ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರು ಅಸ್ಸಾಂನಿಂದ ರಾಜ್ಯಸಭಾ ಸದಸ್ಯರಾಗಿದ್ದ ಸಮಯದಲ್ಲಿ ಅಲ್ಲಿನ ಅಂದಿನ ಮುಖ್ಯಮಂತ್ರಿಗಳ ನಿವಾಸದಲ್ಲೇ ಬಾಡಿಗೆಗೆ ಇದ್ದರು ಎಂಬ ಅಚ್ಚರಿಯ ಮಾಹಿತಿ ಬಹಿರಂಗವಾಗಿದೆ. 

ಗುವಾಹಟಿ (ಡಿ.28): ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರು ಅಸ್ಸಾಂನಿಂದ ರಾಜ್ಯಸಭಾ ಸದಸ್ಯರಾಗಿದ್ದ ಸಮಯದಲ್ಲಿ ಅಲ್ಲಿನ ಅಂದಿನ ಮುಖ್ಯಮಂತ್ರಿಗಳ ನಿವಾಸದಲ್ಲೇ ಬಾಡಿಗೆಗೆ ಇದ್ದರು ಎಂಬ ಅಚ್ಚರಿಯ ಮಾಹಿತಿ ಬಹಿರಂಗವಾಗಿದೆ. ಈ ಕುರಿತು ಅಂದು ಅಸ್ಸಾಂ ಸಿಎಂ ಆಗಿದ್ದ ಹಿತೇಶ್ವರ್‌ ಸೈಕಿಯಾ ಅವರ ಪತ್ನಿ ಹೇಮೋಪ್ರವಾ ಮಾತನಾಡಿ, ‘ಪ್ರಧಾನಿಯಾಗಿದ್ದ ನರಸಿಂಹ ರಾವ್‌ ಅವರು ಸಿಂಗ್‌ ಅವರನ್ನು ರಾಜಕೀಯಕ್ಕೆ ಕರೆತಂದು ವಿತ್ತಸಚಿವರನ್ನಾಗಿ ಮಾಡಲು ಬಯಸಿದಾಗ ಅವರು ಈ ವಿಷಯವನ್ನು ನನ್ನ ಪತಿ ಸೈಕಿಯಾರ ಬಳಿ ಚರ್ಚಿಸಿದ್ದರು. ಆಗ ಸೈಕಿಯಾ, ನಿಮ್ಮನ್ನು ರಾಜ್ಯಸಭೆಗೆ ಕಳಿಸುವ ಸಾಧ್ಯೆ ಇದೆ ಎಂದಿದ್ದರು. 

ಆದರೆ ಸಿಂಗ್‌ ಅಸ್ಸಾಂನವರಲ್ಲದ ಕಾರಣ ಹಲವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಅವರಿಗೆ ರಾಜ್ಯದಲ್ಲಿ ವಿಳಾಸವೇ ಇಲ್ಲ ಎಂಬ ನೆಪವೊಡ್ಡಿ ಕೋರ್ಟ್‌ ಕದವನ್ನೂ ತಟ್ಟಿದ್ದರು. ಆಗಲೇ ಅವರಿಗೆ ನಾವು 2ಬಿಎಹ್‌ಕೆ ಮನೆಯನ್ನು 700 ರು.ಗೆ ಬಾಡಿಗೆಗೆ ನೀಡಿದ್ದೆವು. ಅಸ್ಸಾಂ ಹಾಗೂ ತಮ್ಮ ನಡುವೆ ನಂಟು ಬೆಸೆದದ್ದೇ ಆ ಮನೆ ಎಂಬ ಕಾರಣಕ್ಕೆ ಅದನ್ನೇ ಅವರು ಶಾಶ್ವತ ವಿಳಾಸವಾಗಿಸಿಕೊಂಡರು’ ಎಂದರು. ಸಿಂಗ್‌ರ ಉದಾರತೆ ಹಾಗೂ ಹೃದಯ ವೈಶಾಲ್ಯತೆಯನ್ನು ಬಣ್ಣಿಸಿದ ಸೈಕಿಯಾ, ‘ಪ್ರಧಾನಿಯಾದ ಬಳಿಕವೂ ಅವರು ಚೆಕ್‌ ಮೂಲಕ ಬಾಡಿಗೆ ಪಾವತಿಸುತ್ತಿದ್ದರು. ಒಮ್ಮೆ ನಾವು ಅದನ್ನು ಬಳಸಿ ನಗದು ಪಡೆಯದೇ ಇದ್ದಾಗ ಇನ್ನೊಂದು ಚೆಕ್‌ ಕಳಿಸಿದ್ದರು’ ಎಂದರು.

ಸಿಂಗ್‌ ಪಾತ್ರದಲ್ಲಿ ನಟಿಸುತ್ತ ಅವರ ಗುಣ ಅಳವಡಿಸಿಕೊಂಡೆ: ‘ದ ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಚಿತ್ರದಲ್ಲಿ ಡಾ. ಮನಮೋಹನ ಸಿಂಗ್‌ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಅನುಪಮ್‌ ಖೇರ್‌ ಅವರು ಸೀಂಗ್‌ರ ಸಾವಿಗೆ ಸಂತಾಪ ಸೂಚಿಸಿದ್ದು, ಅವರ ಬಗೆಗಿನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಖೇರ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಸುದೀರ್ಘ ವಿಡಿಯೋದಲ್ಲಿ, ‘ರಾಜಕೀಯ ಸೇರಿದಂತೆ ಹಲವು ಕಾರಣಗಳಿಂದಾಗಿ ಮೊದಲು ಈ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದೆ. ಆದರೆ ನಂತರ ಈ ಪಾತ್ರದಲ್ಲಿ ಮನಃಪೂರ್ವಕವಾಗಿ ಅಭಿನಯಿಸಿದೆ. ಈ ವೇಳೆ ಅವರ ಕೆಲ ಗುಣಗಳನ್ನೂ ಅಳವಡಿಸಿಕೊಂಡೆ. ಆ ಚಿತ್ರ ವಿವಾದಾತ್ಮಕವಾಗಿರಬಹುದು, ಆದರೆ ನೀಲಿ ಪೇಟದಲ್ಲಿ ಕಂಗೊಳಿಸಿದ ಆ ವ್ಯಕ್ತಿಯಲ್ಲ’ ಎಂದಿದ್ದಾರೆ.

1991ರಲ್ಲಿ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್‌ ಅವರು ಮಲಗಿದ್ದ ಸಿಂಗ್‌ ಎಬ್ಬಿಸಿ ಮಂತ್ರಿ ಮಾಡಿದರು!

ದೇಶ ಬಚಾವ್‌ ಮಾಡಿದ್ದು ಸಿಂಗ್: ದೇಶ ಆರ್ಥಿಕವಾಗಿ ಭೀಕರ ಪರಿಸ್ಥಿತಿಯಲ್ಲಿದ್ದಾಗ ಹಣಕಾಸು ಸಚಿವರಾಗಿ ಬಂದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಸಮರ್ಥವಾಗಿ ಕೆಲಸ ಮಾಡಿ ಅರ್ಥ ವ್ಯವಸ್ಥೆಯನ್ನು ಸರಿದಾರಿಗೆ ತಂದರು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದೇಶವನ್ನು ಪಾರು ಮಾಡಿ ಗೌರವ ಉಳಿಸಿದರು ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಬಣ್ಣಿಸಿದ್ದಾರೆ. ಜೆಡಿಎಸ್ ಕಚೇರಿ ಜೆ.ಪಿ. ಭವನದಲ್ಲಿ ನಡೆದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಶ್ರದ್ಧಾಂಜಲಿ ಸಮರ್ಪಣೆ ಸಭೆಯಲ್ಲಿ ಮಾತನಾಡಿದ ಅವರು, ಮನಮೋಹನ್‌ ಸಿಂಗ್‌ ನಿಧನ ನನಗೆ ಬಹಳ ನೋವುಂಟು ಮಾಡಿದೆ. 1991ರಲ್ಲಿ ಲೋಕಸಭೆಯಲ್ಲಿ ಮನಮೋಹನ್‌ ಸಿಂಗ್‌ ಅವರನ್ನು ನೋಡಿದ್ದು, ನಾನು ಆಗ ಮೊದಲ ಬಾರಿಗೆ ಲೋಕಸಭೆಗೆ ಹೋಗಿದ್ದೆ. ಪಿ.ವಿ.ನರಸಿಂಹ ರಾವ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದರು. ನಮ್ಮ ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಸರಿಪಡಿಸಲು ಅನೇಕ ಪ್ರಯತ್ನಗಳನ್ನು ಮಾಡಿದರು ಎಂದು ಹೇಳಿದರು. ಈ ವೇಳೆ ಅವರು ಗದ್ಗದಿತರಾದರು.