ಎಲ್ಲಿಂದ ಬೇಕಾದರೂ ಮತ ಹಾಕಿ| ರಿಮೋಟ್ ವೋಟಿಂಗ್ ಕುರಿತು ಶೀಘ್ರ ತಾಲೀಮು| ಚುನಾವಣಾ ಆಯೋಗದಿಂದ ಘೋಷಣೆ| ಮತದಾರ ತನ್ನೂರಿಗೆ ಹೋಗದೆ ತಾನಿರುವ ಸ್ಥಳದಿಂದಲೇ ಮತದಾನ ಮಾಡುವ ಹೊಸ ವ್ಯವಸ್ಥೆ
ನವದೆಹಲಿ(ಜ.26): ವಿಧಾನಸಭೆ ಅಥವಾ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸ್ವಕ್ಷೇತ್ರಕ್ಕೆ ಬಂದು ಮತದಾನ ಮಾಡುವ ಬದಲಿಗೆ ದೂರದ ಊರಿನಲ್ಲೇ ಕುಳಿತು ಹಕ್ಕು ಚಲಾವಣೆ ಮಾಡುವ ಕ್ರಾಂತಿಕಾರಿ ಸೌಲಭ್ಯವೊಂದನ್ನು ಕಲ್ಪಿಸಲು ಕೇಂದ್ರ ಚುನಾವಣಾ ಆಯೋಗ ಮುಂದಡಿ ಇಟ್ಟಿದೆ. ಶೀಘ್ರದಲ್ಲೇ ಇದರ ಅಣಕು ಕಾರ್ಯಾಚರಣೆ ಆರಂಭವಾಗಲಿದೆ ಎಂದು ಕೇಂದ್ರ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರು ಘೋಷಿಸಿದ್ದಾರೆ.
11ನೇ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಭಾನುವಾರ ಸಂದೇಶ ನೀಡಿರುವ ಅವರು, ಈ ‘ರಿಮೋಟ್ ವೋಟಿಂಗ್’ ವ್ಯವಸ್ಥೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಕುರಿತ ಸಂಶೋಧನಾ ಯೋಜನೆ ಈಗಾಗಲೇ ಆರಂಭವಾಗಿದ್ದು, ಉತ್ತಮ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಅಣಕು ಕಾರ್ಯಾಚರಣೆ ಆರಂಭಿಸಲಾಗುತ್ತದೆ ಎಂದು ಹೇಳಿದ್ದಾರೆ.
ಸಾಗರೋತ್ತರ ಭಾರತೀಯ ಮತದಾರರಿಗೆ ಅಂಚೆ ಮತದಾನ ಅವಕಾಶ ಕಲ್ಪಿಸುವ ಪ್ರಸ್ತಾವನೆ ಕೇಂದ್ರ ಕಾನೂನು ಸಚಿವಾಲಯದ ಸಕ್ರಿಯ ಪರಿಶೀಲನೆಯಲ್ಲಿದೆ ಎಂಬ ಮಾಹಿತಿಯನ್ನೂ ಅವರು ನೀಡಿದ್ದಾರೆ.
ದೂರದೂರಿಂದ ಮತ ಹೇಗೆ?:
ಕರ್ನಾಟಕದಲ್ಲಿ ಮತ ಹಕ್ಕು ಹೊಂದಿರುವ ವ್ಯಕ್ತಿಯೊಬ್ಬ ದೆಹಲಿಯಲ್ಲಿ ಉದ್ಯೋಗದಲ್ಲಿರುತ್ತಾನೆ ಎಂದಿಟ್ಟುಕೊಳ್ಳಿ. ಆತ ಮತ ಹಾಕಲು ಚುನಾವಣೆ ವೇಳೆ ತನ್ನೂರಿಗೇ ಬರಬೇಕಿಲ್ಲ. ತಾನಿರುವ ಸ್ಥಳದಿಂದಲೇ ಮತ ಹಾಕುವ ವ್ಯವಸ್ಥೆಯೇ ರಿಮೋಟ್ ವೋಟಿಂಗ್. ಈ ಹೊಸ ತಂತ್ರಜ್ಞಾನಕ್ಕಾಗಿ ಚುನಾವಣಾ ಆಯೋಗ ಮದ್ರಾಸ್ ಐಐಟಿ ಜತೆ ಕೈಜೋಡಿಸಿದೆ. ಈ ಸೌಲಭ್ಯ ಕಲ್ಪಿಸಲು ಬ್ಲಾಕ್‌ಚೈನ್ ತಂತ್ರಜ್ಞಾನ ಬಳಸಿಕೊಳ್ಳುತ್ತಿದೆ.
ತಾನಿರುವ ಸ್ಥಳದಿಂದಲೇ ಮತ ಹಾಕಲು ಬಯಸುವ ವ್ಯಕ್ತಿ ಈ ಸಂಬಂಧ ಚುನಾವಣಾಧಿಕಾರಿಗಳಿಗೆ ಮೊದಲೇ ಅರ್ಜಿ ಸಲ್ಲಿಸಬೇಕು. ಆತ ಇರುವ ಊರಿನಲ್ಲಿ ಒಂದು ನಿರ್ದಿಷ್ಟಸ್ಥಳವನ್ನು ಚುನಾವಣಾ ಆಯೋಗ ನಿಗದಿಪಡಿಸುತ್ತದೆ. ಇಂಟರ್ನೆಟ್, ಬಯೋಮೆಟ್ರಿಕ್ ಉಪಕರಣ, ವೆಬ್ ಕ್ಯಾಮೆರಾದಂತಹ ಸಾಧನಗಳು ಅಲ್ಲಿರುತ್ತವೆ. ಆಯೋಗ ಹೇಳಿದ ದಿನ, ಸಮಯದಂದು ಮತದಾರ ಆ ಕೇಂದ್ರಕ್ಕೆ ಹೋಗಬೇಕು. ಆ ಕೇಂದ್ರದಲ್ಲಿ ಮತದಾರನ ನೈಜತೆಯನ್ನು ಗುರುತಿಸಲಾಗುತ್ತದೆ. ಬ್ಲಾಕ್‌ಚೈನ್ ತಂತ್ರಜ್ಞಾನದ ಸಹಾಯದಿಂದ ಇ-ಮತಪತ್ರ ಸೃಷ್ಟಿಸಲಾಗುತ್ತದೆ. ಮತದಾರ ಮತ ಹಾಕಿದ ಬಳಿಕ ಮತವನ್ನು ಗೂಢ ಲಿಪಿಯಾಗಿ ಪರಿವರ್ತಿಸಿ ರಕ್ಷಿಸಲಾಗುತ್ತದೆ. ಹ್ಯಾಷ್‌ಟ್ಯಾಗ್‌ವೊಂದು ಸೃಷ್ಟಿಯಾಗುತ್ತದೆ. ಅದರ ನೋಟಿಫಿಕೇಷನ್ ಅಭ್ಯರ್ಥಿ ಹಾಗೂ ರಾಜಕೀಯ ಪಕ್ಷಗಳಿಗೆ ಹೋಗುತ್ತದೆ. ಮತ ಎಣಿಕೆ ಪೂರ್ವದಲ್ಲಿ ಆ ಮತಗಳನ್ನು ತಂತ್ರಜ್ಞಾನದ ಸಹಾಯದಿಂದ ಎಣಿಕೆ ಮಾಡಲಾಗುತ್ತದೆ.
ಈ ಸೌಲಭ್ಯದಿಂದ ಹುಟ್ಟೂರಿನಲ್ಲೇ ಮತದಾನ ಮಾಡುವ ಅಸಂಖ್ಯ ಜನರ ಆಸೆ ಈಡೇರಲಿದೆ. ಉದ್ಯೋಗದ ಕಾರಣ ಮತದಾನದಿಂದ ದೂರ ಉಳಿಯುತ್ತಿದ್ದವರ ಸಂಖ್ಯೆಯೂ ಕಡಿಮೆಯಾಗುವ ನಿರೀಕ್ಷೆ ಇದೆ.
