ದಿಲ್ಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ರೈಲಲ್ಲಿ ಬೆಂಕಿ| ಅದೃಷ್ಟಾವಾಶತ್ ಪ್ರಯಾಣಿಕರೆಲ್ಲರೂ ಸುರಕ್ಷಿತ
ಹೈದರಾಬಾದ್(ಜ.04): ರಾಷ್ಟ್ರ ರಾಜಧಾನಿ ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ತೆಲಂಗಾಣದ ವಿಕರಾಬಾದ್ ಜಿಲ್ಲೆಯ ಬಳಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಭಾನುವಾರ ನಡೆದಿದೆ. ಅದೃಷ್ಟಾವಶಾತ್ ರೈಲಿನಲ್ಲಿರುವ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ದಕ್ಷಿಣ ಮಧ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಭಾನುವಾರ ರಾತ್ರಿ 9 ಗಂಟೆಗೆ ನಾವಂಡಗಿ ರೈಲ್ವೆ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ರೈಲಿನ ಲೋಕೋಪೈಲಟ್, ತಕ್ಷಣವೇ ರೈಲನ್ನು ನಿಲ್ಲಿಸಿ ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ. ಅಲ್ಲದೆ ಬೆಂಕಿ ಕಾಣಿಸಿಕೊಂಡಿದ್ದ ಇಂಜಿನ್ ಅನ್ನು ಕೋಚ್‌ಗಳಿಂದ ಬೇರ್ಪಡಿಸಲಾಯಿತು.
ಆ ನಂತರ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳವು ಬೆಂಕಿಯನ್ನು ನಂದಿಸಿತು ಎಂದು ದಕ್ಷಿಣ ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ತಿಳಿಸಿದ್ದಾರೆ. ಜೊತೆಗೆ, ಈ ಬೆಂಕಿ ಅವಘಡಕ್ಕೆ ನಿರ್ದಿಷ್ಟಕಾರಣವೇನು ಎಂಬುದು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ ಎಂದೂ ಹೇಳಿದರು
