ನವದೆಹಲಿ(ಏ.29): ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೇಸಿಗೆ ರಜೆಯಲ್ಲೂ ಮಕ್ಕಳಿಗೆ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸಚಿವ ರಮೇಶ್‌ ಪೋಖ್ರಿಯಲ್‌ ಮಂಗಳವಾರ ತಿಳಿಸಿದ್ದಾರೆ. 

ಎಲ್ಲಾ ರಾಜ್ಯಗಳ ಶಿಕ್ಷಣ ಸಚಿವರೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದ ರಮೇಶ್‌ ಪೋಖ್ರಿಯಲ್‌, ‘ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೇಸಿಗೆ ರಜೆಯಲ್ಲೂ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸುವ ಉದ್ದೇಶದಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಪಡಿತರವನ್ನು ಒದಗಿಸಲಾಗುತ್ತದೆ. ಇದಕ್ಕಾಗಿ ಸುಮಾರು 1,600 ಕೋಟಿ ರು. ಹೆಚ್ಚುವರಿ ಖರ್ಚಾಗಲಿದೆ. ಲಾಕ್‌ಡೌನ್‌ ಕಾರಣದಿಂದಾಗಿ ಈ ಯೋಜನೆಗೆ ನೀಡುತ್ತಿದ್ದ ಅನುದಾನವನ್ನು ಕೇಂದ್ರ ಸರ್ಕಾರ 7300 ಕೋಟಿಯಿಂದ 8100 ಕೋಟಿಗೆ ಹೆಚ್ಚಿಸಿದೆ’ ಎಂದು ಹೇಳಿದ್ದಾರೆ.

ಕೊರೋನಾ ಕಾಟ: ಟ್ರಾವೆಲ್‌ ಹಿಸ್ಟರಿ ಸಂಗ್ರಹಿಸುವ ಆ್ಯಪ್‌ ರಚಿಸಿದ 10ನೇ ತರಗತಿ ವಿದ್ಯಾರ್ಥಿ..!

ಇದೇ ವೇಳೆ ದಿನದ 24 ಗಂಟೆಗಳು ಮಕ್ಕಳಿಗೆ ಓದಲು ಒತ್ತಡ ಹೇರಬೇಡಿ ಎಂದು ಪೋಷಕರಿಗೆ ಸಚಿವರು ಕಿವಿಮಾತು ಹೇಳಿದರು. ಆದರೆ ಲಾಕ್‌ಡೌನ್ ಮುಗಿದ ಬಳಿಕ ಪರೀಕ್ಷೆಗಳು ನಡೆಯಲಿದ್ದು, ಮಕ್ಕಳು ರೆಡಿಯಿರುವಂತೆ ಮಾನಸಿಕವಾಗಿ ಸಿದ್ದಪಡಿಸಿ ಎಂದಿದ್ದಾರೆ.

ಇದೊಂದು ಕಠಿಣ ಪರಿಸ್ಥಿತಿಯಾಗಿದ್ದು ವಿದ್ಯಾರ್ಥಿಗಳು ಮನೆಯಲ್ಲೇ ಇರಿ. ಆದಷ್ಟು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ. ಸ್ವಚ್ಚತೆಯ ಬಗ್ಗೆ ಗಮನವಿರಲಿ. ಆರೋಗ್ಯ ಸೇತು ಆ್ಯಪ್‌ ಬಳಸಲು ಸಚಿವರು ಮನವಿ ಮಾಡಿಕೊಂಡರು