ನವದೆಹಲಿ[ಫೆ.04]: ದಿಲ್ಲಿಯ ಶಹೀನ್‌ಬಾಗ್‌, ಜಾಮಿಯಾ ನಗರ ಹಾಗೂ ಸೀಲಂಪುರದಲ್ಲಿ ತಿಂಗಳಿಂದ ನಡೆದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟವು ಕಾಕತಾಳೀಯವಲ್ಲ. ಬದಲಾಗಿ ರಾಷ್ಟ್ರೀಯ ಸೌಹಾರ್ದವನ್ನು ಹಾಳು ಮಾಡಲು ನಡೆಸಿರುವ ರಾಜಕೀಯ ತಂತ್ರದ ಒಂದು ಭಾಗ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.

ದಿಲ್ಲಿ ಚುನಾವಣೆ ಕುರಿತಾದ ಬಿಜೆಪಿ ರಾರ‍ಯಲಿಯಲ್ಲಿ ಮಾತನಾಡಿದ ಮೋದಿ ಈ ಮೇಲಿನಂತೆ ಹೇಳುವ ಮೂಲಕ ಹೋರಾಟದ ಹಿಂದೆ ಕಾಂಗ್ರೆಸ್‌ ಹಾಗೂ ಆಪ್‌ ಪರೋಕ್ಷವಾಗಿ ನಿಂತಿವೆ ಎಂದು ಬೊಟ್ಟು ಮಾಡಿದರು.

ಆಮ್‌ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್‌ ಜನರಲ್ಲಿ ತಪ್ಪು ತಿಳುವಳಿಕೆ ಮೂಡಿಸುತ್ತಿವೆ. ದಿಲ್ಲಿಯಲ್ಲಿ ನಡೆದಿರುವ ಹೋರಾಟ ಕಾಕತಾಳೀಯವಲ್ಲ. ಅವು ಪ್ರಾಯೋಗಿಕ ಹೋರಾಟಗಳು. ದೇಶದ ಸೌಹಾರ್ದ ಹಾಳು ಮಾಡಲುವ ತಂತ್ರಗಳು. ಹೀಗಾಗಿ ದಿಲ್ಲಿಯಲ್ಲಿ ಅರಾಜಕತೆ ನಿಲ್ಲಬೇಕು ಎಂದರೆ ಬಿಜೆಪಿಗೆ ಜನರು ಮತ ಚಲಾಯಿಸಬೇಕು. ಅರಾಜಕತೆಗೆ ದಿಲ್ಲಿ ಜನರು ಅವಕಾಶ ನೀಡಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಲ್ಲದೆ, 21ನೇ ಶತಮಾನದಲ್ಲಿ ದ್ವೇಷದ ರಾಜಕಾರಣ ನಡೆಯಲ್ಲ. ಕೇವಲ ಅಭಿವೃದ್ಧಿ ರಾಜಕಾರಣಕ್ಕೆ ಮನ್ನಣೆ ಇದೆ ಎಂದರು.