ಮುಂಬೈನಲ್ಲಿ ಭೀಕರ ಬೆಂಕಿ ದುರಂತ ಕನಿಷ್ಠ 7 ಮಂದಿ ಸಾವು, 51ಕ್ಕೂ ಹೆಚ್ಚು ಮಂದಿಗೆ ಗಾಯ
ಮುಂಬೈನ ಗೋರೆಗಾಂವ್ ವೆಸ್ಟ್‌ನಲ್ಲಿರುವ ಏಳು ಅಂತಸ್ತಿನ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 7 ಜನರು ಸಾವನ್ನಪ್ಪಿ ಸುಮಾರು 51 ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಮುಂಬೈ (ಅ.6): ಶುಕ್ರವಾರ ಮುಂಜಾನೆ ಮುಂಬೈನ ಗೋರೆಗಾಂವ್ ವೆಸ್ಟ್‌ನಲ್ಲಿರುವ ಏಳು ಅಂತಸ್ತಿನ ವಸತಿ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 7 ಜನರು ಸಾವನ್ನಪ್ಪಿದ್ದು, ಐವರ ಸ್ಥಿತಿ ಗಂಭೀರವಾಗಿದೆ. ಸುಮಾರು 51 ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಗಾಯಾಳುಗಳನ್ನು ಕೂಪರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಶುಕ್ರವಾರ ಮುಂಜಾನೆ 3.05 ಗಂಟೆಗೆ ಗೋರೆಗಾಂವ್ ಪಶ್ಚಿಮದ ಆಜಾದ್ ಮೈದಾನದ ಬಳಿ ಇರುವ ಜೈ ಭವಾನಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೂರು ಗಂಟೆಗಳ ಸತತ ಕಾರ್ಯಾಚರಣೆ ನಂತರ ಬೆಳಿಗ್ಗೆ 6.45 ಕ್ಕೆ ಬೆಂಕಿಯನ್ನು ನಂದಿಸಲಾಗಿದೆ.
ಗಾಯಗೊಂಡ ಸ್ವಲ್ಪ ಮಂದಿಯನ್ನು ಹಿಂದೂಹೃದಯಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ವೈದ್ಯಕೀಯ ಕಾಲೇಜು (ಎಚ್‌ಬಿಟಿ) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನುಳಿದ ಸ್ವಲ್ಪ ಮಂದಿಯನ್ನು ಕೂಪರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಕಿ ಕೆನ್ನಾಲಿಗೆ ಅಂಗಡಿಗಳು, ಸ್ಕ್ರ್ಯಾಪ್ ವಸ್ತುಗಳು ಮತ್ತು ಹಲವಾರು ನಿಲುಗಡೆ ವಾಹನಗಳಿಗೆ ಹರಡಿತು. ಟೆರೇಸ್ ಸೇರಿದಂತೆ ವಿವಿಧ ಮಹಡಿಗಳಲ್ಲಿ ಜನರು ಪರದಾಡುವಂತಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟವರಲ್ಲಿ ಇಬ್ಬರು ಅಪ್ರಾಪ್ತರು, ಮೂವರು ಮಹಿಳೆಯರು ಎಂದು ತಿಳಿದುಬಂದಿದೆ.
ಘಟನೆ ಬಗ್ಗೆ ಮಾತನಾಡಿದ ಮುಖ್ಯ ಅಗ್ನಿಶಾಮಕ ಅಧಿಕಾರಿ ರವೀಂದ್ರ ಅಂಬಲ್ಗೇಕರ್ ಅವರು 2006ರಲ್ಲಿ ಕೊಳೆಗೇರಿ ಪುನರ್ವಸತಿ ಯೋಜನೆಯಡಿ ಈ ಕಟ್ಟಡ ನಿರ್ಮಿಸಲಾಗಿದ್ದು, ಅಗ್ನಿಶಾಮಕ ವ್ಯವಸ್ಥೆ ಇಲ್ಲ. ಲಿಫ್ಟ್ ಹಳೆಯದಾಗಿತ್ತು. ಹೀಗಾಗಿ ಗಮನಾರ್ಹ ಪ್ರಮಾಣದ ಹೊಗೆಯು ಲಿಫ್ಟ್ ನಾಳದ ಮೂಲಕ ಇಡೀ ಕಟ್ಟಡವನ್ನು ಆವರಿಸಿತ್ತು ಎಂದು ತಿಳಿಸಿದ್ದಾರೆ.
ಎಂಟು ಅಗ್ನಿಶಾಮಕ ವಾಹನಗಳು, ಐದು ಜಂಬೋ ವಾಟರ್ ಟ್ಯಾಂಕರ್‌ಗಳು, ಮೂರು ಸ್ವಯಂಚಾಲಿತ ಟರ್ನ್ ಟೇಬಲ್‌ಗಳು, ಒಂದು ಟರ್ನ್ ಟೇಬಲ್ ಲ್ಯಾಡರ್, ತ್ವರಿತ ಪ್ರತಿಕ್ರಿಯೆ ವಾಹನ ಮತ್ತು ಆಂಬ್ಯುಲೆನ್ಸ್ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಟ್ವಿಟರ್‌ನಲ್ಲಿ, “ಮುಂಬೈನ ಗೋರೆಗಾಂವ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಜೀವಹಾನಿಯ ಬಗ್ಗೆ ತಿಳಿದು ನೋವಾಗಿದೆ. ನಾವು BMC ಮತ್ತು ಮುಂಬೈ ಪೊಲೀಸ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಎಲ್ಲಾ ಸಹಾಯವನ್ನು ಒದಗಿಸಲಾಗುತ್ತಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.