ಬೆಂಗಳೂರು(ಮಾ.02): ದೇಶದಲ್ಲಿ ಎರಡನೇ ಹಂತದ ಕೊರೋನಾ ಲಸಿಕೆ ಅಭಿಯಾನ ಆರಂಭಗೊಂಡಿದೆ. ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿ ಕೂಡಾ ಏಮ್ಸ್‌ಗೆ ತೆರಳಿ ಲಸಿಕೆ ಪಡೆದಿದ್ದಾರೆ. ಹೀಗಿರುವ ಪಿಎಂ ಮೋದಿ ಈ ನಡೆಯನ್ನು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಶ್ಲಾಘಿಸಿದ್ದು,  ಪ್ರಧಾನಿ ಮೋದಿ ಕೊರೋನಾ ಲಸಿಕೆ ಪಡೆದುಕೊಂಡಿದ್ದು ನಾಯಕತ್ವಕ್ಕೆ ಒಂದು ಉತ್ತಮ ಉದಾಹರಣೆ. ತಾನೊಬ್ಬ ನಿಜವಾದ ನಾಯಕನೆಂದು ಮೋದಿ ತೋರಿಸಿಕೊಟ್ಟಿದ್ದಾರೆ. ಅವರಿಂದ ಪ್ರೇರೇಪಿತನಾಗಿ ನಾನು ಲಸಿಕೆ ಪಡೆದುಕೊಳ್ಳುತ್ತಿದ್ದೇನೆ ಹೇಳಿದ್ದಾರೆ.

ತಮ್ಮ ಪತ್ನಿ ಸುಧಾ ಮೂರ್ತಿ ಅವರೊಂದಿಗೆ ಮಂಗಳವಾರ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಕೊರೋನಾ ಲಸಿಕೆ ಪಡೆದುಕೊಂಡ  ನಾರಾಯಣ ಮೂರ್ತಿಸುಧಾ ಹಾಗೂ ನಾನು ಲಸಿಕೆಗೆ ನೋಂದಣಿ ಮಾಡಿಕೊಂಡೆವು. ಎಲ್ಲವೂ ಸುಲಲಿತವಾಗಿ ನಡೆಯಿತು. 28 ದಿನಗಳ ನಂತರ ಮತ್ತೆ ಎರಡನೇ ಡೋಸ್ ಲಸಿಕೆ ಪಡೆಯುತ್ತೇವೆ ಎಂದೂ ಹೇಳಿದ್ದಾರೆ.

ಭಾರತದಲ್ಲಿ ಜನವರಿ 16ರಿಂದ ಕೊರೊನಾ ಸೋಂಕಿನ ವಿರುದ್ಧ ಲಸಿಕಾ ಅಭಿಯಾನ ಆರಂಭಗೊಂಡಿದ್ದು, ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿತ್ತು.

ಮಾರ್ಚ್ 01ರಿಂದ ಎರಡನೇ ಹಂತದ ಕೊರೊನಾ ಲಸಿಕಾ ಅಭಿಯಾನ ಆರಂಭಗೊಂಡಿದ್ದು, ಮೊದಲು 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಇತರೆ ಆರೋಗ್ಯ ಸಮಸ್ಯೆಗಳುಳ್ಳ 45 ವರ್ಷ ಮೇಲ್ಪಟ್ಟವರಿಗೆ ಕೂಡ ಲಸಿಕೆ ನೀಡಲಾಗುತ್ತದೆ.