ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಟೀಕಿಸಿದ್ದ ಸ್ಟಾಲಿನ್‌ಗೆ ಅಮಿತ್‌ ಶಾ ಸವಾಲು ಹಾಕಿದ್ದಾರೆ. ತಮಿಳುನಾಡಿನಲ್ಲಿ ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಶಿಕ್ಷಣವನ್ನು ತಮಿಳಿನಲ್ಲೇ ನೀಡುವಂತೆ ಸಲಹೆ ನೀಡಿದ್ದಾರೆ. ಇದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ರಾಣಿಪೇಟೆ: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಿಂದಿ ಹೇರಿಕೆ ಎಂದು ಟೀಕಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ಗೆ ಸವಾಲು ಎಸೆದಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಾಜ್ಯದಲ್ಲಿ ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಶಿಕ್ಷಣವನ್ನು ತಮಿಳಿನಲ್ಲೇ ನೀಡುವಂತೆ ಸಲಹೆ ನೀಡಿದ್ದಾರೆ.

ಚೆನ್ನೈ ಸಮೀಪದ ಥಕ್ಕೊಲಂ ಜಿಲ್ಲೆಯಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ 56ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆ ಆಕಾಂಕ್ಷಿಗಳು ಸ್ಥಳೀಯ ಭಾಷೆಯಲ್ಲೂ ಪರೀಕ್ಷೆ ಬರೆಯಲು ಅ‍ವಕಾಶ ಮಾಡಿಕೊಟ್ಟಿದೆ. ಈ ಮೂಲಕ ತಮಿಳುನಾಡಿನ ಆಕಾಂಕ್ಷಿಗಳು ತಮಿಳಿನಲ್ಲೂ ಪರೀಕ್ಷೆ ಬರೆಯಬಹುದಾಗಿದೆ ಎಂದರು.

ಅದೇ ರೀತಿ ತಮಿಳುನಾಡಿನಲ್ಲಿ ಎಂಜಿನಿಯರಿಂಗ್‌ ಹಾಗೂ ಮೆಡಿಕಲ್‌ ಶಿಕ್ಷಣವನ್ನು ತಮಿಳಿನಲ್ಲೇ ನೀಡಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸ್ಟಾಲಿನ್‌ ಅವರಿಗೆ ಮನವಿ ಮಾಡುತ್ತೇನೆ ಎಂದ ಅ‍ವರು, ಇದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಎಂದರು.

ಇದೇ ವೇಳೆ ತಮಿಳುನಾಡು ಸಂಸ್ಕೃತಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ದಕ್ಷಿಣ ಭಾರತದ ಈ ರಾಜ್ಯವು ಭಾರತದ ಸಾಂಸ್ಕೃತಿಕ ಹರಿವನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರವಹಿಸಿದೆ. ಆಡಳಿತಾತ್ಮಕ ಸುಧಾರಣೆ, ಆಧ್ಯಾತ್ಮಿಕ ಸಾಧನೆ, ಶಿಕ್ಷಣ ಅಥವಾ ದೇಶದ ಏಕತೆ ಮತ್ತು ಸಮಗ್ರತೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತಮಿಳುನಾಡಿನಿಂದಾಗಿ ಭಾರತೀಯ ಸಂಸ್ಕೃತಿ ಸೇರ್ಪಡೆಯಾಗಿದೆ. ತಮಿಳು ಸಂಸ್ಕೃತಿ, ಸಂಪ್ರದಾಯಗಳು ಭಾರತದ ಪರಂಪರೆಯ ಬೆಲೆಕಟ್ಟಲಾಗದ ಮುಕುಟಮಣಿ. ಇಡೀ ಭಾರತ ಅದನ್ನು ಗೌರವದಿಂದ ಅನುಸರಿಸುತ್ತಿದೆ ಎಂದರು.

ಇದನ್ನೂ ಓದಿ: ಕೇಂದ್ರ ಸರ್ಕಾರದ ಕ್ಷೇತ್ರ ಮರುವಿಂಗಡಣೆಗೆ ವಿರೋಧ: ಹೋರಾಟಕ್ಕೆ ಸಿದ್ದರಾಮಯ್ಯ ಬೆಂಬಲ ಕೋರಿದ ಸ್ಟಾಲಿನ್‌!