ಮೋದಿ ಸರ್‌ನೇಮ್‌ ಕೇಸ್‌ನಲ್ಲಿ ಸೂರತ್‌ ಕೋರ್ಟ್‌ನಿಂದ ತಪ್ಪಿತಸ್ಥ ಎಂದು ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ತೀರ್ಮಾನ ಮಾಡಿದ್ದಾರೆ. ಇದರ ನಡುವೆ ಕಾಂಗ್ರೆಸ್‌ನ ಟೀಕೆಯ ಬಗ್ಗೆ ಮಾತನಾಡಿರುವ ಬಿಜೆಪಿ, ಕನಿಷ್ಠ ದೇಶದ ನ್ಯಾಯವ್ಯವಸ್ಥೆಗಾದರೂ ಗೌರವ ನೀಡಿ ಎಂದು ಹೇಳಿದೆ. 

ನವದೆಹಲಿ (ಮಾ.24): ಮೋದಿ ಸರ್‌ನೇಮ್‌ ಕೇಸ್‌ ವಿಚಾರದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ತಪ್ಪಿತಸ್ಥ ಎಂದು ಸೂರತ್‌ ಕೋರ್ಟ್‌ ತೀರ್ಪು ನೀಡಿರುವುದು ಪಕ್ಷದಲ್ಲಿ ತಳಮಳಕ್ಕೆ ಕಾರಣವಾಗಿದೆ. ಸೂರತ್‌ ಕೋಟರ್‌ ನೀಡಿರುವ ಎರಡು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ದಂಡ ಶಿಕ್ಷೆಯನ್ನು ಹೈಕೋರ್ಟ್‌ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಲು ರಾಹುಲ್‌ ಗಾಂಧಿಗೆ 30 ದಿನಗಳ ಕಾಲಾವಕಾಶ ಇದೆ. ಇದರ ನಡುವೆ ರಾಹುಲ್‌ ಗಾಂಧಿ ತನಗೆ ವಿಧಿಸಿರುವ ಶಿಕ್ಷೆಯ ಕುರಿತಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಇನ್ನೊಂದೆಡೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ರಾಹುಲ್‌ ಗಾಂಧಿಗೆ ಶಿಕ್ಷೆ ಕೊಟ್ಟಿರೋದು ಯಾವುದೇ ರಾಜಕೀಯ ಪಕ್ಷವಲ್ಲ. ದೇಶದ ನ್ಯಾಯವ್ಯವಸ್ಥೆ. ಈಗ ಅವರು ನ್ಯಾಯಾಂಗವನ್ನೂ ಪ್ರಶ್ನೆ ಮಾಡಲು ಆರಂಭಿಸಿದ್ದಾರೆ. ರಾಹುಲ್‌ ಗಾಂಧಿ ಒಬಿಸಿ ಸಮುದಾಯವನ್ನು ಸಾರ್ವಜನಿಕ ಸಭೆಯಲ್ಲಿ ನಿಂದಿಸಿದ್ದು ಮಾತ್ರವಲ್ಲದೆ, ತಮ್ಮ ಹೇಳಿಕೆಗೆ ಕ್ಷಮೆ ಕೇಳಲು ಕೂಡ ನಿರಾಕರಿಸಿದ್ದರು. ಈಗ ದೇಶದ ನ್ಯಾಯವ್ಯವಸ್ಥೆ ಶಿಕ್ಷೆ ನೀಡಿದೆ. ಬಳಿಕ ದೇಶದ ಜನರೂ ಕೂಡ ಶಿಕ್ಷೆ ನೀಡಲಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ತಿಳಿಸಿದ್ದಾರೆ.

ಸಂಸತ್ತಿನಲ್ಲಿರುವ ಕಾಂಗ್ರೆಸ್‌ ಸಂಸದೀಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಹುಲ್‌ ಗಾಂಧಿ, ಕಾಂಗ್ರೆಸ್‌ನ ಸಂಸದರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಪಕ್ಷದ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಉಪಸ್ಥಿತರಿದ್ದರು.

ಸಂಜೆ ಕಾಂಗ್ರೆಸ್‌ ಮಹತ್ವದ ಸಭೆ: ಈ ನಡುವೆ ಕಾಂಗ್ರೆಸ್‌ ಪಕ್ಷ ಶುಕ್ರವಾರ ಸಂಜೆ ಪಕ್ಷದ ಸ್ಟೀರಿಂಗ್‌ ಸಮಿತಿ ಸದಸ್ಯರು, ಪಿಸಿಸಿ ಅಧ್ಯಕ್ಷರು, ಸಿಎಲ್‌ಪಿ ನಾಯಕರು ಮತ್ತು ಕಾಂಗ್ರೆಸ್‌ ನೇತೃತ್ವದ ಸಂಘಗಳ ನಾಯಕರ ಸಭೆಯಲ್ಲಿ ನವದೆಹಲಿಯಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆಸಲಿದೆ. ಒಟ್ಟಾರೆ ಕಾಂಗ್ರೆಸ್‌ ಪಕ್ಷದ ದೊಡ್ಡ ಮಟ್ಟದ ಪ್ರತಿಭಟನೆಯನ್ನು ನಡೆಸುವ ಯೋಜನೆ ರೂಪಿಸಿದೆ. ಅದಲ್ಲದೆ, ಇಂದು ವಿಜಯ್‌ ಚೌಕದಲ್ಲಿ ಪಕ್ಷ ಪ್ರತಿಭಟನೆ ನಡೆಸಲಿದೆ ಎನ್ನಲಾಗಿದೆ. ರಾಷ್ಟ್ರಪತಿ ದ್ರೌಪದು ಮುರ್ಮು ಅವರನ್ನೂ ಭೇಟಿಯಾಗಿ ತನ್ನ ಮನವಿಯನ್ನು ಸಲ್ಲಿಕೆ ಮಾಡಲಿದೆ.

ರಾಗಾಗೆ ಶಿಕ್ಷೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ತಳಮಳ, ಸಂಸದ ಸ್ಥಾನ ಕಳೆದುಕೊಳ್ತಾರಾ ರಾಹುಲ್‌ ಗಾಂಧಿ?

ಈ ನಡುವೆ ಕಾಂಗ್ರೆಸ್‌ ನೇತೃತ್ವದ 14 ಪ್ರತಿಪಕ್ಷಗಳು ಶುಕ್ರವಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿವೆ. ಕೇಂದ್ರ ಸರ್ಕಾರ ತನಿಖಾ ಏಜೆನ್ಸಿಗಳಾದ ಇಡಿ ಹಾಗೂ ಸಿಬಿಐಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದೆ. ಈ ಕುರಿತಾಗಿ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಗ್ವಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ಅವರಿರುವ ಪೀಠಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಸಿಜೆಐ ಪೀಠ ಏಪ್ರಿಲ್‌ 5 ರಂದು ಇದರ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಮಾನನಷ್ಟ ಕೇಸ್‌: ರಾಹುಲ್‌ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ, ಜಾಮೀನು ಪಡೆದ ರಾಗಾ!

ದೃಢವಾದ ರಾಜಕೀಯ ಭಾಷಣವು ಪ್ರಜಾಪ್ರಭುತ್ವದ ಮೂಲತತ್ವವಾಗಿದೆ ಮತ್ತು ಪ್ರತಿಪಕ್ಷಗಳ ಪ್ರಮುಖ ಧ್ವನಿಯನ್ನು ಮೌನಗೊಳಿಸಲು ಕಾನೂನನ್ನು ಮಧ್ಯ ತರಬಾರದು ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಶುಕ್ರವಾರ ಹೇಳಿದ್ದಾರೆ, ರಾಹುಲ್ ಗಾಂಧಿಗೆ 2019 ರ ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ಸೂರತ್ ನ್ಯಾಯಾಲಯವು ಶಿಕ್ಷೆ ವಿಧಿಸಿದ ಒಂದು ದಿನದ ನಂತರ ಅವರು ಯಾರನ್ನೂ ಹೆಸರಿಸದೇ ಚಿದಂಬರಂ ಟ್ವೀಟ್‌ ಮಾಡಿದ್ದಾರೆ. ರಾಹುಲ್‌ ಗಾಂಧಿಯವರ ವರ್ತನೆ ಭಾರತ್‌ ತೋಡೋ ಆಗಿದೆ. ಇದು ಭಾರತ್‌ ಜೋಡೋ ಎಂದು ಎಂದಿಗೂ ಅನಿಸೋದಿಲ್ಲ. ಪ್ರಜಾಪ್ರಭುತ್ವವನ್ನು ಪ್ರಶ್ನೆ ಮಾಡ್ತಾರೆ. ಒಬಿಸಿ ಸಮುದಾಯವನ್ನು ನಿಂದನೆ ಮಾಡುತ್ತಾರೆ. ವಿದೇಶಿ ನೆಲದಲ್ಲಿ ದೇಶದ ಮಾನ ಕಳೆಯುತ್ತಾರೆ. ರಾಹುಲ್‌ ಗಾಂಧಿಯ ಕುರಿತಾಗಿ ತೀರ್ಪು ಮಾಡಿರುವುದು ಕೋರ್ಟ್‌. ಆದರೆ, ಈಗ ಕಾಂಗ್ರೆಸ್‌ ಕಾನೂನು ನೀಡಿದ ತೀರ್ಪನ್ನೂ ಪ್ರಶ್ನೆ ಮಾಡುತ್ತಿದೆ ಎಂದು ಸಚಿವ ಭೂಪೇಂದರ್‌ ಯಾದವ್‌ ಹೇಳಿದ್ದಾರೆ.