* ವಿಪಕ್ಷಗಳಿಂದ ದಿಕ್ಕು ತಪ್ಪಿಸುವ ಕೆಲಸ* ಅಭಿವೃದ್ಧಿ ವಿಷಯ ಬಿಟ್ಟು ಅನ್ಯ ವಿವಾದ ಸೃಷ್ಟಿಯತ್ನ* ಸ್ವಾರ್ಥಕ್ಕೋಸ್ಕರ ವಿಪಕ್ಷಗಳಿಂದ ಇಂಥ ನಡೆ* ಬಡವರ ಏಳ್ಗೆಗೆ ಶ್ರಮಿಸಿ, 25 ವರ್ಷದ ಭವಿಷ್ಯದತ್ತ ಗಮನ ಹರಿಸಿ
ಜೈಪುರ(ಮೇ.21): ‘8 ವರ್ಷಗಳಿಂದ ನನ್ನ ಸರ್ಕಾರ ಸಾಮಾಜಿಕ ನ್ಯಾಯ ಹಾಗೂ ಉತ್ತಮ ಆಡಳಿತಕ್ಕೆ ತನ್ನನ್ನು ತಾನು ಸಮರ್ಪಿಸಿಕೊಂಡಿದೆ. ಆದರೆ ಈ ಸಂದರ್ಭದಲ್ಲಿ ದೇಶಕ್ಕೆ ಸಂಬಂಧಿಸಿದ ಮುಖ್ಯ ವಿಷಯಗಳಿಂದ ದಿಕ್ಕು ತಪ್ಪಿಸುವ ಉದ್ದೇಶದಿಂದ ವಿಪಕ್ಷಗಳು ಹಾಕಿರುವ ಖೆಡ್ಡಾಗೆ ಬಿಜೆಪಿಗರು ಬೀಳಬಾರದು. ರಾಷ್ಟ್ರೀಯ ಹಿತಾಸಕ್ತಿ ವಿಷಯಗಳಿಗೆ ಬಿಜೆಪಿಗರು ಅಂಟಿಕೊಳ್ಳಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಜೈಪುರದಲ್ಲಿ ಶುಕ್ರವಾರ ಆರಂಭವಾದ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯಲ್ಲಿ ವರ್ಚುವಲ್ ವಿಧಾನದಲ್ಲಿ ಮಾತನಾಡಿದ ಮೋದಿ, ‘ಗುರಿ ತಲುಪಲು ಅಡ್ಡದಾರಿ ಹಿಡಿಯಬಾರದು ದೇಶದ ಹಿತಾಸಕ್ತಿಗೆ ಸಂಬಂಧಿಸಿದ ಮೂಲ ವಿಷಯಗಳತ್ತ ಗಮನ ಹರಿಸಬೇಕು. ಇನ್ನು ಮುಂದಿನ 25 ವರ್ಷಗಳ ಗುರಿಯತ್ತ ಬಿಜೆಪಿ ಗಮನ ಹರಿಸಬೇಕು. ಆ ನಿಟ್ಟಿನಲ್ಲೇ ಕೆಲಸ ಮಾಡಬೇಕು’ ಎಂದರು.
'ಇದು ಹೊಸ ಭಾರತ': ಕಾನ್ಸ್ ಚಲನಚಿತ್ರೋತ್ಸವದಲ್ಲಿ ಪ್ರಧಾನಿ ಮೋದಿ ಡಿಜಿಟಲ್ ಆರ್ಥಿಕತೆ ಶ್ಲಾಘಿಸಿದ ನಟ ಆರ್ ಮಾಧವನ್
ದೇಶದಲ್ಲಿ ಈಗ ಕಾಶಿಯ ಗ್ಯಾನವಾಪಿ ಮಂದಿರ, ಮಥುರಾದ ಕೃಷ್ಣ ಮಂದಿರ ವಿವಾದಗಳು ಏರ್ಪಟ್ಟಿವೆ ಹಾಗೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 8 ವರ್ಷ ಸಮೀಪಿಸುತ್ತಿದೆ. ಈ ವೇಳೆ ಮೋದಿ ಈ ಹೇಳಿಕೆ ನೀಡಿರುವುದು ಇಲ್ಲಿ ಗಮನಾರ್ಹ.
ವಿಪಕ್ಷಗಳಿಗೆ ಚಾಟಿ:
‘ಬಿಜೆಪಿ ಅಭಿವೃದ್ಧಿ ವಿಷಯಗಳನ್ನು ಮುಖ್ಯ ವಾಹಿನಿಗೆ ತಂದಿದೆ. ಆದರೆ ಕೆಲವು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥ ಹಾಗೂ ಲಾಭಕ್ಕೋಸ್ಕರ ದೇಶದ ಭವಿಷ್ಯದ ಜತೆ ಚೆಲ್ಲಾಟ ಆಡುತ್ತಿವೆ. ಇಂಥ ಪಕ್ಷಗಳು ಅಭಿವೃದ್ಧಿ ವಿಷಯಗಳಿಂದ ಜನರ ಗಮನ ಬೇರೆಡೆ ಸೆಳೆಯಲು ದಿಕ್ಕು ತಪ್ಪಿಸುವ ಯತ್ನ ನಡೆಸುತ್ತಿವೆ. ಸಮಾಜದಲ್ಲಿ ಉದ್ವಿಗ್ನತೆ ಸೃಷ್ಟಿಸುತ್ತಿವೆ. ಹೀಗಾಗಿ ವಿಪಕ್ಷಗಳ ಖೆಡ್ಡಾಗೆ ಬಿಜೆಪಿಗರು ಬೀಳಬಾರದು. ಏಕ ಭಾರತ ಶ್ರೇಷ್ಠ ಭಾರತ ತ್ವದ ಅಡಿಯಲ್ಲಿ ಬಿಜೆಪಿಗರು ಮುನ್ನಡೆಯಬೇಕು. ಅಡ್ಡದಾರಿ ಹಿಡಿಯದೇ ಬಡವರ ಏಳ್ಗೆಗೆ ಶ್ರಮಿಸಬೇಕು. ಸರ್ಕಾರದ ಯೋಜನೆಗಳಿಂದ ಯಾವುದೇ ಬಡವರು ಹೊರಗೆ ಉಳಿಯದಂತೆ ನೋಡಿಕೊಳ್ಳಬೇಕು’ ಎಂದು ಮೋದಿ ಕರೆ ನೀಡಿದರು.
‘ಈಗ ದೇಶ ಸ್ವಾತಂತ್ರ್ಯ ಕಂಡು 75 ವರ್ಷಗಳಾವಗಿವೆ. ಇನ್ನು ಮುಂದಿನ 25 ವರ್ಷದಲ್ಲಿ ಏನು ಸಾಧಿಸಬೇಕು ಎಂಬ ಕಡೆ ಬಿಜೆಪಿಗರು ಗಮನ ಹರಿಸಬೇಕು. ಇನ್ನೇನು ಕೆಲವೇ ದಿನಗಳಲ್ಲಿ ನಮ್ಮ ಸರ್ಕಾರ 8 ವರ್ಷ ಪೂರೈಸುತ್ತಿದೆ. ಈ 8 ವರ್ಷಗಳು ಜನರ ಆಶೋತ್ತರ ಈಡೇರಿಸುವ ವರ್ಷಗಳಾಗಿವೆ. ಹೀಗಾಗಿ 2014ರ ನಂತರ ಜನರಲ್ಲಿ ಸರ್ಕಾರದ ಆಡಳಿತ ಹಾಗೂ ಕೊಡುಗೆಗಳ ಮೇಲೆ ವಿಶ್ವಾಸ ಮೂಡಿದೆ’ ಎಂದರು.
ಕಿವುಡರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಭಾರತ ತಂಡಕ್ಕೆ ಮೋದಿ ಔತಣಕೂಟ
ಕಾಂಗ್ರೆಸ್‌ನ ವಂಶಪಾರಂಪರ‍್ಯ ಆಡಳಿತವನ್ನು ಮತ್ತೆ ಟೀಕಿಸಿದರ ಮೋದಿ, ‘ನಾವು ಪ್ರಜಾಸತ್ತೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ಆದರೆ ಕೆಲವು ಪಕ್ಷಗಳು ಕುಟುಂಬ ಹಿತಾಸಕ್ತಿಯತ್ತ ಗಮನ ಹರಿಸಿ ದೇಶಕ್ಕೆ ಹಾನಿ ಮಾಡಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
