ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ದಿನ ಮದ್ಯ ಮಾರಾಟ ನಿಷೇಧ ಘೋಷಿಸಿದ ರಾಜ್ಯಗಳು!
ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸನಿಹವಾಗುತ್ತಿರುವಂತೆ ಕೆಲವು ರಾಜ್ಯಗಳು ಜನವರಿ 22 ರಂದು ಡ್ರೈ ಡೇ ಘೋಷಣೆ ಮಾಡಿದೆ. ಇನ್ನೊಂದೆಡೆ ಉತ್ತರ ಪ್ರದೇಶ ರಾಜ್ಯದಲ್ಲಿ ಜನವರಿ 22 ರಂದು ಸಾರ್ವಜನಿಕ ರಜಾ ದಿನವನ್ನಾಗಿ ಘೋಷಿಸಲಾಗಿದೆ.
ನವದೆಹಲಿ (ಜ.12): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯ ರಾಮಜನ್ಮಭೂಮಿ ದೇಗುಲದ 'ಪ್ರಾಣ ಪ್ರತಿಷ್ಠಾ' (ಪ್ರತಿಷ್ಠಾಪನೆ) ಸಮಾರಂಭದ ಹಿನ್ನೆಲೆಯಲ್ಲಿ ಜನವರಿ 22 ರಂದು ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ಆ ದಿನದಂದು ರಜೆ ಘೋಷಣೆ ಮಾಡಿದ್ದಾರೆ. ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡುವುದರ ಜೊತೆಗೆ ಜನವರಿ 22 ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಇರೋದಿಲ್ಲ ಎಂದು ಸಿಎಂ ಯೋಗಿ ಹೇಳಿದ್ದಾರೆ. ಭಾರತೀಯ ಜನತಾ ಪಕ್ಷದ ನೇತೃತ್ವದ ಅಸ್ಸಾಂ ಮತ್ತು ಛತ್ತೀಸ್‌ಗಢದ ರಾಜ್ಯ ಸರ್ಕಾರಗಳು ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆ ನಡೆಯುವುದರಿಂದ ಅದನ್ನು ಡ್ರೈ ಡೇ ಎಂದು ಘೋಷಣೆ ಮಾಡಲು ನಿರ್ಧಾರ ಮಾಡಿದೆ. ಜನವರಿ 9ರಂದೇ ಉತ್ತರ ಪ್ರದೇಶದಲ್ಲಿ ಈ ಕುರಿತಾದ ಆದೇಶಗಳು ಜಾರಿಯಾಗಿವೆ. ಪ್ರಾಣ ಪ್ರತಿಷ್ಠಾಪನೆ ನಡೆಯುವ ದಿನ ರಾಜ್ಯ ಎಲ್ಲೂ ಮದ್ಯ ಮಾರಾಟ ಇರೋದಿಲ್ಲ ಸಿಎಂ ತಿಳಿಸಿದ್ದಾರೆ. ಆ ದಿನವನ್ನು ಇಡೀ ರಾಜ್ಯ ರಾಷ್ಟ್ರೀಯ ಹಬ್ಬ ಎನ್ನುವಂತೆ ಸಂಭ್ರಮಿಸುವುದಾಗಿ ತಿಳಿಸಿದೆ. ಇನ್ನು ರಾಜ್ಯದ ಯಾವುದೇ ಶೈಕ್ಷಣಿಕ ಸಂಸ್ಥೆಗಳು ಆ ದಿನ ಕಾರ್ಯ ನಿರ್ವಹಿಸೋದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
"ರಾಮ ಮಂದಿರದ ಉದ್ಘಾಟನೆಯ ನೆನಪಿನಲ್ಲಿ ಅಸ್ಸಾಂ ಸರ್ಕಾರವು ಜನವರಿ 22 ಅನ್ನು ಮದ್ಯ ಮಾರಾಟ ನಿಷೇಧ ದಿನವನ್ನಾಗಿ ಘೋಷಿಸಲು ನಿರ್ಧರಿಸಿದೆ" ಎಂದು ಅಸ್ಸಾಂ ಪ್ರವಾಸೋದ್ಯಮ ಸಚಿವ ಜಯಂತ್ ಮಲ್ಲಾ ಬರುವಾ ತಿಳಿಸಿದ್ದಾರೆ.
ರಾಮ ರಾಜ್ಯ ಎನ್ನುವುದು ಉತ್ತರ ಆಡಳಿತದ ಮಾದರಿ. ಭಗವಾನ್ ರಾಮನ ನಾನಿಹಾಲ್ (ರಾಮನ ತಾಯಿಯ ಅಜ್ಜಿಯ ಊರು) ಆಗಿರುವುದು ನಮ್ಮ ಅದೃಷ್ಟ. ಜನವರಿ 22 ರಂದು ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಯನ್ನು ನೋಡಲು ಸಾಧ್ಯವಾಗುತ್ತಿರುವುದು ನಮ್ಮ ಅದೃಷ್ಟ ಎಂದು ತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲೂ ಮದ್ಯ ನಿಷೇಧ ಸಾಧ್ಯತೆ:ಅನೇಕ ಇತರ ರಾಜ್ಯಗಳ ಬಿಜೆಪಿ ಶಾಸಕರು ತಮ್ಮ ರಾಜ್ಯ ಸರ್ಕಾರದಿಂದ ಅದೇ ಬೇಡಿಕೆಯನ್ನು ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ರಾಮಮಂದಿರ ಪ್ರಾಣಪ್ರತಿಷ್ಠಾಪನೆ ದಿನ ರಾಜ್ಯದಲ್ಲಿ ಮದ್ಯ ಹಾಗೂ ಮಾಂಸ ಮಾರಾಟ ನಿಷೇಧ ಮಾಡುವ ನಿಟ್ಟಿನಲ್ಲಿ ಯೋಚನೆ ಮಾಡಬೇಕು ಎಂದು ಬಿಜೆಪಿ ಶಾಸಕ ರೋಹನ್ ಕದಮ್ ತಿಳಿಸಿದ್ದಾರೆ. ಈ ಕುರಿತಾಗಿ ಶಿಂಧೆಗೆ ಪತ್ರ ಬರೆದಿರುವ ಅವರು, "ಜನವರಿ 22 ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭವಿದೆ. ಇದು ಅತ್ಯಂತ ಮಂಗಳಕರ ಮತ್ತು ಪವಿತ್ರ ದಿನವಾಗಿದೆ. ಆದ್ದರಿಂದ ಆ ದಿನದಂದು ಮದ್ಯ ಮತ್ತು ಮಾಂಸವನ್ನು ನಿಷೇಧಿಸುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ. 500 ವರ್ಷಗಳ ನಂತರ ರಾಮನ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗುತ್ತಿದೆ, ರಾಮ ಮಂದಿರಕ್ಕಾಗಿ ಅನೇಕ ಕರಸೇವಕರು ಸಾವು ಕಂಡರು. ಹಲವರನ್ನು ಜೈಲಿಗೆ ಕಳುಹಿಸಲಾಯಿತು. ಈ ದಿನವು ದೀಪಾವಳಿ ರೀತಿ ಆಚರಿಸಬೇಕು. ಕೇವಲ ಮಹಾರಾಷ್ಟ್ರದಲ್ಲಿ ಮಾತ್ರವಲ್ಲದೆ ಇಡೀ ದೇಶಕ್ಕೆ ಈ ದಿನ ಅತ್ಯಂತ ಮಂಗಳಕರವಾಗಿದೆ' ಎಂದು ಬರೆದಿದ್ದಾರೆ.
ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ತಾಯಿ ಹೀರಾಬೆನ್ ಸಂದೇಶ ನೆನಪಿಸಿಕೊಂಡು ಭಾವುಕರಾದ ಪ್ರಧಾನಿ ಮೋದಿ!
ಇನ್ನು ಜಾರ್ಖಂಡ್ ರಾಜ್ಯದ ಬಿಜೆಪಿಯ ಮಾಜಿ ಅಧ್ಯಕ್ಷ ಮತ್ತು ರಾಜ್ಯಸಭಾ ಸಂಸದ ದೀಪಕ್ ಪ್ರಕಾಶ್ ಕೂಡ ಸಿಎಂ ಹೇಮಂತ್ ಸೊರೇನ್‌ಗೆ ಪತ್ರ ಬರೆದಿದ್ದು, ಜಾರ್ಖಂಡ್‌ನಲ್ಲಿ ಜನವರಿ 22 ರಂದು ಮದ್ಯ ಮಾರಾಟ ನಿಷೇಧ ದಿನ ಎಂದು ಘೋಷಣೆ ಮಾಡುವಂತೆ ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರ ಜನವರಿ 22 ರಂದು ರಾಜ್ಯದಲ್ಲಿ ಮದ್ಯ ಹಾಗೂ ಮಾಂಸ ಮಾರಾಟ ನಿಷೇಧ ದಿನವೆಂದು ಘೋಷಣೆ ಮಾಡಬೇಕು ಎಂದಿದ್ದಾರೆ.
ಅಯೋಧ್ಯಾ ರಾಮ ಮಂದಿರಕ್ಕೆ ಸೂರ್ಯ ತಿಲಕ ಯಂತ್ರ ದಾನವಾಗಿ ನೀಡಿದ ಬೆಂಗಳೂರು ಕಂಪನಿ!