ಪಾಟ್ನ(ಆ. 24)  ಪ್ರಧಾನಿ ನರೇಂದ್ರ ಮೋದಿ  ರಾಷ್ಟ್ರಪಕ್ಷಿ ನವಿಲಿನೊಂದಿಗೆ ಇರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿ ಮಾಡಿತ್ತು. ಆದರೆ ಈಗ ಅದಕ್ಕೊ೦ದು ವಿವಾದವೂ ಸುತ್ತಿಕೊಂಡಿದೆ.

ಬಿಜೆಪಿ ಡಬಲ್ ಸ್ಟಾಂಡರ್ಡ್ ಮಾಡುತ್ತಿದೆ ಎಂಬ ಆರೋಪವನ್ನು ಬಿಹಾರದ ಆರ್‌ಜೆಡಿ ನಾಯಕರು ಮಾಡಿದ್ದಾರೆ, ಇದಕ್ಕೆ ಕಾರಣವನ್ನು ಕೊಟ್ಟಿದ್ದಾರೆ.

ಮೂರು ವರ್ಷಗಳ ಹಿಂದೆ ಲಾಲೂ ಪ್ರಸಾದ್ ಯಾದವ್ ಅವರ ಮನೆಗೆ ಎರಡು ನವಿಲುಗಳನ್ನು ಖರೀದಿ ಮಾಡಿ ತಂದಾಗ ಬಿಜೆಪಿ ನಾಯಕರು ವನ್ಯಜೀವಿ ಸುರಕ್ಷಾ ಕಾಯಿದೆ ಅಡಿ ಯಾದವ್ ಮೇಲೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದರು.  ಅಳಿವಿನ ಅಂಚಿನಲ್ಲಿರುವ ಪಕ್ಷಿ ಸಂಕುಲಕ್ಕೆ ಲಾಲೂ ಹಾನಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಈಗ ಮೋದಿಯವರ ವಿಡಿಯೋ ಕೊಂಡಾಡುತ್ತಿದ್ದಾರೆ ಎಂದು ಆರ್‌ಜೆಡಿ ನಾಯಕ ಶ್ಯಾಮ್ ರಾಜಕ್ ಹೇಳಿದ್ದಾರೆ.

ಮೋದಿ ಮನೆಯಲ್ಲಿ ಮಯೂರ ನರ್ತನ

ದೇಶ ಕೊರೋನಾ ಸಂಕಷ್ಟದಲ್ಲಿ ನಲುಗುತ್ತಿದೆ, ಆರ್ಥಿಕತೆ ಕುಸಿದು ತಳ ಸೇರಿದೆ, ಪ್ರತಿದಿನ 70 ಸಾವಿರ ಹೊಸ ಕೊರೋನಾ ಕೇಸ್ಗಳು ದಾಖಲಾಗುತ್ತಿವೆ.  ಈ ನಡುವೆ ಪ್ರಧಾನಿ ನವಿಲಿನೊಂದಿಗೆ ಕ್ಷಣ ಕಳೆಯುತ್ತಿರುವ ಪೋಟೋ ಸೋಶಿಯಲ್ ಮೀಡಿಯಾಕ್ಕೆ ಹಾಕುತ್ತಾರೆ. ಇದು ರೋಂ ರಾಜನ ಕತೆಯಾಗಿದೆ ಎಂದು ಆರ್‌ಜೆಡಿ ಸಂಸದ ಮನೋಜ್ ಜಾ ಟೀಕಿಸಿದ್ದಾರೆ.

2017ರಲ್ಲಿ ಮಹಾಮೈತ್ರಿ ಸರ್ಕಾರ ಬಿಹಾರದಲ್ಲಿ ಇದ್ದಾಗ ಲಾಲೂ ಪುತ್ರ ತೇಜ್ ಪ್ರತಾಪ್ ಅರಣ್ಯ ಇಲಾಖೆ ನೋಡಿಕೊಳ್ಳುತ್ತಿದ್ದರು. ಜ್ಯೋತಿಷಿಯೊಬ್ಬರ ಮಾತು ಕೇಳಿ ಜೋಡಿ ನವಿಲನ್ನು ಲಾಲೂ ಮನೆಗೆ ಕರೆತರಲಾಗಿತ್ತು.ಮ ಈ  ವಿಚಾರ ಪ್ರಾಣಿ ಹಿಂಸೆ ಸೇರಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು.

ಈ ರೀತಿ ವಿವಾದವಾದ ನಂತರ ನವಿಲುಗಳನ್ನು ಸಂಜಯ್ ಗಾಂಧಿ ಪಾರ್ಕ್ ಗೆ ಕಳುಹಿಸಿಕೊಡಲಾಗಿತ್ತು.  ಲಾಲೂ ಪ್ರಶ್ನೆ ಮಾಡಿದ್ದ ಬಿಜೆಪಿ ಈಗ ಮೋದಿಯವರನ್ನು ಕೊಂಡಾಡುತ್ತ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಆರ್‌ಜೆಡಿ ಆರೋಪಿಸಿದೆ.