ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕೇಂದ್ರ ಬಿಜೆಪಿ ಸಚಿವ ಸಂಪುಟ ಪುನಾರಚನೆಗೆ ಮುಂದಾಗಿದೆ. ಆದರೆ ಕಳೆದ ಕೆಲ ದಿನಗಳಿಂದ ಸಂಪುಟ ಪುನಾರಚನೆ ಮಾತುಗಳು ಕೇಳಿಬಂದರೂ ಯಾವುದೇ ಮಾಹಿತಿ ಹೊರಬಿದ್ದಿಲ್ಲ.ಇದೀಗ ಮಹತ್ಪದ ಬೆಳವಣಿಗೆಯಾಗಿದೆ. ಜುಲೈ 12ಕ್ಕೆ ಸಂಪುಟ ಪುನಾರಚನೆ ಆಗಲಿದೆ. ಎಲ್‌ಜೆಪಿ  ನಾಯಕ ಚಿರಾಗ್ ಪಾಸ್ವಾನ್‌ಗೆ ಸಚಿವ ಸ್ಥಾನ ನೀಡಲು ಬಿಜೆಪಿ ಮುಂದಾಗಿದೆ.

ನವದೆಹಲಿ(ಜು.09) ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ತಯಾರಿ ಶುರುಮಾಡಿದೆ. ಕೇಂದ್ರದ ಹಲವು ಸಚಿವರನ್ನು ಪಕ್ಷ ಸಂಘಟನೆ ಕಾರ್ಯಕ್ಕೆ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಇದರ ಜೊತೆಗೆ ಸಮುದಾಯ, ಜಾತಿ ಆಧಾರದಲ್ಲಿ ಕೆಲ ನಾಯಕರಿಗೆ ಸಚಿವ ಸ್ಥಾನ ನೀಡಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ. ಹೀಗಾಗಿ ಕಳೆದ ಕೆಲ ದಿನಗಳಿಂದ ಸಚಿವ ಸಂಪುಟ ಪುನಾರಚನೆ ಭಾರಿ ಚರ್ಚೆಯಾಗುತ್ತಿದೆ. ಈ ಚರ್ಚೆಗಳ ಬೆನ್ನಲ್ಲೇ ಬಿಜೆಪಿ ಮೈತ್ರಿಯಿಂದ ದೂರ ಉಳಿದಿದ್ದ ರಾಮ್ ವಿಲಾಸ್ ಅವರ ಲೋಕ ಜನಶಕ್ತಿ ಪಾರ್ಟಿ ಇದೀಗ ಮತ್ತೆ ಎನ್‌ಡಿಎ ಕೂಟ ಸೇರಿಕೊಳ್ಳಲು ಮನಸ್ಸು ಮಾಡಿದೆ. ಚಿರಾಗ್ ಪಾಸ್ವಾನ್ ಭೇಟಿ ಮಾಡಿರುವ ಕೇಂದ್ರ ಸಚಿವ ನಿತ್ಯಾನಂದ ರೈ, ಮೈತ್ರಿ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ. ಇದೀಗ ಮೋದಿ ಸಂಪುಟದಲ್ಲಿ ಚಿರಾಕ್ ಪಾಸ್ವಾನ್‌ಗೆ ಸಚಿವ ಸ್ಥಾನ ನೀಡಲು ಬಿಜೆಪಿ ಮುಂದಾಗಿದೆ.

ಬಿಹಾರದಲ್ಲಿ ಚಿರಾಗ್ ಪಾಸ್ವಾನ್ ಭೇಟಿಯಾದ ನಿತ್ಯಾನಂದ್ ರೈ ಮಹತ್ವದ ಮಾತುಕತೆ ನಡೆಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ಮೈತ್ರಿ ಮಾತುಕತೆಗಳು ನಡೆದಿದೆ. ಇದು ನಮ್ಮ ಹಳೇ ಮನೆ. ರಾಮ್ ವಿಲಾಸ್ ಪಾಸ್ವಾನ್ ಹಾಗೂ ಬಿಜೆಪಿ ಜನರ ಅಭಿವೃದ್ಧಿಗಾಗಿ ಹಲವು ಕೆಲಸ ಮಾಡಿದೆ. ಇದೀಗ ಚಿರಾಕ್ ಪಾಸ್ವಾನ್ ಭೇಟಿಯಾಗಿ ಮಾತುಕತೆ ನಡೆಸಲಾಗಿದೆ ಎಂದು ನಿತ್ಯಾನಂದ ರೈ ಹೇಳಿದ್ದಾರೆ. 

ಪ್ರಧಾನಿಗೆ ‘ರಿಪೋರ್ಟ್‌ ಕಾರ್ಡ್‌’ ಸಲ್ಲಿಸಿದ ಸಚಿವರು: 9 ತಿಂಗಳಲ್ಲಿ 9 ವರ್ಷಗಳ ಸಾಧನೆ ವಿವರಿಸಿ ಎಂದು ಮೋದಿ ಕರೆ

ಭೇಟಿ ಬಳಿಕ ಮಾತನಾಡಿದ ಚಿರಾಗ್ ಪಾಸ್ವಾನ್, ಎಲ್ಲಾ ಮಾತುಕತೆಗಳು ಅಂತಿಮ ಹಂತದಲ್ಲಿದೆ. ಈಗಲೇ ಯಾವುದನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ಕೇಂದ್ರ ಸಚಿವರ ಮಾತುಕತೆ ಫಲಪ್ರದವಾಗಿದೆ. ಮೈತ್ರಿ ಕುರಿತು ಯಾವುದೇ ಮಾಹಿತಿಯನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಇನ್ನೆರಡು ಸಭೆಗಳು ನಡೆಯಲಿದೆ. ಎಲ್ಲವೂ ಅಂತಿಮಗೊಂಡ ಬಳಿಕ ಮಾಹಿತಿ ನೀಡುತ್ತೇನೆ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

ಮೂಲಗಳ ಪ್ರಕಾರ ಜುಲೈ 12ಕ್ಕೆ ಮೋದಿ ಸಚಿವ ಸಂಪುಟ ಪುನಾರಚನೆ ಆಗುವ ಸಾಧ್ಯತೆ ಇದೆ. ಎಲ್‌ಜೆಪಿ ಪಕ್ಷದಿಂದ ಬಂಡಾಯ ಎದ್ದಿರುವ ಚಿರಾಗ್ ಪಾಸ್ವಾನ್ ಅಂಕಲ್ ಪಶುಪತಿ ಕುಮಾರ್ ಪರಾಸ್‌ಗೆ ಮೋದಿ ಸಂಪುಟದಿಂದ ಗೇಟ್‌ಪಾಸ್ ನೀಡುವ ಸಾಧ್ಯತೆ ಇದೆ. ಈ ಸ್ಥಾನದಲ್ಲಿ ಚಿರಾಗ್ ಪಾಸ್ವಾನ್‌ಗೆ ಮಂತ್ರಿ ಸ್ಥಾನ ನೀಡಲು ತಯಾರಿ ನಡೆದಿದೆ. ಆರ್‌ಕೆ ಸಿಂಗ್ ಹಾಗೂ ಅಶ್ವಿನ್ ಕುಮಾರ್ ಚೌಬೆ ಕೂಡ ಮೋದಿ ಸಂಪುಟದಿಂದ ಹೊರಗುಳಿಯಲಿದ್ದಾರೆ. ಈ ಸ್ಥಾನದಲ್ಲಿ ಬಿಹಾರದ ಸಮುದಾಯಗಳ ಮತ ಹಿಡಿದಿಟ್ಟುಕೊಳ್ಳಲು ಕೆಲ ನಾಯಕರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ.

ಮೋದಿ ನೇತೃತ್ವದಲ್ಲಿ ಕೇಂದ್ರ ಮಂತ್ರಿ ಮಂಡಲ ಸಭೆ: ಬಿ.ವೈ. ರಾಘವೇಂದ್ರಗೆ ಒಲಿಯಲಿದೆಯಾ ಮಂತ್ರಿ ಪಟ್ಟ ?

ಮೋದಿ ಸಂಪುಟ ಪುನಾರಚನೆ ಮಾತುಗಳು ಕೇಳಿಬಂದ ಬೆನ್ನಲ್ಲೇ ದೆಹಲಿ ಬಿಜೆಪಿ ಕಚೇರಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿತ್ತು. ಬಿಜೆಪಿ ನಾಯಕರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಕೇಂದ್ರ ಸಚಿವ ಪ್ರಹ್ಲಾದ್‌ ಸಿಂಗ್‌ ಪಟೇಲ್‌ ಮತ್ತು ಪಂಜಾಬ್‌ನ ಬಿಜೆಪಿ ಅಧ್ಯಕ್ಷ ಸುನೀಲ್‌ ಜಾಖಡ್‌ ನಡ್ಡಾ ಅವರನ್ನು ಭೇಟಿ ಮಾಡಿದ್ದರು. ಸಚಿವರಾದ ನಿರ್ಮಲಾ ಸೀತಾರಾಮನ್‌, ಅರ್ಜುನ್‌ ರಾಮ್‌ ಮೇಘ್ವಾಲ್‌, ಭೂಪೇಂದರ್‌ ಯಾದವ್‌ ಮತ್ತು ಕಿರಣ್‌ ರಿಜಿಜು ನಡ್ಡಾ ಅವರನ್ನು ಭೇಟಿ ಮಾಡಿದ್ದರು. ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಅವರು ಪಕ್ಷದ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ಭೇಟಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.