ಹಿಂಸಾಚಾರದಲ್ಲಿ ಬೆಂದು ಹೋಗಿರುವ ಮಣಿಪುರದಲ್ಲಿ ಇದೀಗ ರಾಜಕೀಯ ಅಸ್ಥಿರತೆ ಕಾಡಲು ಆರಂಭಿಸಿದೆ. ಎನ್‌ಡಿಎ ಮೈತ್ರಿ ಕೂಟದ ಕುಕಿ ಪೀಪಲ್ಸ್ ಅಲಯನ್ಸ್ ಪಕ್ಷ ಇದೀಗ ಬಿರೇನ್ ಸಿಂಗ್ ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆದಿದೆ. 

ಇಂಫಾಲ(ಆ.06) ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಮತ್ತೆ 15 ಮನೆಗಳಿಗೆ ಬೆಂಕಿ ಹಚ್ಚಿಲಾಗಿದ್ದು, ಹಲವರು ಮೃತಪಟ್ಟಿದ್ದಾರೆ. ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಮುಖ್ಯಮಂತ್ರಿ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಸತತ ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲೇ ಇದೀಗ ರಾಜಕೀಯ ಅಸ್ಥಿರತೆ ಎದುರಾಗಿದೆ. ಬಿರೇನ್ ಸಿಂಗ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಕುಕಿ ಪೀಪಲ್ಸ್ ಅಲಯನ್ಸ್ ಪಕ್ಷ ವಾಪಸ್ ಪಡೆದಿದೆ. 

ಮಣಿಪುರ ಸರ್ಕಾರ ಕಳೆದ ಕೆಲ ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರ ನಿಯಂತ್ರಿಸಲು ಸಂಪೂರ್ಣ ವಿಫಲಗೊಂಡಿದೆ. ಸಮುದಾಯಗಳ ನಡುವೆ ಸೌಹಾರ್ಧತೆ ಬೆಳೆಸುವಲ್ಲಿ ವಿಫಲವಾಗಿದೆ. ಹೀಗಾಗಿ ಇದೀಗ ಕೆಪಿಎ ಪಕ್ಷ ಮಹತ್ವದ ನಿರ್ಧಾರ ಪ್ರಕಟಿಸಿದೆ. ಈ ಕುರಿತು ಮಣಿಪುರ ರಾಜ್ಯಪಾಲರಿಗೆ ಪತ್ರ ಬರೆದಿರುವ ಕೆಪಿಎ ಪಕ್ಷ, ಹಲವು ಸುತ್ತಿನ ಮಾತುಕತೆ, ಚರ್ಚೆ ಬಳಿಕ ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆಯುವುದಾಗಿ ಹೇಳಿದೆ.

ಮಣಿಪುರದಲ್ಲಿ ಮತ್ತೆ ಹಿಂಸೆ: 3 ಮಂದಿ ಹತ್ಯೆ: ತಂದೆ, ಮಗ ಸೇರಿ 3 ಮೈತೇಯಿಗಳ ಕಗ್ಗೊಲೆ

ಮಣಿಪುರದ ಪ್ರಸಕ್ತ ಮುಖ್ಯಮಂತ್ರಿ ಬಿರೇನ್ ಸಿಂಗ್ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಕುಕಿ ಪೀಪಲ್ಸ್ ಅಲಯನ್ಸ್ ಪಕ್ಷ ವಾಪಸ್ ಪಡೆಯುತ್ತಿದೆ. ಇನ್ನು ಮುಂದೆ ಸರ್ಕಾರದ ಕಾರ್ಯಚಟುವಟಿಕೆಯಲ್ಲಿ ಕೆಪಿಎ ಪಕ್ಷ ಭಾಗವಾಗಿರುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದೆ. ಕೆಪಿಎ ಪಕ್ಷದ ಅಧ್ಯಕ್ಷ ತೊಂಗ್‌ಮಾಂಗ್ ಹಾವೋಕಿಪ್ ಸಹಿ ಮಾಡಿರುವ ಈ ಪತ್ರವನ್ನು ರಾಜ್ಯಪಾಲರಿಗೆ ಕಳುಹಿಸಲಾಗಿದೆ.

2022ರ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಕೆಪಿಎ ಪಕ್ಷ 2 ಸ್ಥಾನ ಗೆದ್ದಿದೆ. ಬಿಜೆಪಿ ಅತೀ ದೊಡ್ಡ ಪಕ್ಷವಾಗಿ 32 ಸ್ಥಾನ ಗೆದ್ದಿದೆ. ಇನ್ನು ಐವರು ಎನ್‌ಪಿಎಫ್ ಪಕ್ಷದ ಶಾಸಕರು ಹಾಗೂ ಮೂವರು ಪಕ್ಷೇತರ ಶಾಸಕರ ಬೆಂಬಲ ಬಿಜೆಪಿ ಸರ್ಕಾರಕ್ಕಿದೆ. 

ಶಾಲೆಗೆ ಹೋದವರು ಮರಳಿ ಬರಲೇ ಇಲ್ಲ, ಮಣಿಪುರದಲ್ಲಿ ಮೂರೇ ತಿಂಗಳಲ್ಲಿ 30 ಮಂದಿ ನಾಪತ್ತೆ!

ಕಳೆದ 3 ತಿಂಗಳುಗಳಿಂದ ಜನಾಂಗೀಯ ಹಿಂಸಾಚಾರಕ್ಕೆ ತುತ್ತಾಗಿರುವ ಮಣಿಪುರದಲ್ಲಿ ಮತ್ತೆ ಘರ್ಷಣೆ ನಡೆದಿದ್ದು ಪಶ್ಚಿಮ ಇಂಫಾಲ್‌ ಜಿಲ್ಲೆಯಲ್ಲಿ 15 ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು, ಓರ್ವನ ಮೇಲೆ ಗುಂಡು ಹಾರಿಸಲಾಗಿದೆ.ಶನಿವಾರ ಸಂಜೆ ಇಲ್ಲಿನ ಲಾಂಗೋಲ್‌ ಗ್ರಾಮದಲ್ಲಿ ಗುಂಪೊಂದು ಏಕಾಏಕಿ ದಾಳಿ ನಡೆಸಿ 15 ಮನೆಗಳಿಗೆ ಬೆಂಕಿ ಹಚ್ಚಿದೆ. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಗುಂಪನ್ನು ಚದುರಿಸಲು ಹಲವು ಸುತ್ತು ಆಶ್ರವಾಯು ಸಿಡಿಸಿದ್ದಾರೆ. ಇದೇ ವೇಳೆ 45 ವರ್ಷದ ವ್ಯಕ್ತಿಯೊಬ್ಬನ ಮೇಲೆ ಗುಂಡು ಹಾರಿಸಲಾಗಿದ್ದು ಆತ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇನ್ನು ಭಾನುವಾರ ಪರಿಸ್ಥಿತಿ ಸುಧಾರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಪೂರ್ವ ಇಂಫಾಲ್‌ ಜಿಲ್ಲೆಯಲ್ಲೂ ಹಿಂಸಾಚಾರ ನಡೆದಿದ್ದು ಇಲ್ಲಿನ ದೊಡ್ಡ ವಾಣಿಜ್ಯ ಸಂಸ್ಥೆ ಹಾಗೂ ಸಮೀಪದ ಮೂರು ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು ಅಗ್ನಿಶಾಮಕ ದಳಗಳು ಬೆಂಕಿ ನಂದಿಸಿವೆ.