Asianet Suvarna News Asianet Suvarna News

ಶಾಲೆಗಳ ಬಿಸಿಯೂಟ ಇನ್ನು ಪಿಎಂ ಪೋಷಣ್‌!

* ಬಿಸಿಯೂಟ ಯೋಜನೆಗೆ ಕೇಂದ್ರದಿಂದ ಹೊಸ ರೂಪ

* ಇನ್ನು ಅಂಗನವಾಡಿ ಮಕ್ಕಳಿಗೂ ಬಿಸಿಯೂಟ ಪೂರೈಕೆ

* ಶಾಲೆಗಳ ಬಿಸಿಯೂಟ ಇನ್ನು ಪಿಎಂ ಪೋಷಣ್‌

Mid day meal scheme is now PM Poshan pre primary children will be covered pod
Author
Bangalore, First Published Sep 30, 2021, 10:03 AM IST

ನವದೆಹಲಿ(ಸೆ.30): ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾವಧಿಯಲ್ಲಿ ನೀಡಲಾಗುವ ಮಧ್ಯಾಹ್ನದ ಬಿಸಿಯೂಟ(Mid Day Meal) ಯೋಜನೆಯನ್ನು ಹೊಸ ರೂಪದೊಂದಿಗೆ ಜಾರಿಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಕುರಿತ ಮುಂದಿನ 5 ವರ್ಷಗಳ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ‘ಮಧ್ಯಾಹ್ನದ ಬಿಸಿಯೂಟದ ರಾಷ್ಟ್ರೀಯ ಯೋಜನೆ’ ಎಂದು ಇದುವರೆಗೆ ಕರೆಯಲಾಗುತ್ತಿದ್ದ ಯೋಜನೆಗೆ ಇದೀಗ ಪಿಎಂ ಪೋಷಣ್‌ (Pಋ POಖಏಅN​ POಖಏಅN ಖಏಅಓTಐ Nಐ್ಕಋಅN) ಎಂಬ ಹೊಸ ಹೆಸರು ನೀಡಲಾಗಿದೆ. ಜೊತೆಗೆ ಯೋಜನೆಯನ್ನು ಪೂರ್ವ ಪ್ರಾಥಮಿಕ ಶಾಲೆ ಅಥವಾ ಅಂಗನವಾಡಿಗಳಿಗೂ ವಿಸ್ತರಿಸಲಾಗಿದೆ.

ಹೊಸ ರೂಪದ ಈ ಕಾರ್ಯಕ್ರಮದಲ್ಲಿ, ಯೋಜನೆಗೆ ಸ್ಥಳೀಯ ಸಮುದಾಯ, ರೈತ ಉತ್ಪಾದಕ ಸಂಘ, ಮಹಿಳಾ ಸ್ವಸಹಾಯ ಸಂಘದ ನೆರವು ಪಡೆಯುವ, ಶಾಲೆಗಳಲ್ಲಿ(School) ಪೌಷ್ಟಿಕ ಆಹಾರದ ಕೈತೋಟ ನಿರ್ಮಿಸುವ, ಸಾಂಪ್ರದಾಯಿಕ ಅಡುಗೆ ಪ್ರೋತ್ಸಾಹಿಸುವ, ಶಾಲೆಗಳ ನಡುವೆ ಬಿಸಿಯೂಟದ ಸ್ಪರ್ಧೆ ಏರ್ಪಡಿಸುವ, ಆದ್ಯತಾ ಜಿಲ್ಲೆಗಳಲ್ಲಿ ಮಕ್ಕಳಿಗೆ ಹೆಚ್ಚಿನ ಪೋಷಕಾಂಶ ಇರುವ ಆಹಾರ ವಿತರಣೆ ಮಾಡುವ ಮಹತ್ವದ ಅಂಶಗಳು ಸೇರಿವೆ.

ಅಂಗನವಾಡಿಗೂ ವಿಸ್ತರಣೆ:

ಮಧ್ಯಾಹ್ನದ ಬಿಸಿಯೂಟ(Mid day Meal) ಯೋಜನೆಯನ್ನು ಅಂಗನವಾಡಿಗಳಿಗೂ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ದೇಶಾದ್ಯಂತ ಇರುವ 11.2 ಲಕ್ಷ ಶಾಲೆಗಳ 11.8 ಕೋಟಿ ಮಕ್ಕಳಿಗೆ ಯೋಜನೆಯ ಲಾಭ ಸಿಗಲಿದೆ. 2021-22ರಿಂದ 2025-26ರ ಅವಧಿಗೆ ಈ ಯೋಜನೆಗೆ ಒಟ್ಟು 3.30 ಲಕ್ಷ ಕೋಟಿ ರು.ಗಳನ್ನು ವ್ಯಯಿಸಲಾಗುವುದು. ಈ ಪೈಕಿ ಕೇಂದ್ರ ಸರ್ಕಾರದ ಪಾಲು 3 ಲಕ್ಷ ಕೋಟಿ ರು. ಮತ್ತು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪಾಲು 30000 ಕೋಟಿ ರು. ಇರಲಿದೆ.

ಸಮುದಾಯದ ಊಟ:

ಹಬ್ಬ ಮತ್ತು ವಿಶೇಷ ದಿನಗಳಲ್ಲಿ ಸಮುದಾಯದ ಜನರು ಶಾಲೆಗಳಿಗೆ ವಿಶೇಷ ಊಟವನ್ನು ಪೂರೈಸುವ ಅವಕಾಶವನ್ನು ಯೋಜನೆಯಡಿ ನೀಡಲಾಗಿದೆ. ಈ ಮೂಲಕ ಬಿಸಿಯೂಟದಲ್ಲಿ ಸಮುದಾಯವನ್ನು ಸೇರಿಸಿಕೊಳ್ಳಲಾಗುತ್ತಿದೆ. ಇದಲ್ಲದೆ ರೈತ ಉತ್ಪಾದಕ ಸಂಘಗಳು, ಮಹಿಳಾ ಸ್ವಸಹಾಯ ಸಂಘಗಳ ನೆರವನ್ನೂ ಪಡೆಯಲಾಗುವುದು.

ಶಾಲಾ ಕೈತೋಟ:

ಪರಿಸರದ ಜೊತೆಗೆ ಮಕ್ಕಳನ್ನು ಹೆಚ್ಚಾಗಿ ಬೆಸೆಯುವ, ಕೈತೋಟದ ಅರಿವಿಗಾಗಿ ‘ಶಾಲಾ ಪೋಷಕಾಂಶ ಕೈತೋಟ’ ನಿರ್ಮಿಸಲಾಗುವುದು. ಇಲ್ಲಿ ಬೆಳೆದ ಉತ್ಪನ್ನಗಳನ್ನು ಶಾಲೆಗಳಲ್ಲೇ ಮಕ್ಕಳಿಗೆ ಹೆಚ್ಚಿನ ಪೋಷಕಾಂಶ ನೀಡುವ ನಿಟ್ಟಿನಲ್ಲಿ ಬಳಸಲಾಗುವುದು. ಈಗಾಗಲೇ ದೇಶಾದ್ಯಂತ 3 ಲಕ್ಷಕ್ಕೂ ಹೆಚ್ಚು ಶಾಲೆಗಳಲ್ಲಿ ಇಂಥ ಕೈತೋಟಗಳಿವೆ.

ಹೆಚ್ಚಿನ ಪೋಷಕಾಂಶ:

ಆದ್ಯತಾ ಜಿಲ್ಲೆಗಳು ಮತ್ತು ಅನೀಮಿಯಾದಿಂದ ಬಳಲುತ್ತಿರುವ ಮಕ್ಕಳು ಹೆಚ್ಚಾಗಿರುವ ಶಾಲೆಗಳಲ್ಲಿ, ಹೆಚ್ಚಿನ ಪೌಷ್ಟಿಕಾಂಶ ಇರುವ ಆಹಾರ ಪದಾರ್ಥ ನೀಡಲಾಗುವುದು.

ಸಾಂಪ್ರದಾಯಿಕ ಅಡುಗೆ:

ಬಿಸಿಯೂಟದಲ್ಲಿ ಸ್ಥಳೀಯವಾಗಿಯೇ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ಸಾಂಪ್ರದಾಯಿಕ ಅಡುಗೆಯನ್ನು ಹೆಚ್ಚಾಗಿ ಬಳಸಲು ಉತ್ತೇಜನ ನೀಡಲಾಗುವುದು. ಜೊತೆಗೆ ಶಾಲೆಗಳ ನಡುವೆ ಸ್ಪರ್ಧೆ ಆಯೋಜಿಸಲಾಗುವುದು. ಎಲ್ಲಾ ಜಿಲ್ಲೆಗಳಲ್ಲಿ ಈ ಯೋಜನೆಯ ಸಾಮಾಜಿಕ ಲೆಕ್ಕಪರಿಶೋಧನೆ ಕಡ್ಡಾಯವಾಗಿರಲಿದೆ ಎಂದು ಯೋಜನೆ ಕುರಿತು ಮಾಹಿತಿ ನೀಡಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ತಿಳಿಸಿದ್ದಾರೆ.

ಯೋಜನೆಯಲ್ಲಿ ಹೊಸ ಅಂಶಗಳು

- ‘ಪಿಎಂ ಪೋಷಣ್‌: ಪೋಷಣ್‌ ಶಕ್ತಿ ನಿರ್ಮಾಣ್‌’ ಎಂದು ಹೆಸರು ಬದಲು

- 1ರಿಂದ 8ನೇ ತರಗತಿಗಿದ್ದ ಬಿಸಿಯೂಟ ಅಂಗನವಾಡಿಗೂ ವಿಸ್ತರಣೆ

- ವಿಶೇಷ ದಿನಗಳಲ್ಲಿ ಸಾರ್ವಜನಿಕರಿಂದ ಊಟ ವಿತರಣೆಗೆ ಅವಕಾಶ

- ಎಲ್ಲಾ ಶಾಲೆಗಳಲ್ಲಿ ಪೌಷ್ಟಿಕ ತರಕಾರಿ ಬೆಳೆಯಲು ಕೈತೋಟ ನಿರ್ಮಾಣ

- ಬಿಸಿಯೂಟದಲ್ಲಿ ಸಾಂಪ್ರದಾಯಿಕ ತಿನಿಸು ಹೆಚ್ಚು ಬಳಕೆಗೆ ಉತ್ತೇಜನ

- ಬಿಸಿಯೂಟಕ್ಕೆ ರೈತರು ಹಾಗೂ ಮಹಿಳಾ ಸ್ವಸಹಾಯ ಸಂಘಗಳ ನೆರವು

Follow Us:
Download App:
  • android
  • ios