ಪ್ರಧಾನಿ ಹುದ್ದೆಗೆ ಇಲ್ಲಿ ಮೋದಿಯೇ ಅಚ್ಚುಮೆಚ್ಚು| ಬಂಗಾಳ, ಪುದುಚೇರಿ, ಕೇರಳ, ಅಸ್ಸಾಂನಲ್ಲಿ ನಮೋ ಹವಾ| ತಮಿಳುನಾಡಿನಲ್ಲಿ ಪ್ರಧಾನಿ ಹುದ್ದೆಗೆ ರಾಹುಲ್‌ ನೆಚ್ಚಿನ ವ್ಯಕ್ತಿ| ಐಎಎನ್‌ಎಸ್‌-ಸಿ ವೋಟರ್‌ ಸಮೀಕ್ಷೆ

ನವದೆಹಲಿ(ಜ.20): ಈ ಬೇಸಿಗೆಯಲ್ಲಿ ಚುನಾವಣೆ ಎದುರಿಸುತ್ತಿರುವ 5 ರಾಜ್ಯಗಳ ಪೈಕಿ 4 ರಾಜ್ಯಗಳಲ್ಲಿ ನರೇಂದ್ರ ಮೋದಿ ಅಚ್ಚುಮೆಚ್ಚಿನ ನಾಯಕರಾಗಿ ಹೊರಹೊಮ್ಮಿದ್ದಾರೆ. ‘ಪ್ರಧಾನಿ ಹುದ್ದೆಗೆ ಅಚ್ಚುಮೆಚ್ಚಿನ ವ್ಯಕ್ತಿ ಮೋದಿ’ ಎಂಬುದು ಐಎಎನ್‌ಎಸ್‌-ಸಿ ವೋಟರ್‌ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಆದರೆ ತಮಿಳುನಾಡಿನ ಜನರು, ‘ಪ್ರಧಾನಿ ಹುದ್ದೆಗೆ ನಮಗೆ ರಾಹುಲ್‌ ಗಾಂಧಿ ಅಚ್ಚುಮೆಚ್ಚು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೋದಿ ಅವರ ಪರ ಪುದುಚೇರಿಯಲ್ಲಿ ಶೇ.50.67, ಪಶ್ಚಿಮ ಬಂಗಾಳದಲ್ಲಿ 54.53, ಕೇರಳದಲ್ಲಿ ಶೇ.36. 51 ಹಾಗೂ ಅಸ್ಸಾಂನಲ್ಲಿ ಶೇ.45.52 ಜನರು, ‘ಪ್ರಧಾನಿ ಹುದ್ದೆಗೆ ಮೋದಿಯೇ ಅಚ್ಚುಮೆಚ್ಚು’ ಎಂದು ಮತ ಚಲಾಯಿಸಿದ್ದಾರೆ. ಆದರೆ ತಮಿಳುನಾಡಿನಲ್ಲಿ ಇದಕ್ಕೆ ವ್ಯತಿರಿಕ್ತ ಪ್ರತಿಕ್ರಿಯೆ ಕಂಡುಬಂದಿದ್ದು, ರಾಹುಲ್‌ ಗಾಂಧಿ ಪರ ಶೇ.48 ಹಾಗೂ ಮೋದಿ ಪರ ಶೇ.25.59 ಮತ ಮಾತ್ರ ಬಿದ್ದಿವೆ.

ಇನ್ನು ‘ಪ್ರಧಾನಿ ಹುದ್ದೆಗೆ ನೇರ ಚುನಾವಣೆ ನಡೆದರೆ ನಾವು ಮೋದಿಗೆ ಮತ ಹಾಕುತ್ತೇವೆ’ ಎಂದು ಪುದುಚೇರಿಯಲ್ಲಿ ಶೇ.57.97, ಪ.ಬಂಗಾಳದಲ್ಲಿ ಶೇ.62.19 , ತಮಿಳುನಾಡಿನಲ್ಲಿ ಶೇ.26.62, ಕೇರಳದಲ್ಲಿ ಶೇ.36.84 ಹಾಗೂ ಅಸ್ಸಾಂನಲ್ಲಿ ಶೇ.43.62ರಷ್ಟುಮತದಾರರು ಹೇಳಿದ್ದಾರೆ.

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಪರ ಪ.ಬಂಗಾಳದಲ್ಲಿ ಒಬ್ಬರೂ ಒಲವು ವ್ಯಕ್ತಪಡಿಸಿಲ್ಲ. ಉಳಿದ 4 ರಾಜ್ಯಗಳಲ್ಲಿ ಶೇ.10ಕ್ಕಿಂತ ಕಮ್ಮಿ ಮತ ಬಂದಿವೆ. ಮನಮೋಹನ ಸಿಂಗ್‌ ಪರ ಕೂಡ ಶೇ.10ಕ್ಕಿಂತ ಕಡಿಮೆ ಒಲವು ವ್ಯಕ್ತವಾಗಿದೆ. 45 ಸಾವಿರ ಜನರನ್ನು ಸಂದರ್ಶಿಸಿ ಸಮೀಕ್ಷೆ ಸಿದ್ಧಪಡಿಸಲಾಗಿದೆ.