ನವದೆಹಲಿ(ಫೆ.04): ಸಿಎಎ ವಿರೋಧಿ ಶಾಹೀನ್ ಬಾಗ್ ಪ್ರತಿಭಟನೆಯನ್ನು ಟೀಕಿಸಿರುವ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ, ಪಾಕಿಸ್ತಾನ ಪರ ಘೋಷಣೆ ಕೂಗುವ ರಾಷ್ಟ್ರ ವಿರೋಧಿ ಚಳವಳಿ ಎಂದು ಕಿಡಿಕಾರಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ತಿವಾರಿ, ಸಿಎಎ ವಿರೋಧಿ ಹೋರಾಟಗಾರರು ಪಾಕ್ ಪರ ಸಹಾನುಭೂತಿ ಉಳ್ಳವರು ಎಂಬುದನ್ನು ಪ್ರಧಾನಿ ಮೋದಿ ಮುಂದೆಯೇ ತಾವು ಹೇಳಬಯುಸುವುದಾಗಿ ಸ್ಪಷ್ಟಪಡಿಸಿದರು .

ಶಹೀನ್‌ಬಾಗ್‌ ಹೋರಾಟ ಕಾಂಗ್ರೆಸ್‌, ಆಪ್‌ ಕುತಂತ್ರ: ಮೋದಿ

ವಿರೋಧಿಗಳು ದೆಹಲಿಯನ್ನು ಅಸಹಿಷ್ಣು ಶಾಹೀನ್ ಬಾಗ್ ಆಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ದೆಹಲಿಯನ್ನು ಶಾಂತಿ ಬಾಗ್(ಶಾಂತಿಯ ಹೂದೋಟ)ನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ಯಾವುದು ಗೆಲ್ಲಲಿದೆ ಎಂಬುದು ಚುನಾವಣಾ ಫಲಿತಾಂಶ ದ ಬಳಿಕ ಗೊತ್ತಾಗಲಿದೆ ಎಂದು ತಿವಾರಿ ಹೇಳಿದ್ದಾರೆ.

ನಮ್ಮ ಪ್ರಧಾನಿ ಇಡೀ ವಿಶ್ವದಲ್ಲೇ ಭಾರತದ ಗೌರವವನ್ನು ವೃದ್ಧಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ವಿಪಕ್ಷಗಳು ನಮ್ಮ ನೆಲದಲ್ಲೇ ಭಾರತದ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿವೆ ಎಂದು ತಿವಾರಿ ಹರಿಹಾಯ್ದರು.

ಸಿಎಎ ವಿರೋಧಿಗಳು ಪಾಕ್ ಪರ ಹೋರಾಟಗಾರರಾಗಿದ್ದು, ಇದನ್ನು ಪ್ರಧಾನಿ ಮೋದಿ ಅವರ ಮುಂದೆಯೇ ಹೇಳಲು ಬಯುಸುವುದಾಗಿ ತಿವಾರಿ ಹೇಳಿದರು. ದೆಹಲಿಯನ್ನು ಶಾಂತಿಯ ಬಾಗ್’ನ್ನಾಗಿ ಪರಿವರ್ತಿಸಲು ಮೋದಿ ಅವರ ಆಶೀರ್ವಾದ ನಮಗೆ ಬೇಕು ಎಂದು ಅವರು ನುಡಿದರು.

ಇದಕ್ಕೂ ಮೊದಲು ಮಾತನಾಡಿದ ಪ್ರಧಾನಿ ಮೋದಿ, ಸಂವಿಧಾನ ಹಾಗೂ ರಾಷ್ಟ್ರಧ್ವಜದ ನೆರಳಲ್ಲಿ ರಾಷ್ಟ್ರ ವಿರೋಧಿ ಕೃತ್ಯ ಎಸಗಲಾಗುತ್ತಿದೆ ಎಂದು ಸಿಎಎ ವಿರೋಧಿ ಹೋರಾಟಗಾರರನ್ನು ತರಾಟೆಗೆ ತೆಗೆದುಕೊಂಡರು.