ಮಧ್ಯಪ್ರಾಚ್ಯದ ಉದ್ವಿಗ್ನತೆಯಿಂದ ದೇಶದಲ್ಲಿ ಉಂಟಾಗಿರುವ ಎಲ್‌ಪಿಜಿ ಅಭಾವವು ಇಂಡಕ್ಷನ್‌ ಸ್ಟವ್‌ಗಳಿಗೆ ಭಾರೀ ಬೇಡಿಕೆ ಸೃಷ್ಟಿಸಿದೆ. ಆನ್ಲೈನ್ ವೇದಿಕೆಗಳಲ್ಲಿ ಇಂಡಕ್ಷನ್‌ ಸ್ಟವ್‌ಗಳು ಖಾಲಿಯಾಗಿದ್ದು, ದೆಹಲಿಯೊಂದರಲ್ಲೇ ಬೇಡಿಕೆ ಶೇ. 80ರಷ್ಟು ಹೆಚ್ಚಾಗಿದೆ.

ನವದೆಹಲಿ (ಮಾ.13): ಮಧ್ಯಪ್ರಾಚ್ಯ ಉದ್ವಿಗ್ನತೆಯ ಕಾರಣ ಭಾರತದಲ್ಲಿ ಉಂಟಾಗಿರುವ ಎಲ್‌ಪಿಜಿ ಅಭಾವವು ಇಂಡಕ್ಷನ್‌ ಸ್ಟವ್‌ಗಳಿಗೆ (ಎಲೆಕ್ಟ್ರಿಕ್‌ ಒಲೆ) ಎಲ್ಲಿಲ್ಲದ ಬೇಡಿಕೆ ಸೃಷ್ಟಿಸಿದೆ. ಜನ ಆನ್ಲೈನ್‌ನಲ್ಲಿ ಈ ಒಲೆಗಳ ಖರೀದಿಗೆ ಮುಗಿಬಿದ್ದಿದ್ದು, ಕಳೆದ ಮೂರ್ನಾಲ್ಕು ದಿನಗಳಲ್ಲಿ ಬೇಡಿಕೆ ಶೇ.300ರಷ್ಟು ಏರಿಕೆಯಾಗಿದೆ.

ಅಮೆಜಾನ್, ಫ್ಲಿಪ್‌ಕಾರ್ಟ್, ಬ್ಲಿಂಕಿಟ್‌, ಝೆಪ್ಟೋ, ಸ್ವಿಗ್ಗಿ ಮುಂತಾದ ಆನ್ಲೈನ್‌ ವೇದಿಕೆಗಳ ಮೂಲಕ ಜನ ಇಂಡಕ್ಷನ್‌ ಸ್ಟವ್‌ಗಳನ್ನು ಖರೀದಿಸುತ್ತಿದ್ದಾರೆ. ಈಗಾಗಲೇ ಇವುಗಳಲ್ಲಿ ಬಹುತೇಕ ಕಡೆ ಲಭ್ಯತೆ ಇಲ್ಲವಾಗಿದೆ. ಅಮೆಜಾನ್‌ನಲ್ಲಿ ಕೆಂಟ್ ಮತ್ತು ಉಷಾ ಬ್ರ್ಯಾಂಡ್‌ನ ಕೆಲವು ಒಲೆಗಳು ಮಾತ್ರ ಲಭ್ಯವಿದ್ದು, ಇತರ ಬ್ರ್ಯಾಂಡ್‌ಗಳು ಖಾಲಿಯಾಗಿವೆ. ಝೆಪ್ಟೋ, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮುಂತಾದ ಕ್ವಿಕ್ ಕಾಮರ್ಸ್ ಆ್ಯಪ್‌ಗಳಲ್ಲೂ ಇದೇ ಸ್ಥಿತಿಯಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಕಳೆದ 4-5 ದಿನಗಳಲ್ಲಿ ಮಾರಾಟ 4 ಪಟ್ಟು ಹೆಚ್ಚಾಗಿದ್ದು, ಒಲೆಗಳ ಪೂರೈಕೆಯೇ ಕಷ್ಟವಾಗಿದೆ. ಅದೇ ರೀತಿ, ಪಿಜನ್ ಮತ್ತು ಗಿಲ್ಮಾದಂತಹ ಬ್ರ್ಯಾಂಡ್‌ಗಳ ಅಡಿಯಲ್ಲಿ ಅಡುಗೆ ಸಲಕರಣೆಗಳನ್ನು ಮಾರಾಟ ಮಾಡುವ ಸ್ಟೊವ್‌ಕ್ರಾಫ್ಟ್ ಲಿ. ತನ್ನ ಆನ್‌ಲೈನ್‌ ಮಾರಾಟದಲ್ಲಿ ಗಮನಾರ್ಹ ಏರಿಕೆಯಾಗಿರುವುದಾಗಿ ತಿಳಿಸಿದೆ.

ಎಲೆಕ್ಟ್ರಾನಿಕ್‌ ಹಾಗೂ ಹೋಂ ಅಪ್ಲೈಯನ್ಸಸ್‌ ಸಲಕರಣೆ ಮಾರಾಟಗಾರ ಕ್ರೋಮಾ, ‘ನಮ್ಮಲ್ಲಿನ ಇಂಡಕ್ಷನ್ ಸ್ಟವ್‌ ಮಾರಾಟ 3 ಪಟ್ಟು ಹೆಚ್ಚಿದೆ’ ಎಂದಿದೆ.

ಇನ್ನು ತಿಂಗಳಿಗೆ 70 ಇಂಡಕ್ಷನ್‌ ಸ್ಟವ್‌ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳಲ್ಲಿ ದಿನವೊಂದಕ್ಕೆ 70 ಸ್ಟವ್‌ಗಳು ಬಿಕರಿಯಾಗಿದ್ದಾಗಿ ಚೆನ್ನೈನ ಅಂಗಡಿಯೊಂದರ ಮಾಲೀಕರು ತಿಳಿಸಿದ್ದಾರೆ. ಕೇವಲ 30 ನಿಮಿಷದಲ್ಲಿ 10 ಒಲೆಗಳನ್ನು ಮಾರಿದ್ದಾಗಿ ಮಾಲೀಕರೊಬ್ಬರು ಹರ್ಷ ವ್ಯಕ್ತಪಡಿಸಿದ್ದಾರೆ.

ದಿಲ್ಲಿಯಲ್ಲಿ ಬೇಡಿಕೆ ಶೇ.80ರಷ್ಟು ಏರಿಕೆ:

ರಾಜಧಾನಿ ದೆಹಲಿಯಲ್ಲಿ ಕಳೆದ ಎರಡು ದಿನಗಳಲ್ಲಿ ವಿದ್ಯುತ್‌ ಒಲೆಗಳು ಮತ್ತು ಇನ್ಫ್ರಾರೆಡ್ ಸ್ಟವ್‌ಗಳ ಮಾರಾಟ ಶೇ.75ರಿಂದ 80ರಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ.