ಕೋಲ್ಕತಾ(ಮಾ.07): ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾ.7ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ಚುನಾವಣಾ ರಾರ‍ಯಲಿ ನಡೆಸಲಿದ್ದಾರೆ. ಈ ವೇಳೆ ನಟ, ಟಿಎಂಸಿ ಮಾಜಿ ರಾಜ್ಯಸಭಾ ಸದಸ್ಯ ಮಿಥುನ್‌ ಚಕ್ರವರ್ತಿ ಅವರು ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ಸಾಧ್ಯತೆ ಇದೆ.

ಇದೇ ವೇಳೆ ಇದೇ ವೇದಿಕೆಯಲ್ಲೇ ಬಿಜೆಪಿಗೆ ಸೇರ್ಪಡೆಯಾಗಬಹುದು ಅಥವಾ ಪಕ್ಷದ ಪರ ಪ್ರಚಾರ ಕೈಗೊಳ್ಳಬಹುದು ಎಂಬ ಗುಸುಗುಸು ಕೂಡ ದಟ್ಟವಾಗಿದೆ. ಈ ಬಗ್ಗೆ ನೇರವಾಗಿ ಪ್ರತಿಕ್ರಿಯಿಸದ ಪಕ್ಷದ ರಾಜ್ಯ ಪ್ರಭಾರಿ ಕೈಲಾಶ್‌ ವಿಜಯವರ್ಗೀಯ, ‘ಮಿಥುನ್‌ ಚಕ್ರವರ್ತಿ ಬಂದರೆ ಬರಲಿ.. ಅವರಿಗೆ ಸ್ವಾಗತವಿದೆ’ ಎಂದರು. ‘ಮುಂದೇನಾಗುತ್ತೋ ಕಾದು ನೋಡಿ’ ಎಂದು ಇನ್ನೊಬ್ಬ ಬಿಜೆಪಿ ನಾಯಕ, ಗೂಢಾರ್ಥದಲ್ಲಿ ನುಡಿದರು.

ಫೆ.16ರಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಮಿಥುನ್‌ ಚಕ್ರವರ್ತಿ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಮಿಥುನ್‌ ಅವರ ರಾಜಕೀಯ ಸೇರ್ಪಡೆ ಬಗ್ಗೆ ವದಂತಿಗಳು ಹರಿದಾಡುತ್ತಿವೆ.

70 ವರ್ಷದ ನಟ ಮಿಥುನ್‌ ಚಕ್ರವರ್ತಿ ಅವರು ರಾಜ್ಯದಲ್ಲಿ ಸಾಕಷ್ಟುಅಭಿಮಾನಿಗಳನ್ನು ಹೊಂದಿದ್ದಾರೆ. ಈ ಹಿಂದೆ ಸಿಪಿಎಂಗೆ ಆಪ್ತರಾಗಿದ್ದ ಮಿಥುನ್‌, ಕೆಲಕಾಲ ಟಿಎಂಸಿ ಸಂಸದರಾಗಿ ಶಾರದಾ ಚಿಟ್‌ಫಂಡ್‌ ಹಗರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡಿದ್ದರು.