ಪ್ರಧಾನಿ ಮೋದಿಯವರು 2025ನೇ ವರ್ಷವನ್ನು ಭಾರತದ ಹೆಮ್ಮೆಯ ವರ್ಷವೆಂದು ಬಣ್ಣಿಸಿದ್ದು, ಮಹಾಕುಂಭ, ರಾಮಮಂದಿರದಂತಹ ಘಟನೆಗಳನ್ನು ಸ್ಮರಿಸಿದರು. ದುಬೈನಲ್ಲಿರುವ 'ಕನ್ನಡ ಪಾಠಶಾಲೆ', ಮಣಿಪುರದ ಯುವಕನ ಸೌರಶಕ್ತಿ ಕ್ರಾಂತಿ, ಸ್ವಾತಂತ್ರ್ಯ ಹೋರಾಟಗಾರ್ತಿ ಪಾರ್ವತಿ ಗಿರಿ ಅವರ ಸೇವೆ ಸ್ಮರಿಸಿದರು.

ನವದೆಹಲಿ (ಡಿ.28): 2025ನೇ ವರ್ಷವು ಭಾರತದ ಪಾಲಿಗೆ ಅಪಾರ ಹೆಮ್ಮೆ ಮತ್ತು ಪ್ರಗತಿಯ ವರ್ಷವಾಗಿದೆ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ವರ್ಷದ ಆರಂಭದ 'ಮಹಾಕುಂಭ'ದಿಂದ ಹಿಡಿದು ಅಯೋಧ್ಯೆಯ 'ರಾಮ ಮಂದಿರ'ದವರೆಗೆ ನಡೆದ ಪ್ರಮುಖ ಘಟನೆಗಳನ್ನು ಸ್ಮರಿಸಿದರು. ಇದೇ ವೇಳೆ ಅನಿವಾಸಿ ಕನ್ನಡಿಗರ ಭಾಷಾ ಪ್ರೇಮವನ್ನು ಅವರು ವಿಶೇಷವಾಗಿ ಪ್ರಸ್ತಾಪಿಸಿದರು.

ಭಾರತದ ವಿಶಿಷ್ಟ ಪರಂಪರೆಗೆ ಜಗತ್ತೇ ಬೆರಗು!

2025ರಲ್ಲಿ ಭಾರತದ ನಂಬಿಕೆ, ಸಂಸ್ಕೃತಿ ಮತ್ತು ವಿಶಿಷ್ಟ ಪರಂಪರೆ ಇಡೀ ಜಗತ್ತಿಗೆ ದರ್ಶನವಾಯಿತು. ವರ್ಷದ ಆರಂಭದಲ್ಲಿ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದ ವೈಭವ ಇಡೀ ಜಗತ್ತನ್ನೇ ಅಚ್ಚರಿಗೊಳಿಸಿತು. ವರ್ಷದ ಕೊನೆಯಲ್ಲಿ ಅಯೋಧ್ಯೆಯ ರಾಮ ಮಂದಿರದ ಶಿಖರದ ಮೇಲೆ ನಡೆದ ಧ್ವಜಾರೋಹಣ ಸಮಾರಂಭ ಪ್ರತಿ ಭಾರತೀಯನಲ್ಲೂ ಹೆಮ್ಮೆಯ ಸಂಚಲನ ಮೂಡಿಸಿತು ಎಂದು ಮೋದಿ ಹೇಳಿದರು. ಅಲ್ಲದೆ, ಭಾರತೀಯರು ಸ್ಥಳೀಯವಾಗಿ ತಯಾರಿಸಿದ (Swadeshi) ವಸ್ತುಗಳನ್ನೇ ಖರೀದಿಸುತ್ತಿರುವುದು ದೇಶದ ಆರ್ಥಿಕತೆಗೆ ಹೊಸ ಶಕ್ತಿ ನೀಡಿದೆ ಎಂದರು.

ದುಬೈನಲ್ಲಿ ಅರಳಿದ 'ಕನ್ನಡ ಪಾಠಶಾಲೆ'

ಪ್ರಧಾನಿಯವರು ತಮ್ಮ ಭಾಷಣದಲ್ಲಿ ದುಬೈನಲ್ಲಿ ವಾಸಿಸುವ ಕನ್ನಡಿಗರ ಸಾಂಸ್ಕೃತಿಕ ಕಾಳಜಿಯನ್ನು ಮೆಚ್ಚಿಕೊಂಡರು. ದುಬೈನಲ್ಲಿರುವ ಕನ್ನಡ ಕುಟುಂಬಗಳು ತಮ್ಮ ಮಕ್ಕಳು ತಂತ್ರಜ್ಞಾನದಲ್ಲಿ ಬೆಳೆಯುತ್ತಿದ್ದಾರೆ, ಆದರೆ ಭಾಷೆಯಿಂದ ದೂರವಾಗುತ್ತಿದ್ದಾರೆಯೇ ಎಂದು ಯೋಚಿಸಿದವು. ಆ ಚಿಂತನೆಯಿಂದ ಹುಟ್ಟಿದ್ದೇ 'ಕನ್ನಡ ಪಾಠಶಾಲೆ'. ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಇಲ್ಲಿ ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ಕಲಿಸಲಾಗುತ್ತಿದೆ. ಇದು ಕೇವಲ ತರಗತಿಯಲ್ಲ, ಸಾಂಸ್ಕೃತಿಕ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಅವರು ಶ್ಲಾಘಿಸಿದರು.

ಮಣಿಪುರದ ಯುವಕನ ಸೌರಶಕ್ತಿ ಕ್ರಾಂತಿ

ಇಚ್ಛಾಶಕ್ತಿ ಇದ್ದಲ್ಲಿ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಮಣಿಪುರದ ಮೊಯಿರಾಂಗ್ಥೆಮ್ ಸೇಠ್ ಜಿ ಅವರ ಉದಾಹರಣೆ ನೀಡಿದ ಪ್ರಧಾನಿ ಮೋದಿ ಅವರು, ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿದ್ದ ಮಣಿಪುರದ ದೂರದ ಹಳ್ಳಿಯಲ್ಲಿ ಸೌರಶಕ್ತಿಯ ಮೂಲಕ ಮೊಯಿರಾಂಗ್ಥೆಮ್ ನೂರಾರು ಮನೆಗಳಿಗೆ ಬೆಳಕು ನೀಡಿದ್ದಾರೆ. ಇವರ ಪ್ರಯತ್ನದಿಂದ ಇಂದು ಅಲ್ಲಿನ ಆರೋಗ್ಯ ಕೇಂದ್ರಗಳಿಗೂ ವಿದ್ಯುತ್ ಲಭ್ಯವಾಗಿದೆ. ಯುವಶಕ್ತಿಯೇ ಭಾರತದ ಅತಿ ದೊಡ್ಡ ಶಕ್ತಿ ಎಂದು ಪ್ರಧಾನಿ ಹೇಳಿದರು.

ಪಾರ್ವತಿ ಗಿರಿ: ಪಶ್ಚಿಮ ಒಡಿಶಾದ 'ಮದರ್ ತೆರೇಸಾ'

ಸ್ವಾತಂತ್ರ್ಯ ಹೋರಾಟಗಾರ್ತಿ ಪಾರ್ವತಿ ಗಿರಿ ಅವರ ಜನ್ಮ ಶತಮಾನೋತ್ಸವದ ಬಗ್ಗೆ ಮಾತನಾಡಿದ ಮೋದಿ, 16ನೇ ವಯಸ್ಸಿನಲ್ಲೇ ಕ್ವಿಟ್ ಇಂಡಿಯಾ ಚಳವಳಿಗೆ ಧುಮುಕಿದ್ದ ಪಾರ್ವತಿ ಗಿರಿ ಅವರು ಸ್ವಾತಂತ್ರ್ಯಾನಂತರ ತಮ್ಮ ಬದುಕನ್ನು ಬುಡಕಟ್ಟು ಜನರ ಕಲ್ಯಾಣಕ್ಕೆ ಮುಡಿಪಾಗಿಟ್ಟರು. ಅವರನ್ನು 'ಪಶ್ಚಿಮ ಒಡಿಶಾದ ಮದರ್ ತೆರೇಸಾ' ಎಂದೇ ಕರೆಯಲಾಗುತ್ತದೆ. 2026ರ ಜನವರಿಯಲ್ಲಿ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸಲಾಗುವುದು ಎಂದು ಮಾಹಿತಿ ನೀಡಿದರು.