ತಿರುವನಂತಪುರಂ(ಫೆ.18): ಕೇರಳ ಚುನಾವಣೆಗೂ ಮುನ್ನ ಭಾರತದ ರೈಲ್ವೆ ಮತ್ತು ಮೆಟ್ರೋ ಕ್ಷೇತ್ರದಲ್ಲಿ ಮೈಲುಗಲ್ಲು ಸ್ಥಾಪಿಸಿ ಮೆಟ್ರೋ ಮ್ಯಾನ್ ಎಂದೇ ಖ್ಯಾತಿ ಗಳಿಸಿರುವ ಇ.ಶ್ರೀಧರನ್ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ನೇತೃತ್ವದಲ್ಲಿ ಫೆಬ್ರವರಿ 21ರಂದು ನಡೆಯಲಿರುವ ವಿಜಯ್ ಯಾತ್ರೆ ವೇಳೆ ಇ.ಶ್ರೀಧರನ್ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ.

88 ವರ್ಷದ ಇ. ಶ್ರೀಧರನ್ ಅವರು ಮೇ ತಿಂಗಳಿನಲ್ಲಿ ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆಂದು ವರದಿಗಳು ಉಲ್ಲೇಖಿಸಿವೆ.  ಚುನಾವಣಾ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ವಿಜಯ್ ಯಾತ್ರೆ ಕಾಸರಗೋಡಿನಿಂದ ಆರಂಭಗೊಳ್ಳಲಿದ್ದು, ಮಾರ್ಚ್ ಮೊದಲ ವಾರದಲ್ಲಿ ತಿರುವನಂತಪುರದಲ್ಲಿ ಕೊನೆಗೊಳ್ಳಲಿದೆ.

ಉಚಿತ ಮೆಟ್ರೋ ಪ್ರಯಾಣ ಬೇಡ: ಕೇಜ್ರಿವಾಲ್‌ ಪ್ರಸ್ತಾಪಕ್ಕೆ ’ಮೆಟ್ರೋ ಮ್ಯಾನ್‌’ ವಿರೋಧ

ಭಾರತದ ಮೆಟ್ರೋ ಮ್ಯಾನ್ ಎಂದೇ ಖ್ಯಾತಿ ಗಳಿಸಿರುವ  ಇ.ಶ್ರೀಧರನ್ 2011ರಲ್ಲಿ ದೆಹಲಿ ಮೆಟ್ರೋ ರೈಲು ಮುಖ್ಯಸ್ಥರಾಗಿ ನಿವೃತ್ತರಾಗುವ ಮುನ್ನ ದೆಹಲಿ ಸೇರಿದಂತೆ ಜೈಪುರ, ಲಕ್ನೋ ಹಾಗೂ ಕೊಚ್ಚಿಯಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದ್ದರು.

ಶ್ರೀಧರನ್ ಅವರಿಗೆ ಭಾರತ ಸರ್ಕಾರದಿಂದ 2001ರಲ್ಲಿ ಪದ್ಮಶ್ರೀ, 2008ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.