಿ ಕಂಪನಿ ಗೆಲುವು: ಒಂದೇ ದಿನದಲ್ಲಿ 3.4 ಲಕ್ಷ ಕೋಟಿ ಲಾಭ

Follow Us:
Download App:
  • android
  • ios