Asianet Suvarna News Asianet Suvarna News

ಮೋದಿ ನಾಯಕತ್ವ: ವಸಾಹತುಶಾಹಿ ಕರಿನೆರಳಿನಿಂದ ವಿಶ್ವ ಗುರುವಾದ ಭಾರತ

ದೇಶದ ಸೇನೆ ಯಾವಾಗ ಆಧುನೀಕರಣಗೊಳ್ಳುತ್ತೋ ಆಗ ಇಡೀ ವಿಶ್ವಕ್ಕೇ ಆ ದೇಶದ ಮೇಲಿನ ಅಭಿಪ್ರಾಯ ಬದಲಾಗುತ್ತದೆ. ಪ್ರಧಾನಿ ಮೋದಿ ನೇತ್ವತ್ವದ ಭಾರತ ರಕ್ಷಣಾವಲಯ ಮಾತ್ರವಲ್ಲದೇ, ವಿವಿಧ ಕ್ಷೇತ್ರಗಳಲ್ಲೂ ತನ್ನ ಸಾಮರ್ಥ್ಯ ತೋರಿಸುತ್ತಿದೆ. 

Military modernization makes India strong under leadership of prime minister Narendra Modi
Author
First Published Dec 27, 2022, 3:14 PM IST

- ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಭಾರತ ತನ್ನ ಸ್ವಾತಂತ್ರ್ಯದ 75ನೇ ವರ್ಷವನ್ನು ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದಡಿ ಆಚರಿಸುತ್ತಿದೆ. 1947ರಲ್ಲಿ ಸ್ವಾತಂತ್ರ್ಯ ಪಡೆದ ಬಳಿಕ ಭಾರತ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಭಾರತದ ಕೈಗಾರಿಕೀಕರಣ, ಮೂಲಭೂತ ವ್ಯವಸ್ಥೆಗಳ ಅಭಿವೃದ್ಧಿ, ಹಾಗೂ ಮಿಲಿಟರಿ ಆಧುನೀಕರಣದ ಪರಿಣಾಮವಾಗಿ ಭಾರತ ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ರೂಪುಗೊಂಡಿದೆ. ಭಾರತ ಪ್ರಪಂಚದಾದ್ಯಂತ 75 ರಾಷ್ಟ್ರಗಳಿಗೆ ಸರಕು ಮತ್ತು ಸೇವೆಗಳನ್ನು ರಫ್ತು ಮಾಡುತ್ತಿದ್ದು, ಭಾರತದಲ್ಲೂ ಪ್ರಬಲ ಗ್ರಾಹಕ ಬೇಡಿಕೆಯನ್ನು ಹೊಂದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಳೆದ ಎಂಟು ವರ್ಷಗಳ ಅವಧಿಯಲ್ಲಿ 68 ದೇಶಗಳಿಗೆ ಪ್ರಯಾಣಿಸಿದ್ದಾರೆ ಎನ್ನುವುದು ಭಾರತ ಜಗತ್ತಿನ ಮೇಲೆ ಹೊಂದಿರುವ ಪ್ರಭಾವವನ್ನು ಸೂಚಿಸುತ್ತದೆ. ಭಾರತದ ಭೌಗೋಳಿಕ ರಾಜಕೀಯ ಪ್ರಾಮುಖ್ಯತೆ ಹಾಗೂ ಮುಂದಿನ ಮೂರು ದಶಕಗಳಲ್ಲಿ ಭಾರತ ಜಾಗತಿಕ ಶಕ್ತಿಯಾಗಿ ಹೊರಹೊಮ್ಮುವ ಸಾಧ್ಯತೆಗಳ ಆಧಾರದಿಂದ ಭಾರತದ ಭವಿಷ್ಯದ ಹಾದಿಯನ್ನು ಗ್ರಹಿಸಬೇಕಾಗಿದೆ.

ರಾಷ್ಟ್ರೀಯ ಶಕ್ತಿಯನ್ನು ಗುರುತಿಸುವುದು
ಹೆಚ್ಚಾಗುತ್ತಿರುವ ಭಾರತದ ಮಹತ್ವವನ್ನು ಅರ್ಥ ಮಾಡಿಕೊಳ್ಳಲು ರಾಷ್ಟ್ರೀಯ ಶಕ್ತಿ ಎನ್ನುವುದರ ಸರಿಯಾದ ಅರ್ಥ ಗ್ರಹಿಸಬೇಕಾಗುತ್ತದೆ. ಅದು ಒಂದು ರಾಷ್ಟ್ರದ ಮಿಲಿಟರಿ ಸಾಮರ್ಥ್ಯ, ಆರ್ಥಿಕ ಶಕ್ತಿ, ಹಾಗೂ ರಾಜತಾಂತ್ರಿಕ ಪ್ರಭಾವಗಳನ್ನು ಸೂಚಿಸುತ್ತದೆ. ಈ ಅಂಶಗಳು ಒಂದು ರಾಷ್ಟ್ರದ ಕಾರ್ಯತಂತ್ರದ ಪ್ರದೇಶ, ಆರ್ಥಿಕ ಅಭಿವೃದ್ಧಿ, ಮೂಲ ಸೌಕರ್ಯಗಳ ಬೆಳವಣಿಗೆ, ತಾಂತ್ರಿಕ ಸಾಮರ್ಥ್ಯ (Technical Capability), ನಾಯಕತ್ವ (Leadership) ಹಾಗೂ ರಾಜಕೀಯ ಸ್ಥಿರತೆಗಳೊಡನೆ (Political Stability) ನೇರವಾಗಿ ಸಂಬಂಧಿಸಿವೆ. ಭಾರತವನ್ನು ಬೆಳೆಯುತ್ತಿರುವ ಶಕ್ತಿ ಎನ್ನುವಾಗ ನಾವು ಇದನ್ನೂ ಗಮನಿಸಬೇಕಾಗುತ್ತದೆ.

ಭಾರತದ ಆರ್ಥಿಕ ಅಭಿವೃದ್ಧಿ
ಸ್ವಾತಂತ್ರ್ಯ ಗಳಿಸಿದ ಬಳಿಕ ಭಾರತದ ಆರ್ಥಿಕ ಪ್ರಗತಿ ಅಸಾಧಾರಣವಾಗಿತ್ತು. ಪಿಪಿಪಿ ಆಧಾರದಲ್ಲಿ ಹೇಳುವುದಾದರೆ, ಭಾರತ ಜಾಗತಿಕ ಆರ್ಥಿಕತೆಯ 7.5% ಪಾಲು ಹೊಂದಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಭಾರತದ ಆರ್ಥಿಕತೆ 2018ರ ವೇಳೆಗೆ 7%ದಷ್ಟು ಅಭಿವೃದ್ಧಿ ಹೊಂದಬಹುದು ಹಾಗೂ ಆ ಮೂಲಕ ಭಾರತ ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆಯಾಗುತ್ತದೆ ಎಂದು ಭವಿಷ್ಯ ನುಡಿದಿತ್ತು. ಒಂದು ದಶಕದ ಹಿಂದೆ ಭಾರತ ಜಗತ್ತಿನ ಆರ್ಥಿಕತೆಯಲ್ಲಿ 11ನೇ ಸ್ಥಾನ ಹೊಂದಿತ್ತು. 2027ರ ವೇಳೆಗೆ ಭಾರತದ ಜಿಡಿಪಿ ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿರುತ್ತದೆ ಎಂದು ಐಎಂಎಫ್ ಅಂದಾಜಿಸಿದೆ.

ದೇಶೀಯ ರಕ್ಷಣಾ ಉತ್ಪಾದನೆಯಲ್ಲಿ ಖಾಸಗಿ ವಲಯದ ಸಹಭಾಗಿತ್ವ!

ಭಾರತದ ಯುವ ಜನಸಂಖ್ಯೆ (Youth Population) ಹಾಗೂ ಕಡಿಮೆ ಅವಲಂಬನೆಯ ಅನುಪಾತ, ಹೆಚ್ಚಿನ ಉಳಿತಾಯ ಮತ್ತು ಬಡ್ಡಿ ಅನುಪಾತ (Interest Ratio), ಭಾರತದಲ್ಲಿ ಹೆಚ್ಚುತ್ತಿರುವ ಜಾಗತೀಕರಣ, ಜಾಗತಿಕ ಆರ್ಥಿಕತೆಯೊಡನೆ ಮಿಳಿತಗಳ ಪರಿಣಾಮವಾಗಿ ದೀರ್ಘಕಾಲದಲ್ಲಿ ಭಾರತದ ಆರ್ಥಿಕತೆ ಅಭಿವೃದ್ಧಿ ಹೊಂದುವಂತೆ ತೋರುತ್ತದೆ. ದೇಶೀಯ ಖಾಸಗಿ ಕೊಳ್ಳುವಿಕೆ ಭಾರತದ ಜಿಡಿಪಿಯ 70%ಕ್ಕೂ ಹೆಚ್ಚು ಕಾಣಿಕೆ ನೀಡುತ್ತದೆ. ಜಾಗತಿಕವಾಗಿ ಭಾರತ 6ನೇ ಅತಿದೊಡ್ಡ ಗ್ರಾಹಕ ಮಾರುಕಟ್ಟೆಯಾಗಿದೆ. ವೈಯಕ್ತಿಕ ಬಳಕೆಯ ಜೊತೆಗೆ, ಸರ್ಕಾರಿ ಖರ್ಚು, ಹೂಡಿಕೆ ಹಾಗೂ ರಫ್ತುಗಳು ಭಾರತದ ಜಿಡಿಪಿಯನ್ನು ಉತ್ತೇಜಿಸುತ್ತವೆ. 2020ರಲ್ಲಿ ಕೋವಿಡ್ ಬಿಕ್ಕಟ್ಟಿನ ಪರಿಣಾಮವಾಗಿ ಭಾರತ ಜಗತ್ತಿನ 14ನೇ ಅತಿದೊಡ್ಡ ಆಮದುದಾರ ಹಾಗೂ 21ನೇ ಅತಿದೊಡ್ಡ ರಫ್ತುದಾರ ರಾಷ್ಟ್ರವಾಗಿತ್ತು. ಈಗ ಭಾರತ ಈಸ್ ಆಫ್ ಡೂಯಿಂಗ್ ಬಿಸಿ಼ನೆಸ್ ಇಂಡೆಕ್ಸ್‌ನಲ್ಲಿ 37ನೇ ಸ್ಥಾನದಲ್ಲಿದೆ ಮತ್ತು ಗ್ಲೋಬಲ್ ಕಾಂಪಿಟೀಟಿವ್ ರಿಪೋರ್ಟ್ (ಜಾಗತಿಕ ಸ್ಪರ್ಧಾತ್ಮಕತೆಯ ವರದಿ) ಯಲ್ಲಿ 28ನೇ ಸ್ಥಾನದಲ್ಲಿದೆ.

ಉತ್ಪಾದನೆ ಮತ್ತು ಉದ್ಯಮ
ಕೈಗಾರಿಕಾ ವಲಯ ಭಾರತದ ಜಿಡಿಪಿಯ 26% ಕೊಡುಗೆ ನೀಡುತ್ತದೆ ಮತ್ತು ಭಾರತದ ಒಟ್ಟು ಕಾರ್ಮಿಕ ವರ್ಗದ 22% ಉದ್ಯೋಗ ಒದಗಿಸುತ್ತದೆ. ಇಂಡಸ್ಟ್ರಿ 2.0 ಹಾಗೂ ಭಾರತ ಸರ್ಕಾರ ಮೇಕ್ ಇನ್ ಇಂಡಿಯಾ, ಹಾಗೂ ನ್ಯಾಷನಲ್ ಪಾಲಿಸಿ ಫಾರ್ ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ನಂತಹ ಕಾನೂನಿನ ಮೂಲಕ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಿದ್ದು, ಇದು ಭಾರತದ ಜಿಡಿಪಿಗೆ ಉತ್ಪಾದನಾ ವಲಯದ ಕೊಡುಗೆಯನ್ನು 15%ಕ್ಕೆ ಹೆಚ್ಚಿಸಿದೆ. ಮುಂದಿನ ವರ್ಷಗಳಲ್ಲಿ ಇದು ಬಹುತೇಕ 25%ಕ್ಕೆ ಏರಿಕೆ ಕಾಣುವ ಸಾಧ್ಯತೆಗಳಿವೆ.

ವಿಶ್ವ ಬ್ಯಾಂಕ್ (World Bank) ಪ್ರಕಾರ, ಪ್ರಸ್ತುತ ಅಮೆರಿಕನ್ ಡಾಲರ್ ಲೆಕ್ಕದಲ್ಲಿ, 2022ರಲ್ಲಿ ಭಾರತದ ಉತ್ಪಾದನಾ ಜಿಡಿಪಿ (Production GDP) ಜಾಗತಿಕವಾಗಿ 5ನೇ ಸ್ಥಾನದಲ್ಲಿದೆ‌. 2011ರಿಂದ 2022ರ ತನಕ ಭಾರತದಲ್ಲಿ ಉತ್ಪಾದನಾ ವಲಯದ ಜಿಡಿಪಿ 4,938.56 ಬಿಲಿಯನ್ ರುಪಾಯಿಗಳಾಗಿದ್ದು, 2021ರ ಮೊದಲ ತ್ರೈಮಾಸಿಕದಲ್ಲಿ 6,778.59 ಬಿಲಿಯನ್ ರೂಪಾಯಿಗಳ ಅತ್ಯಧಿಕ ಪ್ರಮಾಣವನ್ನು ಸಾಧಿಸಿತ್ತು. 2021ರ ಮೂರನೇ ತ್ರೈಮಾಸಿಕದಲ್ಲಿ 3,331.04 ಬಿಲಿಯನ್ ರೂಪಾಯಿ ಕನಿಷ್ಠ ದರವಾಗಿತ್ತು.

ಇಂದಿನ ಪರಿಸ್ಥಿತಿಯಲ್ಲಿ ಯಾವ ರಾಷ್ಟ್ರ ಜಾಗತಿಕವಾಗಿ ಪ್ರಮುಖ ಉತ್ಪನ್ನಗಳನ್ನು ನಿಯಂತ್ರಿಸುತ್ತದೆಯೋ ಅದು ಜಗತ್ತನ್ನು ಆಳುತ್ತದೆ ಎನ್ನುವುದು ವಾಸ್ತವ ವಿಚಾರ. ಆದ್ದರಿಂದ ನೈಸರ್ಗಿಕ ಅನಿಲ (Gas), ತೈಲ (Oil), ಕಲ್ಲಿದ್ದಲು (Coal), ಕಬ್ಬಿಣ (Iron), ಸ್ಟೀಲ್ (Steel), ಪೆಟ್ರೋಲಿಯಂ ಉತ್ಪನ್ನಗಳು, ಹಾಗೂ ಆಹಾರ ಧಾನ್ಯಗಳಲ್ಲಿನ ಸ್ವಾವಲಂಬನೆ ಜಾಗತಿಕವಾಗಿ ನಮ್ಮ ಸ್ಥಾನಮಾನದ ಮೇಲೆ ಪರಿಣಾಮ ಬೀರುತ್ತದೆ.

ಭಾರತದಲ್ಲಿ ಮಿಲಿಟರಿ ಆಧುನೀಕರಣ
ಭಾರತ ಹಿಂದಿನ ಸಂಘರ್ಷಗಳಲ್ಲಿ ಕಲಿತ ಪಾಠಗಳು, ಬದಲಾಗುತ್ತಿರುವ ಪ್ರಾದೇಶಿಕ ಹಾಗೂ ಜಾಗತಿಕ ಪರಿಸ್ಥಿತಿಗಳು ಹಾಗೂ ಆಡಳಿತ ವರ್ಗದ ದೃಷ್ಟಿ ಮತ್ತು ಮಹತ್ವಾಕಾಂಕ್ಷೆಗಳ ಪರಿಣಾಮವಾಗಿ ಮಿಲಿಟರಿ ಆಧುನಿಕರಣಕ್ಕೆ ಕ್ರಮ ತೆಗೆದುಕೊಂಡಿತು. ಬಾಂಗ್ಲಾದೇಶದ ಸಮಸ್ಯೆಯ ಸಂದರ್ಭದಲ್ಲಿ ಅಮೆರಿಕ ಮತ್ತು ಚೀನಾಗಳು ಭಾರತವನ್ನು ಬೆದರಿಸುತ್ತಿದ್ದವು. ಆ ಯುದ್ಧದ ಅವಧಿಯಲ್ಲಿ ಹಿಂದೂ ಮಹಾಸಾಗರದಲ್ಲಿ ಅಮೆರಿಕದ ವಿಮಾನವಾಹಕ ನೌಕೆ ಎಂಟರ್‌ಪ್ರೈಸ್ ಉಪಸ್ಥಿತಿ ಹೊಂದಿದ್ದು ಭಾರತೀಯ ಕಮಾಂಡರುಗಳಿಗೆ ಎಚ್ಚರಿಕೆಯ ಗಂಟೆಯಾಯಿತು. ಅದರ ಪರಿಣಾಮವಾಗಿ ಅವರ ಕಾರ್ಯತಂತ್ರದ ಗ್ರಹಿಕೆಗಳು, ಯೋಜನೆಗಳು ಬದಲಾದವು. ಇದರ ಬಳಿಕ ಭಾರತದ ಅತಿದೊಡ್ಡ 7,500 ಕಿಲೋಮೀಟರ್ ಉದ್ದದ ಸಮುದ್ರ ಗಡಿಯನ್ನು ಕಾಯಲು ಆಧುನೀಕರಣದ ಕ್ರಮಗಳನ್ನು ಕೈಗೊಳ್ಳಲಾಯಿತು.

LCH: ಭಾರತೀಯ ವಾಯುಪಡೆಗೆ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್‌ ಬಲ, ಹೀಗಿದೆ ಇದರ ಸಾಮರ್ಥ್ಯ!

ಕಳೆದ ವರ್ಷಗಳಲ್ಲಿ ಭಾರತೀಯ ಸೇನೆ ಅಪಾರ ಆಧುನೀಕರಣವನ್ನು ಹೊಂದಿದೆ. ಎದುರಾಗಬಹುದಾದ ಅಪಾಯದ ಪರಿಣಾಮವಾಗಿ ನಮ್ಮ ಆಯುಧ ವ್ಯವಸ್ಥೆಗಳು, ಪ್ಲಾಟ್‌ಫಾರಂಗಳು ಸತತವಾಗಿ ಅಭಿವೃದ್ಧಿ ಹೊಂದಿವೆ.

ಕಾರ್ಯತಂತ್ರದ ಗುರಿಯನ್ನು ಸಾಧಿಸಲು ಬೇಕಾಗಿರುವ ಎಲ್ಲ ಸಾಮರ್ಥ್ಯಗಳನ್ನು ಗಳಿಸುವ ಉದ್ದೇಶದಿಂದ ಇಡಿಯ ಸೇನೆಯನ್ನು ಸಂಪೂರ್ಣವಾಗಿ ಆಧುನೀಕರಣಗೊಳಿಸುವುದು ಒಂದು ಸಂಕೀರ್ಣ ಪ್ರಕ್ರಿಯೆ. ಸೇನೆಯ ಆಧುನೀಕರಣ (Military Modenization) ರಾಷ್ಟ್ರದ ಮಹತ್ವಾಕಾಂಕ್ಷೆಯನ್ನೂ ಪ್ರತಿನಿಧಿಸುತ್ತದೆ. ಹೆಚ್ಚಿನ ಧ್ರುವೀಕರಣ ಹೊಂದಿರುವ ಜಗತ್ತಿನಲ್ಲಿ ಭಾರತ ಒಂದು ಜವಾಬ್ದಾರಿಯುತ ಶಕ್ತಿಯಾಗಿದೆ. ಪ್ರಸ್ತುತ ಹಿಂದೂ ಮಹಾಸಾಗರ ಮತ್ತು ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಪ್ರಬಲ ಶಕ್ತಿಯಾಗಿರುವ ಭಾರತ 2050ರ ವೇಳೆಗೆ ಜಗತ್ತಿ‌ನ ಎರಡನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಪ್ರೈಸ್ ವಾಟರ್‌ಹೌಸ್ ಕೂಪರ್ ಸಂಸ್ಥೆ ಅಂದಾಜಿಸಿದೆ. ಈ ಎಲ್ಲಾ ಸಾಧ್ಯತೆಗಳ ಆಧಾರದಲ್ಲಿ ಭಾರತಕ್ಕೆ ಜಗತ್ತಿನಲ್ಲಿ ತನ್ನದೇ ಆದ ಪಾತ್ರವಿದೆ.

ಜಾಗತಿಕ ರಾಜಕೀಯದಲ್ಲಿ ಮಿಲಿಟರಿ ಹೇಗೆ ಪ್ರಭಾವ ಬೀರುತ್ತದೆ?
ಭಾರತದ ಮಿಲಿಟರಿ ಸಾಮರ್ಥ್ಯ ಮತ್ತು ಆಧುನೀಕರಣದ ಗುರಿಗಳನ್ನು ಗಮನಿಸಿದ ಬಳಿಕ, ನಮ್ಮ ಸೇನಾ ಸಾಮರ್ಥ್ಯ ಪ್ರಸ್ತುತ ಜಾಗತಿಕ ರಾಜಕಾರಣದ ಮೇಲೆ ಹೇಗೆ ಪ್ರಭಾವ ಬೀರಬಹುದು ಎನ್ನುವುದನ್ನೂ ಗಮನಿಸಬೇಕಿದೆ.

ಒಂದು ರಾಷ್ಟ್ರದ ಒಟ್ಟು ಸಾಮರ್ಥ್ಯವನ್ನು (ಸಿಎನ್‌ಪಿ) ಪರಿಶೀಲಿಸುವಾಗ, ಅದರ ಸೇನಾ ಸಾಮರ್ಥ್ಯ ಅತ್ಯಂತ ಮಹತ್ತರವಾಗಿದೆ. ಇದನ್ನು ಸೇನೆಯ ಸಾಮರ್ಥ್ಯ, ಕ್ಷಿಪಣಿ ಸಾಮರ್ಥ್ಯ, ಭೂಮಿ, ಸಾಗರ ಹಾಗೂ ಆಕಾಶ ಆಧಾರಿತ ವ್ಯವಸ್ಥೆಗಳು, ಆಧುನಿಕ ವಾಯು ರಕ್ಷಣಾ ವ್ಯವಸ್ಥೆಗಳು, ತಂತ್ರಜ್ಞಾನ, ಹಾಗೂ ವಿಚಕ್ಷಣಾ ಸಾಮರ್ಥ್ಯಗಳ ಆಧಾರದಲ್ಲಿ ಲೆಕ್ಕಾಚಾರ ನಡೆಸಲಾಗುತ್ತದೆ. ಒಂದು ರಾಷ್ಟ್ರ ತನ್ನನ್ನು ತಾನು ಕಾಪಾಡಿಕೊಂಡರೆ ಅದು ಸಾಕಾಗುವುದಿಲ್ಲ. ಒಂದು ವೇಳೆ ಅಗತ್ಯ ಬಿದ್ದರೆ ಅದು ತನ್ನ ಶತ್ರುವಿನ ಮೇಲೆ ದಾಳಿ ಮಾಡಲೂ ಸಮರ್ಥವಾಗಿರಬೇಕು.

ಇತ್ತೀಚಿನ ವರ್ಷಗಳಲ್ಲಿ ಯುದ್ಧವೂ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಸಾಂಪ್ರದಾಯಿಕ ವ್ಯವಸ್ಥೆಗಳ ಜಾಗದಲ್ಲಿ ಈಗ ಆಧುನಿಕ ವ್ಯವಸ್ಥೆಗಳು ಬಂದಿದ್ದು, ಸೈಬರ್, ಬಾಹ್ಯಾಕಾಶ, ಹಾಗೂ ಮಾಹಿತಿಗಳು ಪ್ರಾಥಮಿಕ ಅಂಶಗಳಾಗಿವೆ. ಖಾಸಗಿ ಸಂಸ್ಥೆಗಳ ಸರಿಯಾದ ಬಳಕೆಯೂ ಯುದ್ಧದ ಚಿತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸೂಪರ್ ಸಾನಿಕ್ ಹಾಗೂ ಹೈಪರ್ ಸಾನಿಕ್ ಕ್ಷಿಪಣಿಗಳು, ಅತ್ಯುತ್ತಮ ವಾಯು ರಕ್ಷಣಾ ವ್ಯವಸ್ಥೆ, ಸ್ಟೆಲ್ತ್ ವಿಮಾನಗಳು, ನ್ಯೂಕ್ಲಿಯರ್ ಸಬ್‌ಮರೀನ್‌ಗಳು, ವಿಮಾನವಾಹಕ ನೌಕೆಗಳು, ಹಾಗೂ ಅಣ್ವಸ್ತ್ರಗಳನ್ನು ಹೊಂದಿರುವ ಯಾವುದೇ ರಾಷ್ಟ್ರ ಯುದ್ಧದಲ್ಲಿ ಅತ್ಯಂತ ಬಲಶಾಲಿಯಾಗಿರುತ್ತದೆ. ಮಿಲಿಟರಿ ಸಾಮರ್ಥ್ಯವನ್ನು ನಮ್ಮ ತೀರಗಳಿಂದ ಇನ್ನಷ್ಟು ಬೆಳೆಸಿ, ಮಿತ್ರ ರಾಷ್ಟ್ರಗಳ ಸನಿಹ ಸ್ಥಾಪಿಸುವುದರಿಂದ ಅಗತ್ಯ ಸಮಯದಲ್ಲಿ ಸಹಾಯ ನಿರೀಕ್ಷಿಸಬಹುದಾಗಿದೆ.

ಒಂದು ಬಾರಿ ರಾಷ್ಟ್ರವೊಂದರ ಸೇನೆ ಈ ಸಾಮರ್ಥ್ಯಗಳನ್ನು ಗಳಿಸಿಕೊಂಡರೆ, ಅದು ಹೆಚ್ಚಿನ ಧ್ರುವೀಕರಣ ಹೊಂದಿರುವ ಜಾಗತಿಕ ರಾಜಕಾರಣದ ಚಿತ್ರಣವನ್ನು ಬದಲಾಯಿಸಬಹುದು.

ಮಿಲಿಟರಿ ಸಾಮರ್ಥ್ಯದಲ್ಲಿ ನೌಕಾ ಸಾಮರ್ಥ್ಯವು ಅತ್ಯಂತ ಮಹತ್ತರವಾಗಿದೆ. ಸಮುದ್ರದ ಮೇಲೆ ಹತೋಟಿ ಸಾಧಿಸುವ ಸಾಮರ್ಥ್ಯ ನಾಳಿನ ಭೌಗೋಳಿಕ ರಾಜಕೀಯದ ಪರಿಸ್ಥಿತಿಯನ್ನು ನಿರ್ಧರಿಸುತ್ತದೆ. ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಪ್ರಭಾವ ಬೀರುವ ಮೂಲಕ ಚೀನಾ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಅಮೆರಿಕಾ ಇಂಡೋ ಪೆಸಿಫಿಕ್ ಪ್ರಾಂತ್ಯದಲ್ಲಿ ಇಂತದ್ದೇ ಸಾಮರ್ಥ್ಯ ತೋರಿದೆ. ಆದ್ದರಿಂದ, ನಮ್ಮ ಪ್ರಸಕ್ತ ಸನ್ನಿವೇಶದಲ್ಲಿ ಹಿಂದೂ ಮಹಾಸಾಗರದಲ್ಲಿ ಸಾಮರ್ಥ್ಯ ಸಾಬೀತುಪಡಿಸುವುದು ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ.

ನೌಕಾಸೇನೆಯ ವಲಯದಲ್ಲಿ ಹಿಂದೂ ಮಹಾಸಾಗರದಲ್ಲಿ ಭಾರತದ ವ್ಯಾಪ್ತಿ ಅತ್ಯಂತ ವಿಶಾಲವಾಗಿದೆ. ಇದು ಚೀನಾದ 80%ಕ್ಕೂ ಹೆಚ್ಚು ತೈಲ ಆಮದು ಸಂಚರಿಸುವ ಸಮುದ್ರ ಮಾರ್ಗದ ಮೇಲೆ ಭಾರತಕ್ಕೆ ನಿಯಂತ್ರಣ ಒದಗಿಸುತ್ತದೆ. 2008ರ ಬಳಿಕ ಚೀನಾದ ನೌಕಾಪಡೆ (ಪಿಎಲ್ಎಎನ್) ಯುದ್ಧನೌಕೆಗಳನ್ನು ಹಲವು ಬಾರಿ ಹಿಂದೂ ಮಹಾಸಾಗರಕ್ಕೆ ಕಳುಹಿಸಿದೆ. ಇತ್ತೀಚಿನ ವರ್ಷಗಳಲ್ಲಿ ಚೀನಾ ವಾರ್ಷಿಕವಾಗಿ ಏಳರಿಂದ ಎಂಟು ಯುದ್ಧನೌಕೆಗಳನ್ನು ಹಿಂದೂ ಮಹಾಸಾಗರ ಪ್ರಾಂತ್ಯಕ್ಕೆ ಕಳುಹಿಸುತ್ತಾ ಬಂದಿದೆ. ಡ್ಜಿಬೌತಿಯಲ್ಲಿ ನಿರ್ಮಾಣವಾದ ಚೀನಾದ ಮಿಲಿಟರಿ ಸ್ಟೇಷನ್, ಪಾಕಿಸ್ತಾನದ ಗ್ವಾದಾರ್, ಶ್ರೀಲಂಕಾದ ಹಂಬಂಟೋಟಾ, ಬಾಂಗ್ಲಾದೇಶದ ಪಯಾರ, ಮಯನ್ಮಾರಿನ ಕ್ಯಾಕ್‌ಪ್ಯುಗಳಲ್ಲಿ ನಿರ್ಮಾಣವಾಗುತ್ತಿರುವ ಚೀನಾದ ಬಂದರುಗಳು ಭಾರತದ ಭಯವನ್ನು ಹೆಚ್ಚಿಸಿವೆ. ಹಿಂದೂ ಮಹಾಸಾಗರದಲ್ಲಿ ಚೀನಾದ ಉಪಸ್ಥಿತಿ ಹೆಚ್ಚಾಗುತ್ತಿದ್ದರೂ, ಪ್ರಸ್ತುತ ಪರಿಸ್ಥಿತಿಯಲ್ಲಿ ಚೀನಾವಾಗಲಿ, ಪಾಕಿಸ್ತಾನವಾಗಲಿ ಭಾರತದ ನೌಕಾಸೇನೆಯ ಯೋಜನೆಗಳಿಗೆ ಯಾವುದೇ ಮಹತ್ತರ ಸಮಸ್ಯೆ ತಂದೊಡ್ಡಲು ಸಾಧ್ಯವಿಲ್ಲ.

ನೌಕಾಪಡೆಯ ಸಹಕಾರ, ಸುರಕ್ಷತೆ ಮತ್ತು ವ್ಯಾಪಾರ ಸಂಪರ್ಕ ಮತ್ತು ಮೂಲಭೂತ ಸೌಕರ್ಯಗಳು ಹಾಗೂ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸಲು ಭಾರತ ಮತ್ತು ಇಂಡೋನೇಷ್ಯಾಗಳು ಒಂದಾಗಿ ಮಹತ್ವದ ಸಾಬಾಂಗ್ ಆಳ ಸಮುದ್ರ ಬಂದರನ್ನು ಅಭಿವೃದ್ಧಿ ಪಡಿಸುತ್ತಿವೆ. ಈ ಬಂದರು ಭಾರತದ ದಕ್ಷಿಣದ ತುದಿಯಲ್ಲಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಸನಿಹದಲ್ಲಿದೆ.

ಈ ಬಂದರು ಆಗ್ನೇಯ ಏಷ್ಯಾದ ಮಾರುಕಟ್ಟೆಯೊಡನೆ ಭಾರತದ ಸಂಪರ್ಕವನ್ನು ಹೆಚ್ಚಿಸಿ, ಮಲಾಕಾ ಜಲಸಂಧಿಯಲ್ಲಿ ಹಿಂದೂ ಮಹಾಸಾಗರದಿಂದ ಹೆಚ್ಚಿರುವ ಚೀನಾದ ಉಪಸ್ಥಿತಿಯ ವಿರುದ್ಧ ಒಂದು ಕಾರ್ಯತಂತ್ರದ ಮೇಲುಗೈ ಒದಗಿಸಲಿದೆ. ಭಾರತ ತಜಕಿಸ್ತಾನದ ಗಿಸ್ಸಾರ್ ಮಿಲಿಟರಿ ಏರೋಡ್ರೋಮ್ (ಜಿಎಂಎ) ನಲ್ಲಿ ಒಂದು ವಾಯುನೆಲೆಯನ್ನು ನಿರ್ವಹಿಸುತ್ತದೆ. ಇದು ತಜಕಿಸ್ತಾನದೊಡನೆ ಭಾರತ ನಿರ್ವಹಿಸುತ್ತಿರುವ ಪ್ರಥಮ ವಿದೇಶೀ ವಾಯುನೆಲೆಯಾಗಿದ್ದು, ಇದು ಭಾರತದ ಮಿಲಿಟರಿ ಕಾರ್ಯಾಚರಣೆಗಳಿಗೆ ಮತ್ತು ಕಾರ್ಯತಂತ್ರದ ಯೋಜನೆಗಳಿಗೆ ಹೆಚ್ಚಿನ ಬಲ ನೀಡಲಿದೆ. ಈ ಜಿಎಂಎ ವಾಯುನೆಲೆಯನ್ನು ಅಯ್ನಿ ಏರ್‌ಬೇಸ್ ಎಂದೂ ಕರೆಯಲಾಗುತ್ತಿದ್ದು, ಇದು ತಜಕಿಸ್ತಾನದ ರಾಜಧಾನಿ ದುಶಾಂಬೆಯ ಸನಿಹದಲ್ಲಿ, ಪಶ್ಚಿಮದಲ್ಲಿದೆ. ಭಾರತ ಮತ್ತು ತಜಕಿಸ್ತಾನಗಳು ಬಹುತೇಕ ಎರಡು ದಶಕಗಳ ಕಾಲ ಅದನ್ನು ನಿರ್ವಹಿಸುತ್ತಾ ಬಂದಿವೆ.

ಭಾರತದ ವಿದೇಶೀ ನೀತಿ
ಭಾರತ ಇತ್ತೀಚೆಗೆ ತನ್ನ ರಾಷ್ಟ್ರೀಯ ಹಿತಾಸಕ್ತಿಗೆ (National Interest) ಸಹಕಾರಿಯಾಗಿರುವ ಪ್ರಬುದ್ಧ ಮತ್ತು ವಾಸ್ತವಿಕ ವಿದೇಶಾಂಗ ನೀತಿಗಳನ್ನು ರೂಪಿಸುತ್ತಿದೆ. ಭಾರತ ಯಾವುದೇ ಪ್ರಮುಖ ಜಾಗತಿಕ ಶಕ್ತಿ ಗುಂಪುಗಳೊಡನೆ ತನ್ನನ್ನು ತಾನು ಗುರುತಿಸಿಕೊಂಡಿಲ್ಲ. ಈಗ ನಡೆಯುತ್ತಿರುವ ಉಕ್ರೇನ್ ಬಿಕ್ಕಟ್ಟಿನ ಮಧ್ಯದಲ್ಲಿಯೂ ಭಾರತ ರಷ್ಯಾ ಮತ್ತು ಅಮೆರಿಕಾ ಎರಡೂ ರಾಷ್ಟ್ರಗಳ ಜೊತೆಯೂ ರಾಜತಾಂತ್ರಿಕ ಮತ್ತು ವ್ಯಾವಹಾರಿಕ ಸಂಬಂಧವನ್ನು ಕಾಪಾಡಿಕೊಂಡಿದೆ. ಇತ್ತೀಚೆಗೆ ಫ್ರಾನ್ಸ್, ಜರ್ಮನಿ ಹಾಗೂ ಯುನೈಟೆಡ್ ಕಿಂಗ್‌ಡಮ್ ಜೊತೆಗಿನ ಭಾರತದ ಸಂವಹನ ಪಾಶ್ಚಿಮಾತ್ಯ ರಾಷ್ಟ್ರಗಳೊಡನೆ ಭಾರತದ ಸಂಬಂಧವನ್ನು ಗಟ್ಟಿಗೊಳಿಸಿದೆ. ಇಂಡೋ - ಪೆಸಿಫಿಕ್ ಪ್ರಾಂತ್ಯದಲ್ಲಿ ಕಾರ್ಯತಂತ್ರದ ಬದಲಾವಣೆಗಳನ್ನು ಮಾಡಲಾಗಿದ್ದು, ಕ್ವಾಡ್ ವೇದಿಕೆಗೆ ಮರಳಿ ಚಾಲನೆ ನೀಡಲಾಗಿದೆ. ಭಾರತ ಆಸ್ಟ್ರೇಲಿಯಾ ಮತ್ತು ಜಪಾನ್ ಗಳೊಡನೆ ಮೆಮೊರೆಂಡಮ್ ಆಫ್ ಅಂಡರ್‌ಸ್ಟಾಂಡಿಂಗ್ ಗಳಿಗೆ ಸಹಿ ಹಾಕಿದ್ದು, ಅವುಗಳೊಡನೆ ಭಾರತದ ಜಂಟಿ ಸಾಮರ್ಥ್ಯಕ್ಕೆ ಅಗತ್ಯ ಉತ್ತೇಜನ ನೀಡಿದೆ.

ಭಾರತ ನಿಯಮಿತವಾಗಿ ಕೊಲ್ಲಿ ರಾಷ್ಟ್ರಗಳಾದ ಯುಎಇ, ಸೌದಿ ಅರೇಬಿಯಾ, ಕುವೈತ್, ಒಮಾನ್, ಹಾಗೂ ಬಹರೇನ್ ಗಳೊಡನೆ ಸಂವಹನ ನಡೆಸುತ್ತಿದ್ದು, ಅವುಗಳೊಡನೆ ಸಂಬಂಧ ವೃದ್ಧಿಯಾಗಿದೆ.

ಭಾರತ ಮತ್ತು ಆಫ್ರಿಕಾದ ನಡುವಿನ ಸಂಬಂಧಗಳೂ ಅಪಾರವಾಗಿ ವೃದ್ಧಿಸಿವೆ. ಇದು ವಸಾಹತು ಪೂರ್ವ ಸಮಯಕ್ಕೂ ಸಂಬಂಧಿಸಿದೆ. ಇತ್ತೀಚೆಗೆ ಆಫ್ರಿಕಾದಲ್ಲಿ ಭಾರತದ 18 ಯೋಜನೆಗಳು ಜಾರಿಗೆ ಬಂದಿವೆ. ಐಟಿ, ಶಿಕ್ಷಣ, ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಭಾರತ ಆಫ್ರಿಕಾದ ದೇಶಗಳಿಗೆ ಲೈನ್ ಆಫ್‌ ಕ್ರೆಡಿಟ್ ಮೂಲಕ ಸಾಲ ಒದಗಿಸುವುದಾಗಿ ಘೋಷಿಸಿದೆ. ಬ್ರಹ್ಮೋಸ್ ಮತ್ತು ಆಕಾಶ್ ಕ್ಷಿಪಣಿಗಳ ರಫ್ತಿನ ಮೂಲಕ ಭಾರತೀಯ ಸೇನೆ ಫಿಲಿಪೈನ್ಸ್, ಇಂಡೋನೇಷ್ಯಾ, ಹಾಗೂ ವಿಯೆಟ್ನಾಂಗಳೊಡನೆ ಸಂಬಂಧ ವೃದ್ಧಿಸಿದೆ. ಭಾರತ ನೆರೆಹೊರೆಯವರು ಮೊದಲು ಎಂಬ ನೀತಿಯನ್ನು ಅಳವಡಿಸಿಕೊಂಡಿದ್ದು, ಇತ್ತೀಚೆಗೆ ಸಮಸ್ಯೆಗೆ ಸಿಲುಕಿರುವ ಶ್ರೀಲಂಕಾಗೂ ಸಹಾಯಹಸ್ತ ಚಾಚಿದೆ.

ನಿಮ್ಮ ಕೆಲಸ ನೋಡಿಕೊಳ್ಳಿ, ಭಾರತದ ಜೊತೆ ಜಂಟಿ ಸಮರಾಭ್ಯಾಸ ಪ್ರಶ್ನಿಸಿದ ಚೀನಾಗೆ ಅಮೆರಿಕ ತಿರುಗೇಟು!

ಭಾರತ ಬಹುಪಕ್ಷೀಯ ವೇದಿಕೆಗಳ ಕುರಿತಾದ ತನ್ನ ಕಾರ್ಯತಂತ್ರದ ದೃಷ್ಟಿಯನ್ನು ಮರು ನಿರ್ದೇಶಿಸಲು ಕಷ್ಟಪಡುತ್ತಿದೆ. ಆದರೆ ಭಾರತ ಈ ಸವಾಲನ್ನು ಒಪ್ಪಿಕೊಂಡಿದ್ದು, ಬಹುಪಕ್ಷೀಯ ವೇದಿಕೆಗಳಲ್ಲಿ, ಅದರಲ್ಲೂ ವಿಶೇಷವಾಗಿ ಆರ್ಥಿಕ ಮತ್ತು ರಕ್ಷಣಾ ಉದ್ದೇಶಗಳ ಪ್ರಾಂತೀಯ ಗುಂಪುಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದನ್ನು ಪ್ರೋತ್ಸಾಹಿಸುತ್ತಿದೆ.

ಅದರೊಡನೆ ಭಾರತ ತನ್ನ ನೆರೆಹೊರೆಯಲ್ಲಿರುವ ಪ್ರಾಂತೀಯ ಸಹಕಾರ ಸಂಸ್ಥೆಗಳಾದ ಎಸ್‌ಸಿಓ, ಸಾರ್ಕ್, ಹಾಗೂ ಬಿಮ್‌ಸ್ಟೆಕ್, ಹಾಗೂ ಈಸ್ಟ್ ಏಷ್ಯಾ ಸಮ್ಮಿಟ್, ಹಾಗೂ ಏಷಿಯಾನ್ ಆಧಾರಿತ ಗುಂಪುಗಳೊಡನೆ ಸಕ್ರಿಯವಾಗಿದೆ. ಮೋದಿ ಸರ್ಕಾರ ರಾಜಕೀಯ - ಕಾರ್ಯತಂತ್ರದ ಗುರಿಗಳನ್ನು ಆರ್ಥಿಕ ಲಾಭದೊಡನೆಯೇ ಸಾಧಿಸುತ್ತಿದೆ.

ಭಾರತದ ಮಿಲಿಟರಿ ಸಾಮರ್ಥ್ಯ ಹಾಗೂ ನ್ಯೂಕ್ಲಿಯರ್ ಸಾಮರ್ಥ್ಯಗಳು ಧ್ರುವೀಕರಣ ಹೊಂದಿರುವ ಜಗತ್ತಿನಲ್ಲಿ ಭಾರತದ ಪಾತ್ರವನ್ನು ರೂಪಿಸಲು ಮಹತ್ವದ್ದಾಗಿವೆ. ಮುಂದಿನ ದಿನಗಳಲ್ಲಿ ಭಾರತ ಅಪರಿಮಿತ ಸವಾಲುಗಳನ್ನು ಎದುರಿಸಲಿದೆ.
 

Follow Us:
Download App:
  • android
  • ios