ನವದೆಹಲಿ(ಮೇ.10): ಕೋವಿಡ್‌ ಸೋಂಕಿತರ ಕಂಡರೆ ಭಯಗೊಂಡು ದೂರ ಓಡಿಹೋಗುವ ಸಂದರ್ಭಗಳ ನಡುವೆಯೇ, ಜಿತೇಂದ್ರ ಸಿಂಗ್‌ ಶಂಟಿ ಎಂಬುವರು ಈವರೆಗೆ ಕೋವಿಡ್‌ಗೆ ಬಲಿಯಾದ 2,000ಕ್ಕೂ ಹೆಚ್ಚು ಮಂದಿಯ ಶವಸಂಸ್ಕಾರ ನೆರವೇರಿಸುವ ಮಹತ್ಕಾರ್ಯ ಮಾಡಿದ್ದಾರೆ.

ದೆಹಲಿ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿರುವ ಜಿತೇಂದ್ರ ಸಿಂಗ್‌ ಅವರು ತಮ್ಮ ಸಾಮಾಜಿಕ ಕಾರ್ಯಗಳಿಗಾಗಿ ‘ಶಾಹೀದ್‌ ಭಗತ್‌ ಸಿಂಗ್‌ ಸೇವಾದಳ’ ಎಂಬ ಸಂಘಟನೆಯನ್ನು ಸ್ಥಾಪಿಸಿಕೊಂಡಿದ್ದು, ಇದರ ಮೂಲಕ ಕಳೆದೆರಡು ದಶಕಗಳಿಂದ ಅನಾಥರು ಮತ್ತು ನಿರ್ಗತಿಕರ ಶವಗಳನ್ನು ಸಂಸ್ಕಾರ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಕಳೆದ ವರ್ಷವಷ್ಟೇ ಅವರಿಗೆ ಪದ್ಮಶ್ರೀ ಪುರಸ್ಕಾರವೂ ಅರಸಿಬಂದಿದೆ.

ಆದರೆ ಕೋವಿಡ್‌ ಶಕೆ ಆರಂಭವಾದ ಬಳಿಕ ಕೊರೋನಾಕ್ಕೆ ಸಾವಿಗೀಡಾಗುವವರನ್ನು ಕಂಡು ಹಲವು ಬಾರಿ ಮೈಯಲ್ಲಿ ನಡುಕ ಹುಟ್ಟಿದೆ ಎನ್ನುತ್ತಾರೆ ಜಿತೇಂದ್ರ ಸಿಂಗ್‌. ಸದಾ ಕಾಲ ಪಿಪಿಇ ಕಿಟ್‌, ಸುರಕ್ಷತಾ ಕಿಟ್‌ಗಳು, ಸ್ಯಾನಿಟೈಜರ್‌ಗಳನ್ನು ಇಟ್ಟುಕೊಳ್ಳುವ ಹೊರತಾಗಿಯೂ, ಅವರು ಕುಟುಂಬಸ್ಥರಿಗೆ ಸೋಂಕು ಹಬ್ಬುವ ಸಾಧ್ಯತೆ ಇದ್ದೇ ಇದೆ. ಹೀಗಾಗಿ ಜಿತೇಂದ್ರ ಅವರು ತಮ್ಮ ತಂಡದೊಂದಿಗೆ ತಮ್ಮ ಆ್ಯಂಬುಲೆನ್ಸ್‌ ನಿಲ್ಲಿಸುವ ಜಾಗದಲ್ಲೇ ರಾತ್ರಿ ಕಳೆಯುತ್ತಾರಂತೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona