* ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೇ ಶೇ.95 ಲಾಭ* ವಿರೋಧ ವ್ಯಕ್ತಪಡಿಸುವ ಬದಲು ಯೋಜನಾ ವೆಚ್ಚದಲ್ಲಿ 50% ಭರಿಸಲಿ* ಕರ್ನಾಟಕಕ್ಕೆ ಅಗತ್ಯ ಇದ್ದರೆ ಮತ್ತೊಂದು ಡ್ಯಾಂ ಕಟ್ಟಿಕೊಳ್ಳಲಿ ಎಂದು ತ.ನಾಡೇ ಹೇಳಿದೆ* ಚರ್ಚಾಗೋಷ್ಠೀಯಲ್ಲಿ  ಹೊರಬಂದ ಅಭಿಪ್ರಾಯ

ಬೆಂಗಳೂರು (ಏ. 13) ಮೇಕೆದಾಟು (Mekedatu) ಜಲಾಶಯ ಯೋಜನೆಯಿಂದ ಶೇ. 95ರಷ್ಟುಲಾಭ ತಮಿಳುನಾಡಿಗೇ (Tamilnadu) ಆಗುವುದರಿಂದ ಕಾರಣವಿಲ್ಲದೆ ವಿರೋಧ ವ್ಯಕ್ತಪಡಿಸುವ ಬದಲು ಯೋಜನಾ ವೆಚ್ಚದಲ್ಲಿ ಶೇ. 50ರಷ್ಟನ್ನು ಭರಿಸಲು ಅಲ್ಲಿನ ಸರ್ಕಾರ ಮುಂದಾಗಬೇಕು ಎಂದು ದಿ ಇನ್‌ಸ್ಟಿಟ್ಯೂಷನ್‌ ಆಫ್‌ ಎಂಜಿನಿಯ​ರ್‍ಸ್ (ಇಂಡಿಯಾ) ಅಧ್ಯಕ್ಷ ಎಂ. ಲಕ್ಷ್ಮಣ ಹೇಳಿದರು.

ನಗರದಲ್ಲಿ(Bengaluru) ಮಂಗಳವಾರ ಸಂಸ್ಥೆ ಹಮ್ಮಿಕೊಂಡಿದ್ದ ‘ಮೇಕೆದಾಟು ಜಲಾಶಯ ನಿರ್ಮಾಣ; ಇಂದಿನ ಸ್ಥಿತಿಗತಿ’ ಕುರಿತ ಚರ್ಚಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಜಲಾಶಯ ನಿರ್ಮಿಸಲು ಗುರುತಿಸಿರುವ ಸ್ಥಳದಿಂದ ಐದು ಕಿ.ಮೀ. ದೂರದಲ್ಲಿ ತಮಿಳುನಾಡು ಸರಹದ್ದು ಪ್ರಾರಂಭವಾಗುತ್ತದೆ. ಅದೂ ಸಾವಿರಾರು ಅಡಿ ಕೆಳಭಾಗದಲ್ಲಿ ಇದೆ. ಈ ಯೋಜನೆ ಅಡಿ ಜಲ ವಿದ್ಯುತ್‌ ಉತ್ಪಾದನೆಗೆ ಬಳಕೆಯಾಗುವ ನೀರು ನೇರವಾಗಿ ತಮಿಳುನಾಡಿಗೆ ಹರಿದುಹೋಗುತ್ತದೆ. ಆ ಭಾಗದ ರೈತರಿಗೆ ಇದರಿಂದ ಅನುಕೂಲವಾಗಲಿದೆ ಎಂದರು.

ಮೇಕೆದಾಟು ಯೋಜನೆಯನ್ನು ತಮಿಳುನಾಡು ವಿರೋಧಿಸಲು ಅವಕಾಶವೇ ಇಲ್ಲ. ಈ ಹಿಂದೆ ತಮಿಳುನಾಡು ಪರ ವಕೀಲರು ಕಾವೇರಿ ವಿವಾದಕ್ಕೆ ಸಂಬಂಧಿಸಿದ ವ್ಯಾಜ್ಯವೊಂದರಲ್ಲಿ ಸುಪ್ರೀಂ ಕೋರ್ಚ್‌ನಲ್ಲಿ ವಾದ ಮಂಡಿಸುವಾಗ ಕರ್ನಾಟಕಕ್ಕೆ ಅಗತ್ಯವಿದ್ದಲ್ಲಿ ಮತ್ತೊಂದು ಜಲಾಶಯ ನಿರ್ಮಿಸಿಕೊಳ್ಳಲಿ. ನಮಗೆ(ತಮಿಳುನಾಡಿಗೆ) ಹಂಚಿಕೆಯಾದ ನೀರನ್ನು ನಿಯಮಿತವಾಗಿ ನೀಡಲಿ ಎಂದು ತಿಳಿಸಿದ್ದರು.

ಅಲ್ಲದೆ, ನಮ್ಮ ರಾಜ್ಯದಲ್ಲಿ ಜಲಾಶಯ ನಿರ್ಮಿಸಿಕೊಳ್ಳಲು ಯಾವುದೇ ನ್ಯಾಯಾಲಯ ತಡೆ ನೀಡಿಲ್ಲ. ಇನ್ನು ಪರಿಸರ ಸಚಿವಾಲಯಕ್ಕೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದ 90 ದಿನಗಳ ನಂತರ ಯಾವುದೇ ಪ್ರತಿಕ್ರಿಯೆ ಬಾರದಿದ್ದದ್ದಲ್ಲಿ ಅನುಮತಿ ಲಭ್ಯವಾದಂತೆ ಎಂದರು.

ಯೋಜನೆಗೆ ಮೂರು ಹಳ್ಳಿಗಳು ಮತ್ತು 250 ಎಕರೆ ರೈತರ ಭೂಮಿ ಮುಳುಗಡೆ ಆಗಲಿದೆ. 150 ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆಗೆ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ರಾಜ್ಯ ಸರ್ಕಾರ ಕೂಡಲೇ ಸಮಗ್ರ ಯೋಜನಾ ವರದಿಗೆ (ಡಿಪಿಆರ್‌) ಅನುಮತಿ ನೀಡುವಂತೆ ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ಹೇಳಿದರು.

ಮೇಕೆದಾಟು ಅಣೆಕಟ್ಟು ಯೋಜನೆ ವಿರುದ್ಧ ಮೋದಿಗೆ ತಮಿಳುನಾಡು ಸಿಎಂ ದೂರು

ಮೇಕೆದಾಟು ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 67 ಟಿಎಂಸಿಯಾಗಿದ್ದು, ಬೆಂಗಳೂರಿಗೆ ಇದರಿಂದ ನೆರವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ವಾಸ್ತವವಾಗಿ ಈ ಯೋಜನೆಯಿಂದ ಹತ್ತು ಜಿಲ್ಲೆಗಳಿಗೆ ಅನುಕೂಲ ಆಗಲಿದ್ದು, 130 ಟಿಎಂಸಿಯಷ್ಟುನೀರು ರಾಜ್ಯಕ್ಕೆ ದೊರೆಯಲಿದೆ. ಇನ್ನುಳಿದ ಕೆಆರ್‌ಎಸ್‌, ಹಾರಂಗಿ, ಹೇಮಾವತಿ, ಕಬಿನಿ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುವ ಬದಲಿಗೆ, ಮೇಕೆದಾಟುವಿನಿಂದ ನೀಡಬಹುದು. ಇದರಿಂದ ಎಲ್ಲ ಜಲಾಶಯಗಳ ಮೇಲಿನ ಒತ್ತಡ ಕಡಿಮೆ ಆಗಲಿದ್ದು, ರೈತರಿಗೂ ನೆರವಾಗಲಿದೆ ಎಂದು ವಿವರಿಸಿದರು. ಪರಿಸರ ಎಂಜಿನಿಯರಿಂಗ್‌ ತಜ್ಞ ಡಾ.ಶಶಿಧರ್‌ ಗಂಜಿಗಟ್ಟಿ, ಸಂಸ್ಥೆಯ ಗೌರವ ಕಾರ್ಯದರ್ಶಿ ಎಂಟಿ ರಂಗಾರೆಡ್ಡಿ ಉಪಸ್ಥಿತರಿದ್ದರು.

1924ರಲ್ಲೇ ಪ್ರಸ್ತಾಪ: ಮೇಕೆದಾಟು ಯೋಜನೆ ಇತ್ತೀಚೆಗೆ ಚರ್ಚೆಗೆ ಬಂದಿಲ್ಲ. 1924ರಲ್ಲಿ ಮದ್ರಾಸ್‌ ಪ್ರೆಸಿಡೆನ್ಸಿಯಲ್ಲಿ ಚರ್ಚೆ ನಡೆಸಲಾಗಿತ್ತು. ಅಲ್ಲದೆ, 1967, 1974ರಲ್ಲಿ ರಾಜ್ಯ ಸರ್ಕಾರಗಳು ಸಭೆಗಳನ್ನು ನಡೆಸಿದ್ದವು. ಈ ಯೋಜನೆಗಾಗಿ ಈವರೆಗೂ 62 ಬಾರಿ ಸಭೆಗಳನ್ನು ನಡೆಸಿವೆ. ರಾಜಕೀಯ ಇಚ್ಛಾಶಕ್ತಿ ಕೊರತೆ ಮತ್ತು ಉದಾಸೀನದಿಂದ ಜಾರಿಯಾಗುತ್ತಿಲ್ಲ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಎಂ. ಲಕ್ಷ್ಮಣ್‌ ಹೇಳಿದರು.