ನವದೆಹಲಿ(ಫೆ.12): ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿ, ಇದೀಗ ಆತ್ಮಾವಲೋಕನ ಮೂಡ್’ನಲ್ಲಿರುವಂತೆ ಕಂಡು ಬರುತ್ತಿದೆ.

ವಿಧಾನಸಭೆ ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದಾಗಿ ದೆಹಲಿ ಬಿಜೆಪಿ ಮುಖ್ಯಸ್ಥ  ಮನೋಜ್ ತಿವಾರಿ ಸ್ಪಷ್ಟಪಡಿಸಿದ್ದಾರೆ.

ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ಬಯಸಿರುವುದಾಗಿ ಮನೋಜ ತಿವಾರಿ ಪಕ್ಷದ ವರಿಷ್ಠರಿಗೆ ತಿಳಿಸಿದ್ದಾರೆ. 

ಆದರೆ ಇನ್ನೆರಡು ತಿಂಗಳಲ್ಲಿ ಪಕ್ಷದ ಆಂತರಿಕೆ ಚುನಾವಣೆಗಳು ನಡೆಯಲಿದ್ದು, ಆ ಬಳಿಕಷ್ಟೇ ರಾಜೀನಾಮೆ ಸ್ವೀಕರಿಸುವ ಕುರಿತು ಯೋಚಿಸುವುದಾಗಿ ಬಿಜೆಪಿ ಹೈಕಮಾಂಡ್ ಮನೋಜ್ ತಿವಾರಿ ಅವರಿಗೆ ಸ್ಪಷ್ಟಪಡಿಸಿದೆ.

ದೆಹಲಿ ‘ಕಮಲ’ ಮುಡಿಯದಿರಲು ಕಾರಣ: ಬೆರೆಸಲೇ ಇಲ್ಲ ಅಭಿವೃದ್ಧಿಯ ಹೂರಣ!

ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಆಂತರಿಕ ಚುನಾವಣೆಯನ್ನು ಇನ್ನೆರಡು ತಿಂಗಳಲ್ಲಿ ನಡೆಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ.

ಈ ಹಿನ್ನೆಲೆಯಲ್ಲಿ ಮನೋಜ್ ತಿವಾರಿ ಅವರ ರಾಜೀನಾಮೆ ಕುರಿತು ಆಂತರಿಕ ಚುನಾವಣೆ ಬಳಿಕವಷ್ಟೇ ನಿರ್ಧರಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ.

ಮನೋಜ್ ತಿವಾರಿ ನಾಯಕತ್ವದ ಮೇಲೆ ಹೈಕಮಾಂಡ್ ಕೂಡ ಅಷ್ಟೇನು ತೃಪ್ತಿ ಹೊಂದಿಲ್ಲ ಎಂದು ಹೇಳಲಾಗಿದ್ದು, ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಮತ್ತೋರ್ವ ಸಮರ್ಥ ನಾಯಕನಿಗೆ ಪಟ್ಟ ಕಟ್ಟುವ ಇರಾದೆ ಹೊಂದಿದೆ ಎಂಬ ಮಾತುಗಳು ಪಕ್ಷದ ಆಂತರಿಕ ವಲಯದಲ್ಲಿ ಕೇಳಿ ಬರುತ್ತಿವೆ.