Asianet Suvarna News Asianet Suvarna News

ಮೋದಿ- 2 ಸರ್ಕಾರಕ್ಕೆ ಇಂದು 2 ವರ್ಷ: 1 ಲಕ್ಷ ಗ್ರಾಮಗಳಲ್ಲಿ ಇಂದು ಬಿಜೆಪಿ ‘ಸೇವೆ’!

* 1 ಲಕ್ಷ ಗ್ರಾಮಗಳಲ್ಲಿ ಇಂದು ಬಿಜೆಪಿ ‘ಸೇವೆ’

* ಮೋದಿ-2 ಸರ್ಕಾರಕ್ಕೆ 2 ವರ್ಷ

* ಹಳ್ಳಿಗಳಲ್ಲಿ ಮಾಸ್ಕ್‌, ಸ್ಯಾನಿಟೈಸರ್‌, ಪಡಿತರ ವಿತರಣೆ

* ಸಚಿವ, ಸಂಸದ, ಶಾಸಕರು ತಲಾ 2 ಹಳ್ಳಿಗಳಿಗೆ ಭೇಟಿ

Modi govt anniversary BJP leaders to participate in Covid relief activities in 1 lakh villages pod
Author
Bangalore, First Published May 30, 2021, 7:38 AM IST

ನವದೆಹಲಿ(ಮೇ.30): ಕೊರೋನಾ ಎರಡನೇ ಅಲೆಯ ಅಬ್ಬರದ ನಡುವೆಯೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 7ನೇ ವರ್ಷವನ್ನು (ಮೊದಲ ಹಾಗೂ ಎರಡನೇ ಅವಧಿ ಸೇರಿ) ಭಾನುವಾರ ಪೂರ್ಣಗೊಳಿಸಲಿದೆ. ದೇಶಾದ್ಯಂತ ಸೋಂಕಿನ ಆರ್ಭಟ ಇರುವ ಹಿನ್ನೆಲೆಯಲ್ಲಿ ಮೋದಿ ಸರ್ಕಾರದ ದ್ವಿತೀಯ ಅವಧಿಯ 2ನೇ ವರ್ಷಾಚರಣೆಯನ್ನು ಅದ್ಧೂರಿಯಾಗಿ ಆಚರಿಸದೆ ಇರಲು ಸರ್ಕಾರ ಹಾಗೂ ಬಿಜೆಪಿ ಎರಡೂ ನಿರ್ಧರಿಸಿವೆ. ದೇಶಾದ್ಯಂತ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. 1 ಲಕ್ಷ ಹಳ್ಳಿಗಳಲ್ಲಿ ಪಡಿತರ ಹಾಗೂ ಇತರ ಕೋವಿಡ್‌ ಸಾಮಗ್ರಿ ವಿತರಣೆ ನಡೆಯಲಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಐತಿಹಾಸಿಕ ಬಹುಮತ ಗಳಿಸಿದ್ದ ಮೋದಿ ಅವರು ಮೇ 30ರಂದು ಪ್ರಧಾನಿಯಾಗಿ ಶಪಥಗ್ರಹಣ ಮಾಡಿದ್ದರು. ಕೊರೋನಾ ಕಾರಣ ಕಳೆದ ವರ್ಷವೂ ಸಂಭ್ರಮಾಚರಣೆ ಇರಲಿಲ್ಲ. ಬಿಜೆಪಿ ನಾಯಕರು ಹಲವು ಸೇವಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಮುಖಂಡರು ದೇಶಾದ್ಯಂತ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ಸಾಧನೆಗಳನ್ನು ವಿವರಿಸಿದ್ದರು. ಸರ್ಕಾರದ ಸಾಧನೆಯ ವಿಡಿಯೋವನ್ನು ಕೂಡ ಬಿಡುಗಡೆ ಮಾಡಲಾಗಿತ್ತು. ಆದರೆ ಈ ಬಾರಿ ಸರ್ಕಾರದ ವರ್ಷಾಚರಣೆ ದಿನದಂದು ಸೇವೆಗೇ ಬಿಜೆಪಿ ಹೆಚ್ಚು ಒತ್ತು ನೀಡಿದೆ.

ಸರ್ಕಾರದ ವರ್ಷಾಚರಣೆ ಅಂಗವಾಗಿ ದೇಶಾದ್ಯಂತ 1 ಲಕ್ಷ ಹಳ್ಳಿಗಳಲ್ಲಿ ಕೋವಿಡ್‌ ಸಾಮಗ್ರಿಗಳನ್ನು ಬಿಜೆಪಿ ವಿತರಿಸಲಿದೆ. ಮಾಸ್ಕ್‌, ಸ್ಯಾನಿಟೈಸರ್‌ ಹಾಗೂ ಪಡಿತರ ಸಾಮಗ್ರಿಗಳನ್ನು ಕೋವಿಡ್‌ನಿಂದ ನಲುಗಿರುವ ಜನಸಾಮಾನ್ಯರಿಗೆ ಪಕ್ಷದ ಕಾರ್ಯಕರ್ತರು ವಿತರಿಸಲಿದ್ದಾರೆ.

ಕೇಂದ್ರ ಸಚಿವರು, ರಾಜ್ಯ ಸಚಿವರು, ಬಿಜೆಪಿ ಸಂಸದರು, ಶಾಸಕರು ತಲಾ 2 ಹಳ್ಳಿಗೆ ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಭೇಟಿ ನೀಡಲಿದ್ದಾರೆ. ಸಾಧ್ಯವಾಗದಿದ್ದರೆ ವಿಡಿಯೋ ಕಾನ್ಛರೆನ್ಸ್‌ ಮೂಲಕ ಗ್ರಾಮಸ್ಥರನ್ನು ತಲುಪಲಿದ್ದಾರೆ.

ಬಿಜೆಪಿ ಕಾರ್ಯಕರ್ತರು ಜನರಲ್ಲಿ ಕೋವಿಡ್‌ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಲಸಿಕೆಯ ಮಹತ್ವವನ್ನು ವಿವರಿಸಲಿದ್ದಾರೆ. ಲಸಿಕೆ ಅಭಿಯಾನ ಕೂಡ ಆಯೋಜಿಸಲಿದ್ದಾರೆ.

ಕೊರೋನಾ ಲಸಿಕೆ ಪಡೆದ ಬಳಿಕ ಒಂದು ತಿಂಗಳು ರಕ್ತದಾನ ಮಾಡುವಂತಿಲ್ಲ. ಇದರಿಂದ ರಕ್ತಕ್ಕೆ ಕೊರತೆಯಾಗಬಹುದು ಎಂಬ ಕಾರಣಕ್ಕೆ 50 ಸಾವಿರ ಯುನಿಟ್‌ ರಕ್ತ ಸಂಗ್ರಹಿಸುವ ಗುರಿಯೊಂದಿಗೆ ದೇಶಾದ್ಯಂತ ಬಿಜೆಪಿ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಲಿದೆ.

ಇದಲ್ಲದೆ ಕೋವಿಡ್‌ನಿಂದ ಅನಾಥರಾದ ಮಕ್ಕಳ ಕಲ್ಯಾಣಕ್ಕೆ ಬಿಜೆಪಿ ಆಳ್ವಿಕೆಯ ರಾಜ್ಯ ಸರ್ಕಾರಗಳು ಮೇ 30ರಂದು ಹೊಸ ಯೋಜನೆಯನ್ನು ಪ್ರಕಟಿಸುವ ಸಾಧ್ಯತೆ ಇದೆ. ಇದಲ್ಲದೆ ಕೆಲವೊಂದು ಯೋಜನೆಗಳನ್ನು ಘೋಷಿಸುವ ನಿರೀಕ್ಷೆಯೂ ಇದೆ.

ಇಂದು ಮನ್‌ ಕೀ ಬಾತ್‌

ಸರ್ಕಾರದ 7ನೇ ವರ್ಷಾಚರಣೆ ದಿನವೇ ಪ್ರಧಾನಿ ನರೇಂದ್ರ ಮೋದಿ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್‌ ಕೀ ಬಾತ್‌ನಲ್ಲಿ ಭಾನುವಾರ ಮಾತನಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

ಏನೇನು ಕಾರ್ಯಕ್ರಮ?

- ಕೊರೋನಾ ಕಾರಣ ಅದ್ಧೂರಿ ಸಂಭ್ರಮಾಚರಣೆ ಇಲ್ಲ

- ‘ಸೇವಾ ದಿನ’ವಾಗಿ ದೇಶಾದ್ಯಂತ ಆಚರಣೆ

- 1 ಲಕ್ಷ ಹಳ್ಳಿಗಳಲ್ಲಿ ನಡೆಯಲಿದೆ ಸೇವಾ ದಿನ

- ಕೋವಿಡ್‌ ನೆರವು, ಅನಾಥ ಮಕ್ಕಳಿಗೆ ಯೋಜನೆ, ರಕ್ತದಾನ ಶಿಬಿರ, ಹಳ್ಳಿಗಳ ಭೇಟಿ ಕಾರ್ಯಕ್ರಮ

- ಲಸಿಕೆ ಅಭಿಯಾನ, ಲಸಿಕೆ ಕುರಿತು ಜಾಗೃತಿ ಮೂಡಿಸುವ ಕಾರ‍್ಯಕ್ರಮ

- ದೇಶಾದ್ಯಂತ 50 ಸಾವಿರ ಯುನಿಟ್‌ ರಕ್ತ ಸಂಗ್ರಹಕ್ಕೆ ಶಿಬಿರ

- ಅನಾಥ ಮಕ್ಕಳ ಕಲ್ಯಾಣಕ್ಕೆ ಬಿಜೆಪಿ ಸರ್ಕಾರಗಳಿಂದ ಯೋಜನೆ

- ಸರ್ಕಾರದ ಸಾಧನೆ ಕುರಿತು ಜಾಲತಾಣಗಳಲ್ಲಿ ಪ್ರಚಾರ ನಿರೀಕ್ಷೆ

Follow Us:
Download App:
  • android
  • ios