ಮಸೀದಿ ಧ್ವನಿವರ್ಧಕ ತೆಗೆಸಿ ಎಂದಿದ್ದ ರಾಜ್ ಠಾಕ್ರೆಗೆ ಬಿಗ್ ಶಾಕ್, ಪಕ್ಷಕ್ಕೆ ಭಾರೀ ಹಿನ್ನಡೆ!
* ಮಹಾರಾಷ್ಟ್ರ ರಾಜಕೀಯದಲ್ಲಿ ಭಾರೀ ಸಂಚಲನ
* ಮಸೀದಿ ಧ್ವನಿವರ್ಧಕ ತೆಗೆಸಿ ಎಂದಿದ್ದ ರಾಜ್ ಠಾಕ್ರೆಗೆ ಬಿಗ್ ಶಾಕ್
* ಹೇಳಿಕೆ ಬೆನ್ನಲ್ಲೇ ಪಕ್ಷದಲ್ಲಿ ಭಾರೀ ಬದಲಾವಣೆ
ಮುಂಬೈ(ಏ.05): ರಾಜ್ ಠಾಕ್ರೆ ಅವರ ಪಕ್ಷ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಭಾರೀ ಹಿನ್ನಡೆ ಅನುಭವಿಸಿದೆ. ಪುಣೆಯಲ್ಲಿ ಎಂಎನ್‌ಎಸ್‌ನ ಹಲವು ಮುಸ್ಲಿಂ ಮುಖಂಡರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಮಸೀದಿಗಳಲ್ಲಿ ಧ್ವನಿವರ್ಧಕ ಸ್ಥಗಿತಗೊಳಿಸಿ ಎಂಬ ರಾಜ್ ಠಾಕ್ರೆ ಹೇಳಿಕೆಯೇ ಇದಕ್ಕೆ ಕಾರಣ ಎನ್ನಲಾಗಿದೆ. ಪುಣೆ ಶಾಖೆಯ ಮುಖ್ಯಸ್ಥ ಮಜೀದ್ ಅಮೀನ್ ಶೇಖ್ ಸೇರಿದಂತೆ ಹಲವರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ. ಇದಲ್ಲದೇ ಎಂಎನ್‌ಎಸ್‌ನ ಕೆಲವು ಮುಸ್ಲಿಂ ಕಾರ್ಯಕರ್ತರು ರಾಜೀನಾಮೆ ನೀಡಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಶಿವಸೇನೆ ಎಂಎನ್‌ಎಸ್‌ಗೆ ಬಿಜೆಪಿಯ ಸಿ ಟೀಮ್ ಎಂದು ಹೇಳಿದೆ. ಹಾಗಾಗಿ ಎಂಎನ್‌ಎಸ್ ಪ್ರತೀಕಾರ ತೀರಿಸಿಕೊಂಡಿದೆ ಮತ್ತು ಶಿವಸೇನೆಗೆ ಎನ್‌ಸಿಪಿಯ ಡಿ ಟೀಮ್ ಎಂದು ಹೇಳಿದೆ.
ರಾಜ್ ಠಾಕ್ರೆ ಹೇಳಿಕೆಯ ನಂತರ, ಮುಂಬೈ ಮತ್ತು ಅದರ ಸುತ್ತಮುತ್ತಲಿನ ವಿವಿಧ ಪ್ರದೇಶಗಳಲ್ಲಿ ಎಂಎನ್‌ಎಸ್ ನಾಯಕರು ಧ್ವನಿವರ್ಧಕಗಳ ಮೂಲಕ ಹನುಮಾನ್ ಚಾಲೀಸಾ ನುಡಿಸುವ ಪ್ರಕ್ರಿಯೆ ಆಂಭಿಸಿದ್ದರು. ಆದಿತ್ಯ ಠಾಕ್ರೆ ಅವರ ವಿಧಾನಸಭಾ ಕ್ಷೇತ್ರ ವರ್ಲಿಯಲ್ಲಿಯೂ ಸಹ ಎಂಎನ್‌ಎಸ್ ನಾಯಕರು ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾವನ್ನು ನುಡಿಸಿದ್ದರು.
ರಾಜ್ ಠಾಕ್ರೆ ಹೇಳಿದ್ದೇನು?
ಶನಿವಾರ, ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಮಸೀದಿಗಳ ಧ್ವನಿವರ್ಧಕಗಳನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದರೆಂಬುವುದು ಉಲ್ಲೇಖನೀಯ. ಶಿವಾಜಿ ಪಾರ್ಕ್‌ನಲ್ಲಿ ನಡೆದ ರ್ಯಾಲಿಯಲ್ಲಿ ಠಾಕ್ರೆ, "ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಏಕೆ ಜೋರಾಗಿ ನುಡಿಸಲಾಗುತ್ತದೆ? ಇದನ್ನು ನಿಲ್ಲಿಸದಿದ್ದಲ್ಲಿ ಮಸೀದಿಗಳ ಹೊರಗೆ ಸ್ಪೀಕರ್‌ನಲ್ಲಿ ಹನುಮಾನ್ ಚಾಲೀಸಾವನ್ನು ಗಟ್ಟಿ ಧ್ವನಿಯಲ್ಲಿ ನುಡಿಸಲಾಗುವುದು ಎಂದಿದ್ದರು. ಅಲ್ಲದೇ ನಾನು ಪ್ರಾರ್ಥನೆ ಮಾಡುವ ಅಥವಾ ಯಾವುದೇ ನಿರ್ದಿಷ್ಟ ಧರ್ಮದ ವಿರುದ್ಧ ಮಾತನಾಡುತ್ತಿಲ್ಲ. ನನ್ನ ಧರ್ಮದ ಬಗ್ಗೆ ನನಗೆ ಹೆಮ್ಮೆ ಇದೆ ಎಂದಿದ್ದರು.
ಹನುಮಾನ್ ಚಾಲೀಸಾ ನಿರಂತರವಾಗಿ ಪಠಿಸುತ್ತಿದ್ದಾರೆ
ಮಹಾರಾಷ್ಟ್ರದ ಹಲವೆಡೆ ಎಂಎನ್‌ಎಸ್ ಕಾರ್ಯಕರ್ತರು ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ನುಡಿಸುತ್ತಿದ್ದಾರೆ. ಥಾಣೆಯಲ್ಲಿ, ಸ್ಥಳೀಯ ಎಂಎನ್‌ಎಸ್ ಕಾರ್ಯಕರ್ತರು ಭಾನುವಾರ ಕಲ್ಯಾಣ್‌ನ ಸಾಯಿ ಚೌಕ್‌ನಲ್ಲಿರುವ ಪಕ್ಷದ ಕಚೇರಿಯ ಹೊರಗೆ ಜಮಾಯಿಸಿ, ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾ ನುಡಿಸಿ, ಗಟ್ಟಿಯಾಗಿ ಜಪಿಸಿದರು. ಜತೆಗೆ ‘ಜೈ ಶ್ರೀ ರಾಮ್’ ಘೋಷಣೆಯನ್ನೂ ಕೂಗಿದರು. ಎಂಎನ್‌ಎಸ್ ಕಲ್ಯಾಣ ಘಟಕದ ಅಧ್ಯಕ್ಷ ಉಲ್ಲಾಸ್ ಭೋರ್ ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಪಕ್ಷದ ಕಾರ್ಯಕರ್ತರು ಪಕ್ಷದ ಮುಖ್ಯಸ್ಥರ ಆದೇಶವನ್ನು ಅನುಸರಿಸಲು ಎಂದಿಗೂ ಹಿಂಜರಿಯುವುದಿಲ್ಲ ಎಂದಿದ್ದಾರೆ.
ಕ್ರಮ ಕೈಗೊಂಡ ಪೊಲೀಸರು
ಮುಂಬೈನ ಅಸಲ್ಫಾ ಪ್ರದೇಶದಲ್ಲಿ ಪಕ್ಷದ ಕಾರ್ಯಕರ್ತನನ್ನು ಬಂಧಿಸಿದ್ದು, ಬಳಿಕ ಭಾನುವಾರ ಮಧ್ಯಾಹ್ನ ಬಿಡುಗಡೆ ಮಾಡಲಾಯಿತು. ಚಂಡಿವಾಲಿಯ ಅಸಲ್ಫಾದಲ್ಲಿರುವ ಹಿಮಾಲಯ ಸೊಸೈಟಿಯಲ್ಲಿ ಮರದ ಮೇಲೆ ಧ್ವನಿವರ್ಧಕವನ್ನು ಅಳವಡಿಸಿ ಹನುಮಾನ್ ಚಾಲೀಸಾವನ್ನು ಹಾಡಲು ಪ್ರಾರಂಭಿಸಿದಾಗ ಮಹೇಂದ್ರ ಭಾನುಶಾಲಿಯನ್ನು ಬಂಧಿಸಲಾಯಿತು ಎಂದು ಘಾಟ್ಕೋಪರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.