ಉದ್ಯಮಿ ಮುಕೇಶ್‌ ಅಂಬಾನಿ ಮನೆ ಬಳಿ ಕಾರಿನಲ್ಲಿ ಸ್ಫೋಟಕ| ಹತ್ಯೆಗೀಡಾದ ಉದ್ಯಮಿ ಮನ್‌ಸುಖ್‌ ಹಿರೇನ್‌ ಕೂಡಾ ಸಹ ಭಾಗೀದಾರ

ಮುಂಬೈ(ಏ.08): ಉದ್ಯಮಿ ಮುಕೇಶ್‌ ಅಂಬಾನಿ ಮನೆ ಬಳಿ ಕಾರಿನಲ್ಲಿ ಸ್ಫೋಟಕ ಪತ್ತೆಯಾದ ಪ್ರಕರಣದಲ್ಲಿ, ಇತ್ತೀಚೆಗೆ ಹತ್ಯೆಗೀಡಾದ ಉದ್ಯಮಿ ಮನ್‌ಸುಖ್‌ ಹಿರೇನ್‌ ಕೂಡಾ ಸಹ ಭಾಗೀದಾರ ಎಂದು ಎನ್‌ಎಐ ಹೇಳಿದೆ.

ಪ್ರಕರಣ ಸಂಬಂಧ ಈಗಾಗಲೇ ಬಂಧಿತರಾಗಿರುವ ಪೊಲೀಸ್‌ ಅಧಿಕಾರಿ ಸಚಿನ್‌ ವಾಝೆ ಅವರನ್ನು ಇನ್ನಷ್ಟು ದಿನ ವಶಕ್ಕೆ ನೀಡುವಂತೆ ಕೋರಿ ಬುಧವಾರ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ ಎನ್‌ಐಎ ಅಲ್ಲಿ ಈ ಮಾಹಿತಿ ನೀಡಿದೆ.

ಸ್ಫೋಟಕ ಇಟ್ಟಪ್ರಕರಣದಲ್ಲಿ ಸಚಿನ್‌ ವಾಝೆ ಮತ್ತು ಮನ್‌ಸುಖ್‌ ಹಿರೇನ್‌ ನೇರವಾಗಿ ಭಾಗಿಯಾಗಿದ್ದು ಕಂಡುಬಂದಿದೆ. ಜೊತೆಗೆ ಘಟನೆಗೂ ಮುನ್ನ ವಾಝೆ ಬ್ಯಾಂಕ್‌ ಖಾತೆಯಿಂದ ಅವರ ಆಪ್ತರಿಗೆ ಭಾರೀ ಪ್ರಮಾಣದಲ್ಲಿ ಹಣ ವರ್ಗಾವಣೆಯಾಗಿದೆ.

ಈ ಹಣವನ್ನು ಜಿಲೆಟಿನ್‌ ಕಡ್ಡಿ ಖರೀದಿಸಲು ಬಳಸಲಾಗಿತ್ತೇ ಎಂಬುದರ ಬಗ್ಗೆ ಮಾಹಿತಿ ಖಚಿತಪಡಬೇಕಿದೆ ಎಂದು ಎನ್‌ಐಎ ತಿಳಿಸಿದೆ. ಜೊತೆಗೆ ಹಿರೇನ್‌ ಅವರನ್ನು ಹತ್ಯೆ ಮಾಡುವ ಕುರಿತು ಮಾ.2 ಮತ್ತು 3ರಂದು ಸಂಚು ರೂಪಿಸಲಾಗಿತ್ತು. ಮಾ.5ರಂದು ಹಿರೇನ್‌ ಅವರ ಶವ ಪತ್ತೆಯಾಗಿತ್ತು ಎಂದು ಎನ್‌ಐಎ ಕೋರ್ಟ್‌ಗೆ ಮಾಹಿತಿ ನೀಡಿದೆ.