ನವದೆಹಲಿ(ಜು.02): ಭಾರತ-ಚೀನಾ ಗಡಿ ನಿಯಂತ್ರಣ ರೇಖೆಯಿಂದ ಎರಡೂ ದೇಶಗಳು ತಮ್ಮತಮ್ಮ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಒಪ್ಪಂದವಾಗಿದ್ದರೂ ಚೀನಾ ಮಾತ್ರ ಗಡಿಯಲ್ಲಿ ಇನ್ನೂ ಸಾಕಷ್ಟು ಯೋಧರನ್ನು ಸನ್ನದ್ಧ ಸ್ಥಿತಿಯಲ್ಲೇ ಇರಿಸಿರುವ ಸಂಗತಿ ಬೆಳಕಿಗೆ ಬಂದಿದೆ.

ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಚೀನಾದ 20 ಸಾವಿರ ಸೈನಿಕರು ನಿಯೋಜನೆಗೊಂಡಿದ್ದಾರೆ. ಜೊತೆಗೆ, ಇಲ್ಲಿಂದ 1000 ಕಿ.ಮೀ. ದೂರವಿರುವ ಉತ್ತರ ಕ್ಸಿನ್‌ಜಿಯಾಂಗ್‌ ಪ್ರಾಂತದಲ್ಲಿ 10-12 ಸಾವಿರ ಸೈನಿಕರು ಅಗತ್ಯ ವಾಹನ ಹಾಗೂ ಶಸ್ತ್ರಾಸ್ತ್ರಗಳೊಂದಿಗೆ ಸಜ್ಜಾಗಿ ನಿಂತಿದ್ದಾರೆ. ಯಾವಾಗ ಸೂಚಿಸಿದರೂ ಇವರು ಭಾರತದ ಗಡಿಗೆ 48 ಗಂಟೆಯೊಳಗೆ ಧಾವಿಸುತ್ತಾರೆ.

ಚೀನಾಕ್ಕೆ ಭಾರತ ಸಡ್ಡು: ಗಲ್ವಾನ್‌ಗೆ ಭೀಷ್ಮ ಟ್ಯಾಂಕರ್!

ಕ್ಸಿನ್‌ಜಿಯಾಂಗ್‌ ಪ್ರಾಂತದಿಂದ ಲಡಾಖ್‌ ಗಡಿಯವರೆಗೆ ಚೀನಾದಲ್ಲಿ ಸಮತಟ್ಟಾದ ಜಾಗವಿರುವುದರಿಂದ ಚೀನಾ ಸೇನೆಗೆ ತನ್ನ ಯೋಧರನ್ನು ಬಲುಬೇಗ ಗಡಿಯವರೆಗೆ ತರಲು ಸಾಧ್ಯವಿದೆ. ಪೂರ್ವ ಲಡಾಖ್‌ನ ಪ್ಯಾಂಗಾಂಗ್‌ ಲೇಕ್‌ ಬಳಿಯಲ್ಲೂ ಫಿಂಗರ್‌ 8 ಪ್ರದೇಶದಿಂದ ಫಿಂಗರ್‌ 5 ಪ್ರದೇಶದವರೆಗೆ ಚೀನಾ ಉತ್ತಮ ರಸ್ತೆ ನಿರ್ಮಿಸಿಕೊಂಡಿದೆ. ಅಲ್ಲಿಂದ ಫಿಂಗರ್‌ 4 ಪ್ರದೇಶಕ್ಕೆ ಚೀನಿ ಸೈನಿಕರನ್ನು ಸುಲಭವಾಗಿ ತರಬಹುದು.

ಫಿಂಗರ್‌ 4 ಪ್ರದೇಶದಲ್ಲಿ ಭಾರತೀಯ ಯೋಧರಿದ್ದಾರೆ. ಸಂಘರ್ಷ ಏರ್ಪಟ್ಟರೆ ಗಡಿ ಪ್ರದೇಶಕ್ಕೆ ಚೀನಾದ ಯೋಧರು ಭಾರತೀಯ ಯೋಧರಿಗಿಂತ ಬೇಗ ತಲುಪಲು ಸಾಧ್ಯವಿದೆ ಎಂದು ಮೂಲಗಳು ಹೇಳಿವೆ.

30,000 ಯೋಧರು, ಟ್ಯಾಂಕ್‌ಗಳನ್ನು ಗಲ್ವಾನ್‌ಗೆ ರವಾನಿಸಿ ಭಾರತ ಸಡ್ಡು

ಗಡಿಯಲ್ಲಿ ತ್ವೇಷಮಯ ಪರಿಸ್ಥಿತಿ ಮುಂದುವರಿಸಿರುವ ಚೀನಾಕ್ಕೆ ಭಾರತ ಮತ್ತೆ ಸಡ್ಡು ಹೊಡೆದಿದೆ. 30 ಸಾವಿರ ಯೋಧರನ್ನು ಒಳಗೊಂಡ ಭಾರತೀಯ ಸೇನೆಯ 3 ವಿಭಾಗಗಳು, ಮುಂಚೂಣಿಯಲ್ಲಿ ನಿಂತು ದಾಳಿ ನಡೆಸುವ ಟ್ಯಾಂಕ್‌ಗಳ ಹಲವು ಪಡೆ, ಹೆಚ್ಚುವರಿ ಫಿರಂಗಿ, ದಾಳಿ ವಾಹನ ಹೊಂದಿದ ಪದಾತಿದಳವನ್ನು ಪೂರ್ವ ಲಡಾಖ್‌ನ ಗಲ್ವಾನ್‌ಗೆ ರವಾನಿಸಿದೆ.

ಸದ್ದಿಲ್ಲದೆ ಚೀನಾದ ಮೇಲೆ ಕೇಂದ್ರದಿಂದ ಮತ್ತೊಂದು ಗದಾಪ್ರಹಾರ

ಇದೇ ವೇಳೆ ಪ್ಯಾಂಗೊಂಗ್‌ ಸರೋವರದಲ್ಲಿ ಗಸ್ತು ನಡೆಸಲು ಅತ್ಯಧಿಕ ಸಾಮರ್ಥ್ಯದ ಬೃಹತ್‌ ಗಾತ್ರದ, ಅತ್ಯಾಧುನಿಕ ಒಂದು ಡಜನ್‌ ಉಕ್ಕಿನ ದೋಣಿಗಳನ್ನು ಕಳುಹಿಸಲು ನೌಕಾಪಡೆ ಸಜ್ಜಾಗುತ್ತಿದೆ.

ಸೇನೆಯ ಮೂರು ವಿಭಾಗಗಳನ್ನು ಮೀಸಲು ಪಡೆಯಿಂದ ಕರೆಸಿಕೊಳ್ಳಲಾಗಿದೆ. ಈ ಯೋಧರು ಉತ್ತರಭಾರತದ ಪರ್ವತ ಪ್ರದೇಶದಲ್ಲಿ ತರಬೇತಿಯಲ್ಲಿ ನಿರತರಾಗಿದ್ದರು. ಇದರ ಜತೆಗೆ ಹಿಂದಿ ಭಾಷಿಕ ಮತ್ತೊಂದು ರಾಜ್ಯದಿಂದಲೂ ಯೋಧರನ್ನು ಕರೆಸಿಕೊಳ್ಳಲಾಗಿದೆ. ರಸ್ತೆ, ವಿಮಾನ ಮೂಲಕ ಈ ಎಲ್ಲರನ್ನೂ ಲಡಾಖ್‌ಗೆ ಕಳುಹಿಸಲಾಗಿದೆ ಎಂದು ಆಂಗ್ಲಪತ್ರಿಕೆಯೊಂದು ವರದಿ ಮಾಡಿದೆ.

ಬರುವ ಸೆಪ್ಟೆಂಬರ್‌ವರೆಗೂ ಗಲ್ವಾನ್‌ನಲ್ಲಿ ಸಂಘರ್ಷ ಮುಂದುವರಿಯುವುದು ಭಾರತಕ್ಕೂ ಖಾತ್ರಿಯಾಗಿರುವಂತಿದೆ. ಹೀಗಾಗಿ ಅಲ್ಲಿವರೆಗೂ ಚೀನಾಕ್ಕೆ ತಕ್ಕ ರೀತಿಯಲ್ಲಿ ಭಾರತ ಬಲ ಪ್ರದರ್ಶನ ಮುಂದುವರಿಸಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.