ತಂತ್ರಜ್ಞಾನ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ ದಿನಕ್ಕೊಂದು ತಲ್ಲಣ ಸೃಷ್ಟಿಸುತ್ತಿರುವ ನಡುವೆಯೇ ಭಾರತ ಇದೇ ಮೊದಲ ಬಾರಿಗೆ ಜಾಗತಿಕ ಎಐ ಶೃಂಗವನ್ನು ನವದೆಹಲಿಯಲ್ಲಿ ಆಯೋಜಿಸಿದೆ. ಪ್ರಧಾನಿ ಮೋದಿ ಅವರು ಸೋಮವಾರ ಸಂಜೆ 5 ಗಂಟೆಗೆ ಶೃಂಗಕ್ಕೆ ಚಾಲನೆ ನೀಡಲಿದ್ದಾರೆ

ನವದೆಹಲಿ: ತಂತ್ರಜ್ಞಾನ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ ದಿನಕ್ಕೊಂದು ತಲ್ಲಣ ಸೃಷ್ಟಿಸುತ್ತಿರುವ ನಡುವೆಯೇ ಭಾರತ ಇದೇ ಮೊದಲ ಬಾರಿಗೆ ಜಾಗತಿಕ ಎಐ ಶೃಂಗವನ್ನು ನವದೆಹಲಿಯಲ್ಲಿ ಆಯೋಜಿಸಿದೆ. ಪ್ರಧಾನಿ ಮೋದಿ ಅವರು ಸೋಮವಾರ ಸಂಜೆ 5 ಗಂಟೆಗೆ ಶೃಂಗಕ್ಕೆ ಚಾಲನೆ ನೀಡಲಿದ್ದಾರೆ. ವಿಶ್ವಾದ್ಯಂತ ತಂತ್ರಜ್ಞಾನ ಕ್ಷೇತ್ರದಲ್ಲಿ ಗಮನಸೆಳೆದಿರುವ ಈ ಸಮ್ಮೇಳನದಲ್ಲಿ ವಿಶ್ವದ ಪ್ರಮುಖ ಎಐ ತಜ್ಞರು, ಟೆಕ್ನಾಲಜಿ ಕಂಪನಿಗಳ ಮುಖ್ಯಸ್ಥರು ಪಾಲ್ಗೊಳ್ಳದಿದ್ದಾರೆ.

Add Asianetnews Kannada as a Preferred SourcegooglePreferred

ದೆಹಲಿಯ ಭಾರತ್‌ ಮಂಟಪಂನಲ್ಲಿ ಈ 5 ದಿನಗಳ ಎಐ ಇಂಪ್ಯಾಕ್ಟ್‌ ಶೃಂಗ ಮತ್ತು ಎಐ ಇಂಪ್ಯಾಕ್ಟ್‌ ಎಕ್ಸ್‌ಪೋ ಆಯೋಜಿಸಲಾಗಿದೆ.ಸುಮಾರು 70 ಚದರ ಮೀಟರ್‌ ವಿಸ್ತೀರ್ಣ ಪ್ರದೇಶದಲ್ಲಿ ನಡೆಯಲಿರುವ ಎಐ ಎಕ್ಸ್‌ಪೋ ಹಾಗೂ ಜಾಗತಿಕ ಎಐ ಶೃಂಗವು ಅಂತಾರಾಷ್ಟ್ರೀಯ ಟೆಕ್ನಾಲಜಿ ಸಂಸ್ಥೆಗಳು, ಸ್ಟಾರ್ಟ್‌ಅಪ್‌ಗಳು, ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳು, ಸರ್ಕಾರಗಳು ಮತ್ತು ಅಂತಾರಾಷ್ಟ್ರೀಯ ಪಾಲುದಾರರನ್ನು ಒಂದೆಡೆ ಸೇರಿಸಲಿದೆ.

ಗೂಗಲ್‌ ಸಿಇಒ ಸುಂದರ್‌ ಪಿಚೈ, ಒಪನ್‌ ಎಐನ ಸ್ಯಾಮ್‌ ಆಲ್ಟ್‌ಮನ್‌, ಡೀಪ್‌ಮೈಂಡ್‌ ಟೆಕ್ನಾಲಜೀಸ್‌ ಸಿಇಒ ಡೆಮಿಸ್‌ ಹಸಾಬಿಸ್‌, ಆ್ಯಂಥ್ರೋಪಿಕ್‌ ಸಿಇಒ ಡೆರಿಯೋ ಅಮೋಡೈ, ಮೈಕ್ರೋಸಾಫ್ಟ್‌ ಅಧ್ಯಕ್ಷ ಬ್ರ್ಯಾಡ್‌ ಸ್ಮಿತ್‌ ಸೇರಿ ವಿಶ್ವದ ಪ್ರಮುಖ ಟೆಕ್‌ ದಿಗ್ಗಜ ಕಂಪನಿಗಳ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ. ಫ್ರಾನ್ಸ್‌ ಅಧ್ಯಕ್ಷ ಎಮ್ಯಾನ್ಯುಯೆಲ್‌ ಮ್ಯಾಕ್ರೋನ್‌, ಬ್ರೆಜಿಲ್‌ ಅಧ್ಯಕ್ಷ ಲುಲಾ ಡ ಸಿಲ್ವಾರಂಥ ಪ್ರಮುಖ ನೇತಾರರು, 45 ದೇಶಗಳ ಸಚಿವರು ಕೂಡ ಪಾಲ್ಗೊಳ್ಳಲಿದೆ. ವಿಶ್ವಸಂಸ್ಥೆ ಮುಖ್ಯ ಕಾರ್ಯದರ್ಶಿ, ಅಂತಾರಾಷ್ಟ್ರೀಯ ಸಂಘಟನೆಗಳ ಪ್ರಮುಖ ಹಿರಿಯ ಅಧಿಕಾರಿಗಳು ಕೂಡ ಉಪಸ್ಥಿತರಿರಲಿದ್ದಾರೆ.

ಯಾಕೆ ಮಹತ್ವದ್ದು?:

ಕೃತಕ ಬುದ್ಧಿಮತ್ತೆ ಕುರಿತ ಜಾಗತಿಕ ಸಮ್ಮೇಳನ ಈವರೆಗೆ ಅಭಿವೃದ್ಧಿ ಹೊಂದಿರುವ ದೇಶಗಳಲ್ಲಷ್ಟೇ ನಡೆಯುತ್ತಿತ್ತು. 2023ರಲ್ಲಿ ಬ್ರಿಟನ್‌, 2024ರಲ್ಲಿ ದಕ್ಷಿಣ ಕೊರಿಯಾದ ಸಿಯೋಲ್‌ ಮತ್ತು ಕಳೆದ ವರ್ಷ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಇಂಥ ಸಮ್ಮೇಳನ ನಡೆದಿತ್ತು. ಈ ಸಮ್ಮೇಳನಗಳಲ್ಲಿ ಎಐ ಸುರಕ್ಷತೆಯೇ ಮಹತ್ವವಾಗಿ ಚರ್ಚೆಯಾಗಿತ್ತು. ಆದರೆ, ಇದೇ ಮೊದಲ ಬಾರಿ ಗ್ಲೋಬಲ್ ಸೌಥ್‌ ದೇಶವೊಂದು ಆಯೋಜಿಸುತ್ತಿರುವ ಈ ಎಐ ಸಮ್ಮೇಳನದಲ್ಲಿ ಆರ್ಥಿಕ ಪ್ರಗತಿಗೆ ಎಐ ಅನ್ನು ಯಾವ ರೀತಿ ಬಳಸಿಕೊಳ್ಳಬಹುದು, ಹೇಗೆ ಸಾಮಾಜಿಕ ಸುಸ್ಥಿರತೆ ಮತ್ತು ಸಾಮಾಜಿಕ ಒಳಗೊಳ್ಳುವಿಕೆಗೆ ಅವಕಾಶ ಮಾಡಿಕೊಡಬಹುದು ಎಂಬುದು ಸೇರಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಯಲಿದೆ.

ಸಮ್ಮೇಳನಕ್ಕೆ ಜಿ20 ಮಾದರಿ ಭದ್ರತೆ

ಅಂತಾರಾಷ್ಟ್ರೀಯ ಮಟ್ಟದ ಗಣ್ಯರು ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕ ಎಐ ಶೃಂಗಕ್ಕೆ ಜಿ-20 ವೇಳೆ ನೀಡಲಾಗುವ ಬಿಗಿ ಭದ್ರತೆ ಕಲ್ಪಿಸಲಾಗಿದೆ. 10 ಸಾವಿರ ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಐದು ಆ್ಯಂಟಿ ಡ್ರೋನ್‌ ವ್ಯವಸ್ಥೆಗಳು, 500ಕ್ಕೂ ಅಧಿಕ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.