ಚುನಾವಣಾ ಭಾಷಣದಲ್ಲಿ ಸಿನಿಮಾ ಡೈಲಾಗ್: ಮಿಥುನ್ ದಾಗೆ ಹುಟ್ಟುಹಬ್ಬದಂದೇ 'ಕಹಿ'!
* ಚುನಾವಣೆ ಮುಗಿದರೂ ನಿಲ್ಲದ ರಾಜಕೀಯ ಹೈಡ್ರಾಮ
* ಪಶ್ಚಿಮ ಬಂಗಾಳದಲ್ಲಿ ಬಿಜೆಪಿ, ಟಿಎಂಸಿ ಕಿತ್ತಾಟ
* ಮಿಥುನ್ ಚಕ್ರವರ್ತಿಗೆ ಹುಟ್ಟುಹಬ್ಬದಂದೇ ಕಹಿ ಕೊಟ್ಟ ಸಿನಿಮಾ ಡೈಲಾಗ್ ಬಳಕೆ
ಕೋಲ್ಕತ್ತಾ(ಜೂ.16): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಹಾಗೂ ಟಿಎಂಸಿ ಗೆಲುವಿನ ಬಳಿಕವೂ ರಾಜಕೀಯ ಹೈಡ್ರಾಮಾ ಮುಂದುವರೆದಿದೆ. ಹೌದು ಚುನಾವಣಾ ಪ್ರಚಾರ ಭಾಷಣದಲ್ಲಿ ಕಠೋರ ಶಬ್ಧ ಬಳಕೆ ವಿಚಾರವಾಗಿ ಪೊಲೀಸರು ಬಾಲಿವುಡ್ ನಟ ಮಿಥುನ್ ಚಕ್ರವರ್ತಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ಮಮತಾ ಬ್ಯಾನರ್ಜಿ ವಿರುದ್ಧ ಕೆಟ್ಟ ಹಾಗೂ ಅಸಂವಿಧಾನಿಕ ಭಾಷಾ ಪ್ರಯೋಗ ಮಾಡಿರುವ ಆರೋಪವಿದೆ. ಈ ಸಂಬಂಧ ಮಹಾನಗರ ಮಾಣಿಕಲ್ಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾದ್ದು, ಮಿಥುನ್ ದಾ ಅವರನ್ನು ವರ್ಚುವಲ್ ಆಗಿ ವಿಚಾರಣೆಗೊಳಪಡಿಸಲಾಗಿದೆ. ಇನ್ನು ಇಂದು, ಮಂಗಳವಾರ ಮಿಥುನ್ ಚಕ್ರವರ್ತಿಯವರ ಹುಟ್ಟುಹಬ್ಬವಾಗಿದ್ದು, 71 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಮಿಥುನ್ ದಾಗೆ ತಲೆನೋವಾದ ಆ ಎರಡು ಡೈಲಾಗ್
ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿ ಆಪ್ತರಾಗಿದ್ದ ಮಿಥುನ್ ಚಕ್ರವರ್ತಿ, ಪಶ್ಚಿಮ ಬಂಗಾಳ ಚುನಾವಣಾ ಸಸಂದರ್ಭದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಮಿಥುನ್ ದಾ ಎರಡು ಬಂಗಾಳಿ ಡೈಲಾಗ್‌ಗಳನ್ನು ಬಳಸಿದ್ದರು. 'ಮಾರ್ಬೊ ಎಖಾನೆ ಲ್ಯಾಶ್ ಪೋರ್ಬೆ ಶೋಶೇನ್' ಅಂದರೆ ನಾನು ನಿನ್ನನ್ನು ಕೊಂದರೆ, ದೇಹವು ಸ್ಮಶಾನದಲ್ಲಿ ಬೀಳುತ್ತದೆ ಮತ್ತು 'ಎ ಚೋಬೋಲ್ ಕೀ'ಅಂದರೆ ಹಾವು ಕಡಿತದರೆ ನೀವು ಗೋಡೆ ಮೇಲಿನ ಭಾವಚಿತ್ರವಾಗುವಿರಿ ಎಂದಿದ್ದರು. ಈ ಎರಡು ಡೈಲಾಗ್‌ಗಳು ಅಸಂವಿಧಾನಿ ಹಾಗೂ ಹಿಂಸೆಗೆ ಪ್ರೇರಣೆ ನೀಡುತ್ತವೆ ಎನ್ನಲಾಗಿದೆ. ಈ ಭಾಷಣದಿಂದ ಹಿಂಸಾಚಾರ ಹುಟ್ಟಿಕೊಂಡಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಹೈಕೋರ್ಟ್‌ಗೆ ಹೋದರೂ ಸಂಕಷ್ಟ ತಪ್ಪಲಿಲ್ಲ
ಈ ವಿಚಾರವಾಗಿ ಮಿಥುನ್ ದಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಕೂಡಾ ಎಫ್‌ಐಆರ್ ರದ್ದುಪಡಿಸುವ ಅರ್ಜಿ ನಿರಾಕರಿಸಿದ್ದು, ಪೊಲೀಸರ ವಿಚಾರಣೆಗೆ ಸಹಕರಿಸುವಂತೆ ಆದೇಶಿಸಿದೆ. ಇದೇ ವೇಳೆ ಪೊಲೀಸರಿಗೂ ನಟ ಮಿಥುನ್ ಚಕ್ರವರ್ತಿಯವರ ಇ-ಮೇಲ್ ಇತ್ಯಾದಿಗಳನ್ನು ಸಂಗ್ರಹಿಸಿಡುವಂತೆ ಸೂಚಿಸಿದೆ. ಅಗತ್ಯವಿದ್ದಾಗ, ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ನಡೆಸಬಹುದು ಎಂದೂ ತಿಳಿಸಿದೆ. ಅತ್ತ ಮಿಥುನ್ ದಾ ತಾನು ಕೇವಲ ಸಿನಿಮಾ ಡೈಲಾಗ್ ಬಳಸಿದ್ದೆ ಎಂದು ವಾದಿಸಿದ್ದರು.