ಕನ್ನಡಿಗ ಖರ್ಗೆಗೆ ಕನ್ನಡ ಪಾಠ ಮಾಡಿದ ತಮಿಳುನಾಡು ಸಿಎಂ ಎಂಕೆ ಸ್ಟ್ಯಾಲಿನ್!
ದಕ್ಷಿಣ ಭಾರತದ ರಾಜ್ಯಗಳು ಅದರಲ್ಲೂ ತಮಿಳುನಾಡು ಕೇಂದ್ರದ ಹಿಂದಿ ಹೇರಿಕೆ ಬಗ್ಗೆ ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತಪಡಿಸಿವೆ. ಭಾಷಾಪ್ರೇಮದ ವಿಚಾರದಲ್ಲಿ ಎಲ್ಲರಿಗೂ ಮಾದರಿಯಂತಿರುವ ತಮಿಳುನಾಡು ರಾಜ್ಯದ ಮುಖ್ಯಮಂತ್ರಿ ಎಂಕೆ ಸ್ಟ್ಯಾಲಿನ್ ಇತ್ತೀಚೆಗೆ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆಗೆ ಟ್ವಿಟರ್‌ನಲ್ಲಿಯೇ ಕನ್ನಡ ಪಾಠ ಮಾಡಿದ್ದಾರೆ.
ಬೆಂಗಳೂರು (ಫೆ.02): ಭಾಷಾ ಪ್ರೇಮದ ವಿಚಾರದಲ್ಲಿ ತಮಿಳರನ್ನು ಯಾರೂ ಮೀರಿಸಲು ಸಾಧ್ಯವಿಲ್ಲ. ಹಿಂದಿ ಹೇರಿಕೆಯ ಬಗ್ಗೆ ಪ್ರತಿ ಹೆಜ್ಜೆಯಲ್ಲೂ ತಮಿಳುನಾಡು ಟೀಕಿಸುತ್ತಲೇ ಬಂದಿದೆ. ಇತ್ತೀಚೆಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟ್ಯಾಲಿನ್ 70ನೇ ವರ್ಷಕ್ಕೆ ಕಾಲಿಟ್ಟರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಗಣ್ಯರು ಶುಭಾಶಯ ಕೋರಿದ್ದರು. ಈ ವೇಳೆ ಎಂಕೆ ಸ್ಟ್ಯಾಲಿನ್ ಅವರನ್ನು 'ಜೀ' ಎಂದು ಕರೆದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸ್ವತಃ ಸ್ಟ್ಯಾಲಿನ್ ಕನ್ನಡ ಭಾಷೆಯನ್ನು ನೆನಪಿಸಿ, ಕನ್ನಡ ಪಾಠ ಮಾಡಿದ್ದಾರೆ. 'ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಪಕ್ಷದ ಅಧ್ಯಕ್ಷ ಎಂಕೆ ಸ್ಟ್ಯಾಲಿನ್ ಜೀ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು' ಎಂದು ಬುಧವಾರ ಮಧ್ಯಾಹ್ನ 1 ಗಂಟೆಯ ವೇಳೆಗೆ ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗೆ ಮೂರು ಗಂಟೆಯ ವೇಳೆಗೆ ಎಂಕೆ ಸ್ಟ್ಯಾಲಿನ್ ಕೂಡ ಪ್ರತಿಕ್ರಿಯೆ ನೀಡಿದ್ದರು. 'ಖರ್ಗೆ ಅವರೇ, ನಿಮ್ಮ ಆತ್ಮೀಯ ಹಾರೈಕೆಗಳಿಗೆ ಧನ್ಯವಾದ' ಎಂದು ಅವರು ಬರೆದಿದ್ದರು. ಆ ಮೂಲಕ ಹಿಂದಿ ಭಾಷಿಕರು ಇತರರಿಗೆ ಶುಭಾಶಯಗಳನ್ನು ತಿಳಿಸುವಾಗ ಹಾಗೂ ಸಂಬೋಧಿಸುವಾಗ 'ಜೀ..' ಎಂದು ಹೇಳುವ ಸಂಸ್ಕೃತಿಯನ್ನು ಬಿಟ್ಟುಬಿಡುವಂತೆ ಮಾರ್ಮಿಕವಾಗಿ ಸಲಹೆ ನೀಡಿದ್ದಾರೆ.
ಎಂಕೆ ಸ್ಟ್ಯಾಲಿನ್ ಅವರ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕನ್ನಡಿಗರೂ ಕೂಡ ಸ್ಟ್ಯಾಲಿನ್ ಅವರ ಟ್ವೀಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಟ್ಯಾಲಿನ್ ಅವರ ಟ್ವೀಟ್‌ಗೆ 115ಕೆ ವೀವ್ಸ್‌ಗಳು ಸಿಕ್ಕಿದ್ದರೆ, 301 ರೀಟ್ವೀಟ್‌ಗಳು ಸಿಕ್ಕಿವೆ. 65 ಕೋಟ್ ಟ್ವೀಟ್‌ಗಳು 2 ಸಾವಿರ ಲೈಕ್ಸ್‌ಗಳು ಸಿಕ್ಕಿವೆ.
'ಶಹಬ್ಬಾಸ್ ಸ್ಟಾಲಿನ್ ಸರ್ ನಮ್ಮ ರಾಜ್ಯದ ರಾಜಕಾರಣಿಗಳಿಗೆ "ಜಿ " ದೆವ್ವ ಮೆಟ್ಕೊಂಡಿದೆ. ನಿಮ್ಮನ್ನ ನೋಡಿಯಾದರೂ ಅದು ಬಿಟ್ಟೋಗಲಿ..' ಎಂದು ಲಿಂಗರಾಜ್ ಎನ್ನುವವರು ಬರೆದುಕೊಂಡಿದ್ದರೆ, 'ಖರ್ಗೆಯವರ 'ಜೀ' ಬೇನೆಗೆ ಸ್ಟ್ಯಾಲಿನ್ ರವರ 'ಅವರೇ' ಮದ್ದು!' ಎಂದು ಬರೆಯುವ ಮೂಲಕ ಇನ್ನೊಬ್ಬರು ಕೆಣಕಿದ್ದಾರೆ.
'ಬಿಜೆಪಿಗಳೇ, ಕಾಂಗ್ರೆಸ್ಸಿಗರೇ, ರಾಹುಲ್ ಜಿ,ಮೋದಿ ಜಿ, ಅಮಿತ್ ಜಿ ಅಂತೆಲ್ಲ ಕಜ್ಜಿ ರೋಗ ಬಂದಿರೋ ಹಾಗೆ ಆಡೋದನ್ನು ನಿಲ್ಲಿಸಿ. "ಮೋದಿಯವರೇ" ಎಂದು ಹೇಳಿ. ಮೋದಿ ಜಿ ಅನ್ಬೇಡಿ."ಜಿ" ಹಿಂದಿ ಮೂಲ. ತೆಲುಗಿನವರು "ಗಾರು" ಅಂತಾರೆ, ಕನ್ನಡದಲ್ಲಿ "ಅವರೇ" ಅಂತ ಇದೆ ಎಂದು ತಮಿಳರು ನಿಮಗೆ ನೆನಪಿಸುತ್ತಿದ್ದಾರೆ!!' ಎಂದು ಉಮೇಶ್ ಶಿವರಾಜು ಎನ್ನುವವರು ಟ್ವೀಟ್ ಮಾಡಿದ್ದಾರೆ. 'ಇವರಿಂದ ಕಲಿರಿ, ನಿಮ್ಮ "ಜೀ" ನಮಗೆ ಬೇಡ "ಅವರೇ" ಬಳಸಿರಿ.' ಎಂದು ನೇಸರಬೆಟ್ಟಳಿಯ ಎನ್ನುವವರು ಪ್ರತಿಕ್ರಿಯೆ ನೀಡಿದ್ದಾರೆ.
ಕೇಂದ್ರದ ‘ಹಿಂದಿ ಹೇರಿಕೆ’ಗೆ ರಾಹುಲ್ ತೀವ್ರ ವಿರೋಧ
'ಇದಕ್ಕಿಂತ ಮರ್ಯಾದೆ ಬೇಕಾ ನಿಮಗೆ ತೂ ನಿಮ್ಮ... ಸ್ವಲ್ಪನಾದರೂ ಸ್ವಾಭಿಮಾನ, ಸ್ವಂತಿಕೆ, ನಮ್ಮ ಭಾಷೆಯ ಬಗ್ಗೆ ಅಭಿಮಾನ, ಅತ್ಮಗೌರವ, ಏನಾದರೂ ಇದೆಯಾ ನಿಮಗೆ. ಸ್ವಲ್ಪ ಅವರ ಹತ್ತಿರ ಕಲಿತುಕೊಳ್ಳಿ...' ಎಂದು ರಘುನಾಥ್ ಎನ್ನುವವರು ಖರ್ಗೆ ಅವರ ನಡೆಯನ್ನು ಟೀಕಿಸಿದ್ದಾರೆ. 'ತಮಿಳುನಾಡಿನ ಮುಖ್ಯಮಂತ್ರಿಗಳು "ಅವರೇ" ಅಂತ ಬಳಸಿದ್ದಾರೆ. ಆದರೆ ನಮ್ಮ ರಾಜ್ಯದ ಕೆಲವು ರಾಜಕಾರಣಿಗಳಿಗೆ ಜಿ ಜೀ ಅನ್ನೋ *ಜ್ಜಿ ರೋಗ ಬಂದಿದೆಯೇ!' ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಹಿಂದಿ ಹೇರಿಕೆ ಪ್ರಶ್ನೆಯೇ ಇಲ್ಲ, ಕರ್ನಾಟಕದಲ್ಲಿ ಪ್ರಥಮ ಆದ್ಯತೆ ಕನ್ನಡ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
'ತಮಿಳುನಾಡಿನ ಮುಖ್ಯಮಂತ್ರಿ ಕನ್ನಡದ 'ಅವರೇ' ಅನ್ನುವ ಶಬ್ದ ಬಳಸುತ್ತಾರೆ ಆದರೆ ಕರ್ನಾಟಕದ ರಾಜಕಾರಣಿಗಳು 'ಜಿ' ಅನ್ನುವ ಪದ ಬಳಸುತ್ತಾರೆ. ನಾಚಿಕೆ ಆಗಬೇಕು ಕರ್ನಾಟಕದ ರಾಜಕಾರಣಿಗಳಿಗೆ. #ನಮ್ಮತನ ಬೆಳೆಸಿಕೊಳ್ಳಿ' ಎಂದು ಪ್ರಸಾದ್ ಕರೋಶಿ ಎನ್ನುವವರು ಟ್ವೀಟ್ ಮಾಡಿದ್ದಾರೆ. 'ಕನ್ನಡದವರಿಗೆ ಕನ್ನಡ ಪಾಠ ಮಾಡುತ್ತಿರುವ ಸ್ಟಾಲಿನ್! ಇಲ್ಲಿಯವರು ನಾಚಿಕೆ ಮಾನ ಮರ್ಯಾದೆ ಇಲ್ಲದೆ ಕಂಡ ಕಂಡವರನ್ನೆಲ್ಲಾ ಜೀ ಅಂತಾರೆ! ನಮ್ ಮಾನ ಮರ್ಯಾದೆ ತೆಗೆಯೋಕ್ಕೆ ಇದ್ದಾರೆ ನಮ್ಮ ರಾಜಕಾರಣಿಗಳು' ಎಂದು ಇನ್ನೊಬ್ಬರು ಬರೆದಿದ್ದಾರೆ.