ದೆಹಲಿ ಕಾರು ಸ್ಫೋಟ ಭಯೋತ್ಪಾದಕ ಕೃತ್ಯ, ಕೇಂದ್ರದಿಂದ ಅಧಿಕೃತ ಘೋಷಣೆ ಬೆನ್ನಲ್ಲೇ ಭದ್ರತಾ ಸಭೆ ನಡೆಯುತ್ತಿದೆ. ಪ್ರಧಾನಿ ಮೋದಿ, ಅಜಿತ್ ದೋವಲ್, ಅಮಿತ್ ಶಾ ಸೇರಿದಂತೆ ಪ್ರಮುಖರ ಉನ್ನತ ಮಟ್ಟದ ಸಭೆ ಆಪರೇಶನ್ ಸಿಂದೂರ್ 2ನೇ ಭಾಗದ ಸುಳಿವು ನೀಡುತ್ತಿದೆ.
ನವದೆಹಲಿ (ನ.11) ದೆಹಲಿ ಕಾರು ಸ್ಫೋಟದ ಪ್ರಕರಣ ತೀವ್ರಗೊಂಡಿದೆ. ಶಂಕಿತ ಉಗ್ರರನ್ನು ಅರೆಸ್ಟ್ ಮಾಡಲಾಗುತ್ತಿದೆ. ಘಟನೆ ನಡೆದ 2 ದಿನಗಳ ಬಳಿಕ ಎಲ್ಲಾ ದಾಖಲೆ ಸಂಗ್ರಹಿಸಿರುವ ಕೇಂದ್ರ ಸರ್ಕಾರ ದೆಹಲಿ ಕಾರು ಸ್ಫೋಟ ಭಯೋತ್ಪಾದಕ ಕೃತ್ಯ ಎಂದು ಅಧಿಕೃತವಾಗಿ ಘೋಷಿಸಿದೆ. ಕೇಂದ್ರ ಸಚಿವ ಸುಂಪುಟ ಸಭೆ ಬಳಿಕ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ದೆಹಲಿ ಕಾರು ಸ್ಫೋಟ ಅತ್ಯಂತ ಭೀಕರ ಭಯೋತ್ಪಾದಕ ಕೃತ್ಯ. ಇದಕ್ಕೆ ತಕ್ಕ ಶಾಸ್ತಿ ಮಾಡುತ್ತೇವೆ ಎಂದಿದ್ದಾರೆ. ಕ್ಯಾಬಿನೆಟ್ ಈ ಕೃತ್ಯವನ್ನು ಉಗ್ರವಾಗಿ ಖಂಡಿಸಿದೆ. ಭಯೋತ್ಪಾದನೆ, ಉಗ್ರ ದಾಳಿ ವಿರುದ್ದ ಭಾರತ ಶೂನ್ಯ ಸಹಿಷ್ಣುತೆ ಹೊಂದಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಇದನ್ನು ಸಹಿಸಲ್ಲ, ನ್ಯಾಯ ಒದಗಿಸುತ್ತೇವೆ
ದೆಹಲಿ ಕಾರು ಸ್ಫೋಟದ ಕುರಿತು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೊದಲಿಗೆ ಈ ಭಯೋತ್ಪಾದ ಕೃತ್ಯದಲ್ಲಿ ಮಡಿದವರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಗಿದೆ. ಇದೇ ವೇಳೆ ಗಾಯಾಳುಗಳು ಶೀಘ್ರದಲ್ಲೇ ಚೇತರಿಕೆಗೆ ಪಾರ್ಥಿಸಲಾಯಿತು ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಘಟನೆಯ ಸಂತ್ರಸ್ತರಿಗೆ ಎಲ್ಲಾ ನೆರವು ಕೇಂದ್ರ ಸರ್ಕಾರ ನೀಡಲಿದೆ ಎಂದಿದ್ದಾರೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ. ವಿಳಂಬವಿಲ್ಲದೆ ಸಂತ್ರಸ್ತರಿಗೆ ನ್ಯಾಯ ಒದಗಿಸುತ್ತೇವೆ. ಈ ಭಯೋತ್ಪಾದ ಕೃತ್ಯದ ಪಲುದಾರರು, ಭಾಗಿಯಾದವರು, ಕೈಜೋಡಿಸಿದವರು ಸರಿದಂತೆ ಇದರ ಹಿಂದಿನ ಕಾಣದ ಕೈಗಳಿಗೂ ತಕ್ಕ ಶಾಸ್ತಿ ಮಾಡುತ್ತೇವೆ. ಉನ್ನತ ಅಧಿಕಾರಿಗಳ ತಂಡ ಈ ಪ್ರಕರಣ ತನಿಖೆ ಮಾಡುತ್ತಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಮೋದಿ ಅಧ್ಯಕ್ಷತೆಯಲ್ಲಿ ಭದ್ರತಾ ಸಭೆ
ಕೇಂದ್ರ ಸಚಿವ ಸಂಪುಟ ಮುಗಿದ ಬೆನ್ನಲ್ಲೇ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಭದ್ರತಾ ಸಭೆ ನಡೆಯುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆದಾರ ಅಜಿತ್ ದೋವಲ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಪ್ರಮುಖರು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ದೆಹಲಿ ಕಾರು ಸ್ಫೋಟ ಪ್ರಕರಣ ಭಯೋತ್ಪಾದನ ಕೃತ್ಯ ಎಂದು ಅಧಿಕೃತವಾಗಿ ಘೋಷಣೆ ಮಾಡಿರುವ ಕಾರಣ ಆಪರೇಶನ್ ಸಿಂದೂರ್ ಕಾರ್ಯಾಚರಣೆ ದೊಡ್ಡ ಮಟ್ಟದಲ್ಲಿ ನಡೆಯುವ ಸಾಧ್ಯತೆ ಇದೆ. ಇದಕ್ಕೂ ಮೊದಲು ಭಾರತದೊಳಗೆ ಇರುವ ಸ್ಲೀಪರ್ ಸೆಲ್, ಉಗ್ರರ ಕೈಗಳನ್ನು ಕತ್ತರಿಸಿ ಜೈಲಿಗಟ್ಟಲು ಸೂಚನೆ ನೀಡಲಾಗಿದೆ.
12 ಮಂದಿ ಬಲಿ ಪಡೆದ ಸ್ಫೋಟ
ದೆಹಲಿಯ ಕೆಂಪು ಕೋಟೆ ಬಳಿ ಉಗ್ರರು ಐ20 ಕಾರಿನಲ್ಲಿ ಸ್ಫೋಟಕಗಳನ್ನು ತುಂಬಿಕೊಂಡು ಬಂದು ಸ್ಫೋಟಿಸಿದ್ದಾರೆ. ಈ ಕಾರು ಸ್ಫೋಟದಲ್ಲಿ 12 ಮಂದಿ ಮೃತಪಟ್ಟಿದ್ದಾರೆ. 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದೇಶ ಇತ್ತೀಚಿನ ವರ್ಷಗಳಲ್ಲಿ ಕಂಡ ಅತೀದೊಡ್ಡ ಭಯೋತ್ಪಾದಕ ಸ್ಫೋಟ ಇದಾಗಿದೆ. ಕಳೆದ 10ರಿಂದ 11 ವರ್ಷದಲ್ಲಿ ದೇಶದೊಳಗಿನ ಸ್ಫೋಟಕಗಳಿಗೆ ಬ್ರೇಕ್ ಬಿದ್ದಿತ್ತು. ಆದರೆ ದಶಗಳ ಬಳಿಕ ಅತೀ ದೊಡ್ಡ ಸ್ಫೋಟ ಸಂಭವಿಸಿದೆ.
