ಪೌರತ್ವ ಕಾಯ್ದೆಗೆ ಬೇಸರ ವ್ಯಕ್ತಪಡಿಸಿದ ಮೈಕ್ರೋಸಾಫ್ಟ್ ಸಿಇಒ!
ಬಾಂಗ್ಲಾ ವಲಸಿಗ ಮುಂದಿನ ಇನ್ಫಿ ಸಿಇಒ ಆಗಲಿ!| ಸಿಎಎ, ಎನ್‌ಆರ್‌ಸಿ ವಿರೋಧಿಸಿ ಮೈಕ್ರೋಸಾಫ್ಟ್ ಸಿಇಒ ಹೇಳಿಕೆ| ಸತ್ಯಾ ಹೇಳಿಕೆಗೆ ಟ್ವೀಟರ್‌ನಲ್ಲಿ ತಿರುಗೇಟು
ನವದೆಹಲಿ[ಜ.14]: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ತೀವ್ರ ವಿವಾದಕ್ಕೆ ಕಾರಣವಾಗಿರುವ ಹೊತ್ತಿನಲ್ಲೇ, ಭಾರತೀಯ ಮೂಲದ ಮೈಕ್ರೋಸಾಫ್ಟ್ ಸಿಇಒ ಸತ್ಯಾ ನಾದೆಳ್ಲಾ ಕಾಯ್ದೆ ವಿರೋಧಿಸುವ ಮೂಲಕ ತಾವೂ ಕೂಡಾ ವಿವಾದಕ್ಕೆ ಧುಮುಕಿದ್ದಾರೆ.
ಸಂದರ್ಶನವೊಂದರಲ್ಲಿ ಸತ್ಯಾ ಅವರನ್ನು ಈ ಕಾಯ್ದೆ ಬಗ್ಗೆ ಕೇಳಿದಾಗ, ‘ಭಾರತದಲ್ಲಿ ಈಗ ಏನಾಗುತ್ತಿದೆಯೋ ಅದು ತುಂಬಾ ನೋವಿನ ವಿಚಾರ. ಬಾಂಗ್ಲಾದೇಶಿ ವಲಸಿಗನೊಬ್ಬ ಭಾರತಕ್ಕೆ ಬಂದು ಭಾರತದಲ್ಲಿ ಹೊಸ ಕಂಪನಿ ಕಟ್ಟುವುದನ್ನು ಅಥವಾ ಇನ್ಫೋಸಿಸ್‌ನ ಮುಂದಿನ ಸಿಇಒ ಆಗುವುದನ್ನು ನಾನು ನೋಡ ಬಯಸುತ್ತೇನೆ ಎಂದು ಹೇಳಿದ್ದಾರೆ.
ಆದರೆ ಅವರ ಈ ಹೇಳಿಕೆಗೆ ಟ್ವೀಟರ್‌ನಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಈಗಲೂ ಬಾಂಗ್ಲಾದೇಶಿಯನೊಬ್ಬ ಸಕ್ರಮ ಮಾರ್ಗದ ಮೂಲಕ ಭಾರತಕ್ಕೆ ಬಂದು ಭಾರತೀಯ ಪೌರತ್ವ ಪಡೆದುಕೊಳ್ಳಬಹುದು. ಅಷ್ಟೇ ಏಕೆ ಅತಿ ಹೆಚ್ಚು ಭಾರತೀಯ ಪೌರತ್ವ ಪಡೆಯುತ್ತಿರು ವವರಲ್ಲಿ ಬಾಂಗ್ಲಾದೇಶಿಯರೇ ಮುಂಚೂಣಿಯಲ್ಲಿದ್ದಾರೆ ಎಂದು ನಿಮಗೆ ಗೊತ್ತಿಲ್ಲವೇ. ಮೊದಲು ಕಾಯ್ದೆಯನ್ನು ಸರಿಯಾಗಿ ಓದಿ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ ಎಂದು ಹಲವರು ತಿರುಗೇಟು ನೀಡಿದ್ದಾರೆ.