ಗುವಾಹಟಿ(ಡಿ.01): ಲವ್ ಜಿಹಾದ್‌ಗೆ ಪೂರ್ಣ ವಿರಾಮ ಹಾಕುವ ಸಲುವಾಗಿ ಅನೇಕ ರಾಜ್ಯಗಳು ಕಾನೂನು ಜಾರಿಗೊಳಿಸಲು ಸಜ್ಜಾಗಿವೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಈಗಾಗಲೇ ಇಂತಹುದ್ದೊಂದು ಕಾನೂನು ಜಾರಿಗೊಳಿಸಿದ್ದಾರೆ. ಹೀಗಿರುವಾಗಲೇ ಅಸ್ಸಾಂನ ಸಚಿವ ಹಿಮಂತ ಬಿಸ್ವಾ ಶರ್ಮಾ ನೀಡಿರುವ ಹೇಳಿಕೆಯೊಂದು ಭಾರೀ ಸದ್ದು ಮಾಡಿದೆ. ವ್ಯಕ್ತಿಯೊಬ್ಬ ಮದುವೆಗೂ ಮುನ್ನ ತನ್ನ ಜಾತಿ, ಧರ್ಮ, ಆದಾಯ ಹಾಗೂ ತಾನು ಮಾಡುವ ಉದ್ಯೋಗ ಏನೆಂಬುವುದನ್ನು ತಾವು ಮದುವೆಯಾಗುವ ಸಂಗಾತಿಗೆ ತಿಳಿಸಬೇಕೆಂದಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳೂ ಕಾನೂನು ಜಾರಿಗೊಳಿಸಬೇಕೆಂದಿದ್ದಾರೆ. ಈ ಕಾನೂನು ಎಲ್ಲಾ ಮದುವೆಗಳಿಗೂ ಅನ್ವಯಿಸಬೇಕು. ಮಹಿಳಾ ಸಬಲೀಕರಣದಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದಿದ್ದಾರೆ. 

ಮಾಧ್ಯಮಗಳಿಗೆ ಈ ಸಂಬಂಧ ಹೇಳಿಕೆ ನೀಡುತ್ತಾ ಮದುವೆಗೂ ಮುನ್ನ ಯುವಕ ಯುವತಿ ನಡುವೆ ಪಾರದರ್ಶಕತೆ ಇರದೆ ಮದುವೆಯಾಗಬಾರದು. ಉದ್ಯೋಗ, ಧರ್ಮ, ಆದಾಯ ಇವೆಲ್ಲವನ್ನೂ ತಿಳಿದುಕೊಳ್ಳುವುದು ಬಹಳ ಮುಖ್ಯ. ಧರ್ಮವನ್ನು ಮಾತ್ರವಲ್ಲ, ಉದ್ಯೋಗ ಹಾಗೂ ಆದಾಯ ಎಷ್ಟು ಎಂಬುವುದನ್ನೂ ಬಹಿರಂಗಪಡಿಸಬೇಕೆಂದಿದ್ದಾರೆ.

ರಾಜ್ಯ ಸರ್ಕಾರಗಳು ಲವ್‌ ಜಿಹಾದ್ ಬಗ್ಗೆ ಮಾತ್ರ ಮಾತನಾಡುವುದಲ್ಲ, ಬದಲಾಗಿ ಇಂತಹುದನ್ನು ಎಲ್ಲಾ ಧರ್ಮಗಳಿಗೆ ಕಡ್ಡಾಯಗೊಳಿಸಬೇಕೆಂದಿದ್ದಾರೆ. ದಂಪತಿ ನಡುವೆ ಮುಚ್ಚುಮರೆ ಇರಬಾರದು ಎಂದಿದ್ದಾರೆ. ಈ ನಿಟ್ಟಿನಲ್ಲಿ ಇಂತಹುದ್ದೊಂದು ಕಾನೂನು ಜಾಋಇಗೊಳಿಸಲು ಅಸ್ಸಾಂ ಸರ್ಕಾರ ತಯಾರಿ ಆರಂಭಿಸಿದೆ ಎಂದೂ ಹೇಳಿದ್ದಾರೆ.