ನವದೆಹಲಿ(ನ.28): ಪಕ್ಷದ ಎಚ್ಚರಿಕೆಯನ್ನು ಕಡೆಗಣಿಸಿ ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯುತ್ತಿರುವ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಕೊನೆಗೂ ಮೋದಿ ಸರ್ಕಾರ ಛಾಟಿಯೇಟು ನೀಡಿದೆ.

ಸಾಧ್ವಿ ಪ್ರಜ್ಞಾ ಅವರನ್ನು ರಕ್ಷಣಾ ಇಲಾಖೆಯ ಸಲಹಾ ಸಮಿತಿಯಿಂದ ಕೈಬಿಡಲಾಗಿದ್ದು, ಅಧಿವೇಶನದ ವೇಳೆ ಸಂಸದೀಯ ಪಕ್ಷದ ಸಭೆಯಲ್ಲಿ ಭಾಗವಹಿಸದಿರುವಂತೆ ಬಿಜೆಪಿ ಕಟ್ಟುನಿಟ್ಟಿನ ಆಜ್ಞೆ ಹೊರಡಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಬಿಜೆಪಿ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ, ಲೋಕಸಭೆಯಲ್ಲಿ ಗೋಡ್ಸೆ ಅವರನ್ನು ದೇಶಭಕ್ತ ಎಂದು ಕರೆದ ಸಾಧ್ವಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

ಗೋಡ್ಸೆಯನ್ನು ಮತ್ತೆ ‘ದೇಶಭಕ್ತ’ ಎಂದ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ!

ಸಾಧ್ವಿ ಹೇಳಿಕೆ ಖಂಡನೀಯ ಎಂದ ನಡ್ಡಾ, ಬಿಜೆಪಿ ಎಂದಿಗೂ ಅವರ ಹೇಳಿಕೆಯನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಚಳಿಗಾಲ ಅಧಿವೇಶನದ ವೇಳೆ ಬಿಜೆಪಿ ಸಂಸದೀಯ ಪಕ್ಷದ ಸಭೆಗಳಲ್ಲಿ ಪ್ರಜ್ಞಾ ಭಾಗವಹಿಸುವಂತಿಲ್ಲ ಎಂದು ಅವರು ಗುಡುಗಿದ್ದಾರೆ.

ನಿನ್ನೆ ಲೋಕಸಭೆಯಲ್ಲಿ ಮಾತನಾಡಿದ್ದ ಪ್ರಜ್ಞಾ, ನಾಥೂರಾಮ್ ಗೋಡ್ಸೆ ದೇಶಭಕ್ತ ಎಂದು ಕರೆದು ವಿವಾದ ಸೃಷ್ಟಿಸಿದ್ದರು. ಪ್ರಜ್ಞಾ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದ್ದ ವಿಪಕ್ಷಗಳು, ಸಾಧ್ವಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದವು.

ಪದೇ ಪದೇ ಗೋಡ್ಸೆಯನ್ನು ಹೊಗಳುತ್ತಿರುವ ಸಾಧ್ವಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳದ ಮೋದಿ ಕೂಡ ಗೋಡ್ಸೆ ಆಲೋಚನೆಯ ಪ್ರತಿಪಾದಕರು ಎಂದು ಕಾಂಗ್ರೆಸ್ ಹರಿಹಾಯ್ದಿತ್ತು.