ನವದೆಹಲಿ(ಮೇ.06): ವಲಸಿಗರು ತವರಿಗೆ ಮರಳಲು ಸರ್ಕಾರವು ಬಸ್‌ ಸೌಲಭ್ಯ ಹಾಗೂ ರೈಲು ಸೌಲಭ್ಯ ಆರಂಭಿಸಿದ ಬೆನ್ನಲ್ಲೇ, ಕಾರ್ಮಿಕರು ಆಗಮಿಸಿದ ರಾಜ್ಯಗಳಲ್ಲಿ ಕೊರೋನಾ ವೈರಸ್‌ ಹರಡುವ ಭೀತಿ ಕೂಡ ಹೆಚ್ಚಿದೆ. ಛತ್ತೀಸ್‌ಗಢ, ಕರ್ನಾಟಕ ಹಾಗೂ ರಾಜಸ್ಥಾನದಲ್ಲಿ ಇಂತಹ ಘಟನೆಗಳು ನಡೆದಿವೆ. ಇವುಗಳಲ್ಲಿ ಕೆಲವು ಘಟನೆಗಳು ಅಕ್ರಮ ವಲಸೆಯಿಂದ ಸಂಭವಿಸಿವೆ.

ಛತ್ತೀಸ್‌ಗಢದಲ್ಲಿ ಹೊರರಾಜ್ಯಗಳಿಗೆ ದುಡಿಯಲು ತೆರಳಿ ಸಾಂಸ್ಥಿಕ ಕ್ವಾರಂಟೈನ್‌ ಆಗಿದ್ದ 14 ವಲಸಿಗರಿಗೆ ಸೋಮವಾರ ಕೊರೋನಾ ಸೋಂಕು ದೃಢಪಟ್ಟಿದೆ. ಇನ್ನು ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ಮುಂಬೈನಿಂದ ಮರಳಿದ ಇಬ್ಬರಿಗೆ ಸೋಂಕು ತಗುಲಿದೆ. ಅಲ್ಲದೆ, ಹಾವೇರಿ ಜಿಲ್ಲೆ ಸವಣೂರಿನಲ್ಲಿ ಮುಂಬೈನಿಂದ ಅಕ್ರಮವಾಗಿ ವಾಪಸಾದ ಒಬ್ಬನಿಗೆ ಸೋಂಕು ತಟ್ಟಿದೆ. ಈತನ ಸಂಪರ್ಕಕ್ಕೆ ಬಂದವರಿಗೂ ಸೋಂಕಿನ ಭಯ ಉಂಟಾಗಿದೆ.

ರಾಜಸ್ಥಾನದಲ್ಲಿ ಅಕ್ರಮವಾಗಿ ಗುಜರಾತ್‌ನಿಂದ ಕೆಲವು ಕೆಲಸಗಾರರು ಮರಳಿದ್ದು, ಡುಂಗರ್‌ಪುರ ಜಿಲ್ಲೆಯ ಕಸಬಾ ಗ್ರಾಮಕ್ಕೆ ಸೋಂಕು ವ್ಯಾಪಿಸಿದೆ. ಗಡಿಯಲ್ಲಿ ಬಿಗಿ ತಪಾಸಣೆ ಇರದೇ ಈ ರೀತಿ ಅಕ್ರಮವಾಗಿ ನುಸುಳುವಿಕೆ ನಡೆದಿದೆ. ಅಲ್ಲದೆ, ವಲಸಿಗರ ಸೂಕ್ತ ಆರೋಗ್ಯ ತಪಾಸಣೆ ಇಲ್ಲದಿರುವುದೂ ಇದಕ್ಕೆ ಕಾರಣವಾಗಿದೆ.

ಈಗಾಗಲೇ ದೇಶದ ವಿವಿಧ ಭಾಗಗಳಿಂದ ಅಂದಾಜು 15 ಲಕ್ಷ ಜನ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಪ್ರಯಾಣಿಸಿರುವ ಇಲ್ಲವೇ ಪ್ರಯಾಣಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.