ಭೋಪಾಲ್(ಮೇ.14): ಮಧ್ಯಪ್ರದೇಶದ ವಲಸೆ ಕಾರ್ಮಿಕನೊಬ್ಬ ಲಾಕ್‌ಡೌನ್‌ನಿಂದ ಕಂಗೆಟ್ಟು ಕುಟುಮಬ ಸಮೇತನಾಗಿ ತನ್ನ ಊರಿನತ್ತ ಪ್ರಯಾಣ ಬೆಳೆಸಿದ್ದಾನೆ. ಆದರೆ ಗರ್ಭಿಣಿ ಪತ್ನಿ ಹಾಗೂ ಪುಟ್ಟ ಮಗಳು ನಡೆಯಲಾಗದೆ ಪರದಾಡುತ್ತಿದ್ದಾಗ ಬೇರೆ ವಿಧಿ ಇಲ್ಲದೇ ಮರದ ಕೋಲಿನಿಂದ ಪುಟ್ಟ ಗಾಡಿ ನಿರ್ಮಿಸಿ ಅದರಲ್ಲೇ ಅವರನ್ನು ಕುಳ್ಳಿರಿಸಿ ಎಳೆದುಕೊಂಡೇ ತನ್ನ ಊರು ಸೇರಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು ಮಧ್ಯಪ್ರದೇಶದ ಕಾರ್ಮಿಕ ರಾಮು ತನ್ನ ಗರ್ಭಿಣಿ ಪತ್ನಿ ಹಾಗೂ ಎಳೆಯ ಹೆಣ್ಣುಮಗುವಿನೊಂದಿಗೆ ಹೈದರಾಬಾದ್‌ನಿಂದ 700 ಕಿ.ಮೀ.ದೂರದಲ್ಲಿರುವ ತನ್ನ ಊರಿಗೆವಾಪಾಸಾಗಲು ನಿರ್ಧರಿಸಿದ್ದರು. ಆದರೆ ಲಾಕ್‌ಡೌನ್‌ನಿಂದ ಬಸ್, ಟ್ರಕ್ ಸಿಗದಿದ್ದಾಗ ಕಾಲ್ನಡಿಗೆಯಲ್ಲೇ ಊರಿಗೆ ತೆರಳಲು ನಿರ್ಧರಿಸಿದ್ದಾರೆ.

ಆದರೆ ಪುಟ್ಟ ಮಗುಳನ್ನು ಎತ್ತಿಕೊಂಡು ಗರ್ಭಿಣಿ ಪತ್ನಿಯ ಕಾಳಜಿ ವಹಿಸಿ ಹೆಚ್ಚು ದೂರ ಸಾಗಲು ಆಗದಿದ್ದಾಗ ಕಾಡಿನಲ್ಲಿ ಸಿಕ್ಕಿದ ಮರದ ಕೋಲುಗಳಿಂದ ಎಳೆದೊಯ್ಯಬಹುದಾದ ತಾತ್ಕಾಲಿಕ ಮರದ ಬಂಡಿ ನಿರ್ಮಿಸಿದ್ದಾರೆ.  ಹೀಗೆ ಹೆಂಡತಿ ಹಾಗೂ ಮಗಳನ್ನು ಈ ಪುಟ್ಟ ಬಂಡಿಯಲ್ಲಿ ಕುಳ್ಳಿರಿಸಿ ಎಳೆದುಕೊಂಡೇ ಹೋಗಿದ್ದಾನೆ. ಸದ್ಯ ಈ ಮನಕಲಕುವ ದೃಶ್ಯ ಮೊಬೈಲ್‌ನ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಮು ಮಂಗಳವಾರ ಬೆಳಗ್ಗೆ ತನ್ನೂರಾದ ಬಾಲಾಘಾಟ್ ಜಿಲ್ಲೆಗೆ ತಲುಪಿದ್ದಾರೆ. ತನ್ನೂರಿಗೆ ತಲುಪುವವರೆಗೂ ರಾಮು ಏನನ್ನೂ ತಿಂದಿರಲಿಲ್ಲ.ಮಹಾರಾಷ್ಟ್ರದಿಂದ ತವರು ಜಿಲ್ಲೆಗೆ ಕಾಲಿಡುತ್ತಿದ್ದಂತೆಯೇ ಉಪವಿಭಾಗೀಯ ಅಧಿಕಾರಿ ನಿತೇಶ್ ಭಾರ್ಗವ್ ಈ ಮೂವರಿಗೆ ಬಿಸ್ಕಿಟ್ ಮತ್ತು ಊಟ ನೀಡಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಭಾರ್ಗವ್ ನಾವು ಕುಟುಂಬ ಸದಸ್ಯರನ್ನು ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ವಾಹನದ ಮೂಲಕ ಅವರ ಊರಿಗೆ ಕಳುಹಿಸಿಕೊಟ್ಟಿದ್ದೇವೆ. ಅಲ್ಲಿ ಅವರು 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಲಿದ್ದಾರೆ ಎಂದು ತಿಳಿಸಿದ್ದಾರೆ.