2021ರವರೆಗೂ ಕೊರೋನಾ ಲಸಿಕೆ ಡೌಟ್: ಕೇಂದ್ರ ಸರ್ಕಾರ!
2021ರವರೆಗೂ ಕೊರೋನಾ ಲಸಿಕೆ ಡೌಟ್: ಕೇಂದ್ರ ಸರ್ಕಾರ| ಆ.15ಕ್ಕೆ ಲಸಿಕೆ ಬಿಡುಗಡೆ ನಿರೀಕ್ಷೆ ಹುಸಿಯಾಗುತ್ತಾ?
ನವದೆಹಲಿ(ಜು.06): ಇದೇ ಆ.15ರೊಳಗೆ ಕೊರೋನಾ ಲಸಿಕೆ ಬಿಡುಗಡೆಗೆ ಸಜ್ಜಾಗಿರುವ ಕುರಿತ ಐಸಿಎಂಆರ್ ಹೇಳಿಕೆಯಿಂದ ಸೃಷ್ಟಿಯಾಗಿದ್ದ ವಿವಾದದ ಬೆನ್ನಲ್ಲೇ, 2021ಕ್ಕೂ ಮೊದಲು ವಿಶ್ವದ ಯಾವುದೇ ಭಾಗದಿಂದಲೂ ಕೊರೋನಾಗೆ ಔಷಧ ಬಿಡುಗಡೆಯಾಗುವ ಸಾಧ್ಯತೆ ಕಡಿಮೆ ಎಂದು ಕೇಂದ್ರ ವಿಜ್ಞಾನ ಸಚಿವಾಲಯ ಅಚ್ಚರಿಯ ಹೇಳಿಕೆ ನೀಡಿದೆ. ಇದು ಆ.15ರೊಳಗೆ ವಿಶ್ವದ ಮೊದಲ ಕೊರೋನಾ ಲಸಿಕೆ ಭಾರತದಲ್ಲೇ ಸಿದ್ಧವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ ಉಂಟು ಮಾಡಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಚಿವಾಲಯ, ವಿಶ್ವದ ವಿವಿಧ ದೇಶಗಳಲ್ಲಿ ಕೊರೋನಾಕ್ಕೆ 140 ಬೇರೆ ಬೇರೆ ಲಸಿಕೆ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಪೈಕಿ ಭಾರತದ ಎರಡು ಸೇರಿದಂತೆ 2 ಲಸಿಕೆಗಳು ಮಾನವ ಪ್ರಯೋಗದ ಹಂತ ತಲುಪಿವೆ. ಆದರೆ ಈ ಹಂತದಲ್ಲಿರುವ ಔಷಧಗಳು ಕೂಡ 2021ಕ್ಕೆ ಮುನ್ನ ಸಮೂಹ ಬಳಕೆಗೆ ಲಭ್ಯವಾಗುವ ಸಾಧ್ಯತೆ ಇಲ್ಲ ಎಂದು ಹೇಳಿದೆ.
ಸೋಂಕು ನಿವಾರಣೆಯ ಮೊದಲ ಲಸಿಕೆ ಕೊರೋನಾ ವಾರಿಯರ್ಸ್‌ಗೆ!
ಇದೇ ವೇಳೆ ಭಾರತದಲ್ಲಿ ಮಾನವ ಪ್ರಯೋಗಕ್ಕೆ ಅನುಮತಿ ಪಡೆದ ಮೊದಲ ಲಸಿಕೆಯಾದ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಅನ್ನು ಭಾರತೀಯ ಕೊರೋನಾ ರೋಗಿಯೊಬ್ಬರಿಂದ ಸಂಗ್ರಹಿಸಿದ ವೈರಸ್ ನಿಷ್ಕಿ್ರಯಗೊಳಿಸಿ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದೆ.
ಭಾರತ್ ಬಯೋಟೆಕ್ ಜೊತೆಗೆ ಝೈಡಸ್ ಕಂಪನಿ ಕೂಡಾ ಝೈಕೋವಿಡ್ ಎಂಬ ಲಸಿಕೆ ಅಭಿವೃದ್ಧಿಪಡಿಸಿದ್ದು, ಅದಕ್ಕೂ ಮಾನವ ಪ್ರಯೋಗ ನಡೆಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಗುಡ್ ನ್ಯೂಸ್: ಭಾರತದ ಮೊದಲ ಕೊರೋನಾ ಔಷಧ ಸಿದ್ಧ!
ಈ ನಡುವೆ ಭಾರತದಲ್ಲಿ ಕೊರೋನಾ ಲಸಿಕೆಯ ಮಾನವ ಪ್ರಯೋಗ ಹಂತ ತಲುಪಿರುವುದು ಕೊರೋನಾ ಸಾಂಕ್ರಾಮಿಕ ಪಿಡುಗಿನ ಅಂತ್ಯದ ಆರಂಭ ಎಂದೂ ಸರ್ಕಾರ ಹೇಳಿಕೊಂಡಿದೆ. ಜೊತೆಗೆ ಕೊರೋನಾ ಲಸಿಕೆ ಅಭಿವೃದ್ಧಿಯಲ್ಲಿ ಭಾರತದ ಪಾತ್ರದ ಕುರಿತು ಮಾಹಿತಿ ನೀಡಿರುವ ಕೇಂದ್ರ ಸರ್ಕಾರ, ಕಳೆದ ಕೆಲ ವರ್ಷಗಳಿಂದ ಭಾರತವು ಲಸಿಕೆ ಉತ್ಪಾದನೆಯ ಬಹುದೊಡ್ಡ ಕೇಂದ್ರವಾಗಿ ಹೊರಹೊಮ್ಮಿದೆ. ವಿಶ್ವದ ಯಾವುದೇ ದೇಶ ಕೊರೋನಾ ಸೇರಿದಂತೆ ಯಾವುದೇ ಪ್ರಮುಖ ಔಷಧ ಅಭಿವೃದ್ಧಿಪಡಿಸಿದರೂ, ವಿಶ್ವದ ಶೇ.60ರಷ್ಟುಪೂರೈಕೆ ಭಾರತದಿಂದಲೇ ಆಗಬೇಕು ಎಂದು ಹೇಳಿದೆ.
"